ಮೇಲ್ಜಾತಿಯರ ವಿರೋಧ: ಕಾಡಿನಲ್ಲೇ ವೃದ್ಧೆಯ ಅಂತ್ಯಕ್ರಿಯೆ ನಡೆಸಿದ ದಲಿತ ಕುಟುಂಬ

Update: 2019-04-13 16:31 GMT
ಸಾಂದರ್ಭಿಕ ಚಿತ್ರ

 ಶಿಮ್ಲಾ,ಎ.13: ಮೇಲ್ಜಾತಿಯ ಕೆಲವು ಮಂದಿ, ತಮಗೆ ಗ್ರಾಮದ ಸ್ಮಶಾನವನ್ನು ಬಳಸಿಕೊಳ್ಳಲು ಅವಕಾಶ ನೀಡದೇ ಇದ್ದುದರಿಂದ, ದಲಿತ ಕುಟುಂಬವೊಂದು ಬೇರೆ ದಾರಿ ಕಾಣದೆ ವೃದ್ಧೆಯೊಬ್ಬರ ಮೃತದೇಹದ ಅಂತ್ಯಕ್ರಿಯೆಯನ್ನು ಕಾಡಿನಲ್ಲೇ ನಡೆಸಿದ ಹೃದಯವಿದ್ರಾವಕ ಘಟನೆ ಹಿಮಾಚಲಪ್ರದೇಶದ ಕುಲು ಜಿಲ್ಲೆಯ ಫೋಜಲ್ ಕಣಿವೆಯಲ್ಲಿ ನಡೆದಿದೆ.

  ಧಾರಾಗ್ರಾಮದ ನಿವಾಸಿಯಾದ ಈ ದಲಿತ ಮಹಿಳೆಯು, ದೀರ್ಘಕಾಲದಿಂದ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಗುರುವಾರ ನಿಧನರಾಗಿದ್ದರು. ಮಹಿಳೆಯ ಶವಯಾತ್ರೆಯು ಗ್ರಾಮದ ಸಾರ್ವಜನಿಕ ಸ್ಮಶಾನವನ್ನು ತಲುಪಿದಾಗ ಕೆಲವು ಮೇಲ್ಜಾತಿಯವರು ಧಾವಿಸಿಬಂದು, ಶವದ ಅಂತ್ಯಕ್ರಿಯೆ ಅಲ್ಲಿ ನಡೆಸದಂತೆ ತಾಕೀತು ಮಾಡಿದರೆಂದು ಆಕೆಯ ಮೊಮ್ಮಗ್ ತಪ್‌ರಾಮ್ ಆಪಾದಿಸಿದ್ದಾರೆ.

   ‘‘ಶವವನ್ನು ಈ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಿದಲ್ಲಿ, ದೇವತೆ ಕ್ರೋಧಗೊಳ್ಳುವುದು. ಆಗ ಏನಾದರೂ ಅನಾಹುತ ಸಂಭವಿಸಿದಲ್ಲಿ ನಾವು ಜವಾಬ್ದಾರಲ್ಲವೆಂದು ಮೇಲ್ಜಾತಿಯವರು ತಮಗೆ ಬೆದರಿಕೆ ಹಾಕಿದ್ದರು. ಹೀಗಾಗಿ ನಾವು ಮೃತದೇಹವನ್ನು ಕಾಡಿಗೆ ಕೊಂಡೊಯ್ದು ಅಂತ್ಯಸಂಸ್ಕಾರ ಮಾಡಿದೆವು ’’ ಎಂದು ಅಂತ್ಯಕ್ರಿಯೆಯ ವೇಳೆ ತಪ್‌ರಾಮ್ ಹೇಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೃದ್ಧೆಯ ಅಂತ್ಯಸಂಸ್ಕಾರವನ್ನು ಕಾಡಿನಲ್ಲಿ ದಹಿಸುವ ದೃಶ್ಯವು ಕೂಡಾ ವಿಡಿಯೋದಲ್ಲಿ ಕಂಡುಬಂದಿದೆ.

ತದನಂತರ, ಕುಲು ಉಪಕಮೀಶನರ್ ಯೂನಸ್ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ, ಘಟನೆಯ ಬಗ್ಗೆ ಪರಿಶೀಲನೆ ನಡೆಸುವಂತೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಹಾಗೂ ಡಿಎಸ್ಪಿ ಅವರಿಗೆ ಸೂಚನೆ ನೀಡಲಾಗಿದೆ’’ ಎಂದು ತಿಳಿಸಿದ್ದಾರೆ.

‘‘ವಿಡಿಯೋದಲ್ಲಿರುವ ವ್ಯಕ್ತಿಯ ಗುರುತನ್ನು ದೃಢಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಆದಾಗ್ಯೂ, ಈವರೆಗೆ ಯಾರೂ ಕೂಡಾ ದೂರು ನೀಡಲು ಮುಂದೆ ಬಂದಿಲ್ಲ. ಘಟನೆಗೆ ಸಂಬಂಧಿಸಿ ನಿಖರ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಲಾಗುತ್ತಿದೆ’’ ಎಂದು ಜಿಲ್ಲಾಧಿಕಾರಿ ಯೂನಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News