ಜಗತ್ತಿನ ಅತಿ ದೊಡ್ಡ ವಿಮಾನದ ಪರೀಕ್ಷಾ ಹಾರಾಟ ಯಶಸ್ವಿ

Update: 2019-04-14 18:16 GMT

ಕ್ಯಾಲಿಫೋರ್ನಿಯ: ಆರು ಬೋಯಿಂಗ್ ಇಂಜಿನ್‌ಗಳುಳ್ಳ ಜಗತ್ತಿನ ಅತೀದೊಡ್ಡ ವಿಮಾನದ ಪ್ರಥಮ ಪರೀಕ್ಷಾರ್ಥ ಹಾರಾಟ ಶನಿವಾರ ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಮೈಕ್ರೊಸಾಫ್ಟ್ ಸಹಸಂಸ್ಥಾಪಕ ಪೌಲ್ ಆ್ಯಲೆನ್ ಸ್ಥಾಪಿಸಿದ ಸ್ಟ್ರಾಟೊಲಾಂಚ್ ಕಂಪೆನಿ ನಿರ್ಮಿಸಿರುವ ಈ ವಿಮಾನವನ್ನು ಬಾಹ್ಯಾಕಾಶಕ್ಕೆ ರಾಕೆಟ್‌ಗಳನ್ನು ಸಾಗಿಸಲು ಮತ್ತು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲೂ ಬಳಸಬಹುದಾಗಿದೆ ಎಂದು ಕಂಪೆನಿ ತಿಳಿಸಿದೆ. ಕ್ಯಾಲಿಫೋರ್ನಿಯದ ಮೊಹವಿ ಮರುಭೂಮಿಯ ಮೇಲೆ ಬೃಹತ್ ವಿಮಾನ ಸುಮಾರು ಎರಡು ಗಂಟೆಗಳ ಕಾಲ ಹಾರಾಟ ನಡೆಸಿತು. ಸ್ಟ್ರಾಟೊಲಾಂಚ್ ವಿಮಾನಗಳ ಆವಿಷ್ಕಾರದಿಂದ ರಾಕೆಟ್ ಉಡಾವಣೆಯ ವೆಚ್ಚ ಗಮನಾರ್ಹವಾಗಿ ಕಡಿಮೆಯಾಗಲಿದೆ ಎಂದು ಅಭಿಪ್ರಾಯಿಸಲಾಗಿದೆ. ಈ ವಿಮಾನಗಳನ್ನು ಹಾರಿಸಲು ಕೇವಲ ಉದ್ದನೆಯ ರನ್‌ವೇ ಮಾತ್ರ ಅಗತ್ಯವಿರುವ ಕಾರಣ ಭೂಮಿಯ ಮೇಲಿಂದ ರಾಕೆಟ್‌ಗಳನ್ನು ಆಕಾಶಕ್ಕೆ ಹಾರಿಸಲು ತಗಲುವ ಇಂಧನ ಹಾಗೂ ಇತರ ಸಾಧನಗಳ ವೆಚ್ಚ ಉಳಿತಾಯವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸ್ಟ್ರಾಟೊಲಾಂಚ್ ವಿಮಾನದ ರೆಕ್ಕೆಯ ಉದ್ದ ಅಮೆರಿಕದ ಫುಟ್ಬಾಲ್ ಮೈದಾನದ ವಿಸ್ತೀರ್ಣಕ್ಕೆ ಸಮವಾಗಿದೆ ಅಥವಾ ಎ380 ವಿಮಾನದ ಒಂದೂವರೆ ಪಟ್ಟು ಉದ್ದವಿದೆ. ಸ್ಟ್ರಾಟೊಲಾಂಚ್ ಸಂಸ್ಥಾಪಕ ಪೌಲ್ ಆ್ಯಲೆನ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮೃತಪಟ್ಟಿದ್ದು ಇದರಿಂದಾಗಿ ಸದ್ಯ ಅವರು ನಿರ್ಮಿಸಿರುವ ಕಂಪೆನಿಯ ಭವಿಷ್ಯ ಅಡಕತ್ತರಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor