ಖುದ್ದು ಹಾಜರಿರಲು ಪಶುವೈದ್ಯ ಸೇವಾ ಇಲಾಖೆಯ ನಿರ್ದೇಶಕರಿಗೆ ಹೈಕೋರ್ಟ್ ನಿರ್ದೇಶನ

Update: 2019-04-14 18:18 GMT

ಬೆಂಗಳೂರು, ಎ.13: ಕಾನೂನು ಬಾಹಿರವಾಗಿ ಸಾಕು ಪ್ರಾಣಿಗಳ ತಳಿ ಸಂವರ್ಧನೆಗೆ ಮುಂದಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಕೋರಿ ಸಲ್ಲಿಸಿದ್ಧ ಅರ್ಜಿ ಸಂಬಂಧ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ನಿರ್ದೇಶಕರಿಗೆ ಎ.16ರಂದು ಖುದ್ದು ಹಾಜರಿರಲು ಹೈಕೋರ್ಟ್ ಆದೇಶಿಸಿದೆ.

ಈ ಕುರಿತು ಕಂಪ್ಯಾಷನ್ ಅನ್ ಲಿಮಿಟೆಡ್ ಪ್ಲಸ್ ಆ್ಯಕ್ಷನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.  

ಅರ್ಜಿದಾರರ ಪರ ವಾದಿಸಿದ ವಕೀಲ ಆಲ್ವಿನ್ ಸೆಬಾಸ್ಟಿಯನ್ ಅವರು, ರಾಜ್ಯದಲ್ಲಿ ತಳಿಯ ಸಂವರ್ಧನೆ ನಿಯಮ 2017 ಹಾಗೂ ಸಾಕು ಪ್ರಾಣಿಗಳ ಅಂಗಡಿ ನಿಯಮ 2018 ಅನ್ನು ಸರಿಯಾಗಿ ಜಾರಿಗೆ ತರದ ಹಿನ್ನೆಲೆಯಲ್ಲಿ ಕಾನೂನು ಬಾಹಿರವಾಗಿ ತಳಿ ಸಂವರ್ಧನೆ ನಡೆಯುತ್ತಿದೆ ಹಾಗೂ ಯಾವುದೆ ಲೈಸನ್ಸ್ ಅನ್ನು ಪಡೆಯದೆ ಸಾಕು ಪ್ರಾಣಿಗಳ ಅಂಗಡಿಗಳನ್ನು ತೆರೆದಿದ್ದಾರೆ. ಈ ಎಲ್ಲ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ನಿಯಮಗಳನ್ನು ಸರಿಯಾಗಿ ಜಾರಿಗೆ ತರಬೇಕು, ಸಾಕುಪ್ರಾಣಿಗಳ ಅಂಗಡಿಗಳನ್ನು ಜಫ್ತಿ ಮಾಡಲು ನಿರ್ದೇಶಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು. ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯನ್ನೂ ಪುನರ್ ಸ್ಥಾಪಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ನಿರ್ದೇಶಕರಿಗೆ ಖುದ್ದು ಹಾಜರಿರಲು ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News