ಈಶ್ವರಪ್ಪ ಬಾಯಿ ಸ್ವಚ್ಛ ಮಾಡಲು ಹಾರ್ಪಿಕ್, ಪೊರಕೆ ಪೂರೈಕೆ: ಕಾಂಗ್ರೆಸ್ ಮುಖಂಡ ರೂಬೆನ್ ಮೊಸೆಸ್

Update: 2019-04-13 18:26 GMT

ಚಿಕ್ಕಮಗಳೂರು, ಎ.13: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಅಲ್ಪಸಂಖ್ಯಾತರ ಬಗ್ಗೆ ತುಚ್ಛವಾಗಿ ಮಾತನಾಡಿರುವುದನ್ನು ಗಮನಿಸಿಯೂ ಬಿಜೆಪಿ ವರಿಷ್ಠರು ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ಅವರ ಬಾಯಿ ಸ್ವಚ್ಛ ಮಾಡಿಕೊಳ್ಳಲು ಹಾರ್ಪಿಕ್ ಮತ್ತು ಕಡ್ಡಿ ಪೊರಕೆಯನ್ನು ಕೋರಿಯರ್ ಮೂಲಕ ಕಳಿಸಲು ತೀರ್ಮಾನಿಸಿದ್ದೇವೆ ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ರೂಬೆನ್ ಮೊಸಸ್ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪನವರು ಅಲ್ಪಸಂಖ್ಯಾತರ ಬಗ್ಗೆ ತುಚ್ಛವಾಗಿ ಮಾತನಾಡಿದರೆ ಹಿಂದೂಗಳ ಮತಪಡೆಯಲು ಸಾಧ್ಯ ಎಂದು ಭಾವಿಸಿದಂತಿದೆ. ಈ ಕಾರಣಕ್ಕೆ ಅವರು ಚುನಾವಣೆ ಸಂದರ್ಭದಲ್ಲಿ ‘ಕ್ರಿಶ್ಚಿಯನ್ನರು ದೇಶಕ್ಕೆ ನಿಷ್ಟರಲ್ಲ. ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಕೋಟಾದಡಿ ಟಿಕೆಟ್ ಹಂಚಿಕೆಯಾಗ ಕೂಡದು. ದೇಶಕ್ಕೆ ನಿಷ್ಠರಾಗಿರುವವರಿಗೆ ಮಾತ್ರ ಟಿಕೆಟ್ ನೀಡಬೇಕು’ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಅಲ್ಪಸಂಖ್ಯಾತರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ರೂಬೆನ್ ಮೊಸಸ್ ಆರೋಪಿಸಿದ್ದಾರೆ.

ಬಿಜೆಪಿ ರಾಜಕೀಯ ಲಾಭ ಪಡೆಯುತ್ತಿರುವುದೇ ಅಲ್ಪಸಂಖ್ಯಾತರಿಂದ. ಜಾತಿ, ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ ಬಿಜೆಪಿಯನ್ನು ಬೆಳೆಸಿದೆ. ಚುನಾವಣೆ ಸಂದರ್ಭ ಈ ಸಮುದಾಯಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ವರಿಷ್ಠರು ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ಈಶ್ವರಪ್ಪ ಅವರ ಬಾಯಿ ಸ್ವಚ್ಛ ಮಾಡಿಕೊಳ್ಳಲು ಹಾರ್ಪಿಕ್ ಮತ್ತು ಕಡ್ಡಿ ಪೊರಕೆಯನ್ನು ಕೋರಿಯರ್ ಮೂಲಕ ಕಳಿಸಲು ತೀರ್ಮಾನಿಸಿದ್ದೇವೆ ಎಂದರು.

ಕ್ರಿಶ್ಚಿಯನ್ನರು ದೇಶಕ್ಕೆ ನಿಷ್ಠರಾಗಿದ್ದಾರೆಯೇ ಹೊರತು, ಬಿಜೆಪಿಗೆ ನಿಷ್ಠರಲ್ಲ. ಆದ್ದರಿಂದ ಮೇಲಿಂದ ಮೇಲೆ ಕ್ರೈಸ್ತರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಕುಚೋದ್ಯದ ಮಾತು ಆಡುತ್ತಿರುವ ಬಾಯಿ ಹತೋಟಿಯಲ್ಲಿ ಇಟ್ಟುಕೊಳ್ಳದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಹೊಲಸು ಬಾಯಿ ಸ್ವಚ್ಛ ಮಾಡಿಕೊಳ್ಳಲು ಹಾರ್ಪಿಕ್ ಮತ್ತು ಕಡ್ಡಿಪೊರಕೆಯನ್ನು ಕೊರಿಯರ್ ಮೂಲಕ ಅವರಿಗೆ ಕಳಿಸಿಕೊಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕ್ರಿಶ್ಚಿಯನ್ನರು ಶಾಂತಿ ಪ್ರಿಯರ, ಸಮಾಜಸೇವೆ ತಮ್ಮ ಗುರಿಯಾಗಿದೆ. ಶಿಕ್ಷಣ, ಆರೋಗ್ಯ, ಸಮಾಜಸೇವೆಯಲ್ಲಿ ಸಮುದಾಯ ತೊಡಗಿಸಿಕೊಂಡಿದೆ ಎಂದು ನುಡಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಸುರೇಖಾ ಸಂಪತ್‌ರಾಜ್ , ಸಿಲ್ವಸ್ಟರ್ ಉಪಸ್ಥಿತರಿದ್ದರು.

ಶಾಸಕ ಸಿ.ಟಿ.ರವಿ ಅವರು ಇತ್ತೀಚೆಗೆ ಲೋಕಸಭಾ ಚುನಾವಣೆ ಪ್ರಚಾರ ಭಾಷಣದ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅವರ ಹೇಳಿಕೆಗಳು ಅಲ್ಪಸಂಖ್ಯಾತರ ಭಾವನೆಗೆ ಧಕ್ಕೆ ತಂದಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಮೂರನೇ ದರ್ಜೆಯ ಮಾತನಾಡಿರುವುದು ನಾಚಿಕೆಗೇಡಿನ ಸಂಗತಿ. ಈಶ್ವರಪ್ಪ, ಸಿ.ಟಿ.ರವಿ ಅವರ ಹೇಳಿಕೆಗಳಿಂದ ಬಿಜೆಪಿಯ ಸಂಸ್ಕೃತಿ ಜಗಜ್ಜಾಹೀರಾಗುತ್ತಿದೆ. ಚುನಾವಣೆಯಲ್ಲಿ ಇವರ ಪಕ್ಷಗಳಿಗೆ ಮತದಾರರು ಬುದ್ಧಿ ಕಲಿಸಲಿದ್ದಾರೆ.
-ರೂಬೆನ್ ಮೊಸೆಸ್, ಬ್ಲಾಕ್ ಕಾಂಗ್ರೆಸ್ ವಕ್ತಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News