ನಿಖಿಲ್, ಸುಮಲತಾರಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ

Update: 2019-04-14 18:23 GMT

ಮಂಡ್ಯ, ಎ.14: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜಯಂತಿ ಹಿನ್ನೆಲೆಯಲ್ಲಿ ರವಿವಾರ ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರು ತಮ್ಮ ಅಭಿಮಾನಿಗಳ ಜತೆ ಪ್ರತ್ಯೇಕವಾಗಿ ತೆರಳಿ ನಗರದ ಡಿಸಿ ಕಚೇರಿ ಬಳಿಯ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಈ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದ ಸುಮಲತಾ, ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿಕೆ ವಿಚಾರವಾಗಿ ಅಂಬೇಡ್ಕರ್ ಜಯಂತಿ ಆಗಿರುವುದರಿಂದ ಒಳ್ಳೆಯ ವಿಚಾರ ಮಾತ್ರ ಮಾತನಾಡೋಣ ಎಂದು ವಿನಮ್ರವಾಗಿಯೇ ತಿರುಗೇಟು ನೀಡಿದರು.

ಕ್ಷೇತ್ರದಲ್ಲಿ ಭಯದ ವಾತಾವರಣ ಇದೆ. ಆ ಕಾರಣಕ್ಕೆ ನಾನು ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇನೆ. ಅಧಿಕಾರ ದುರುಪಯೋಗ ಆಗುತ್ತಿದೆ. ಜೆಡಿಎಸ್‍ಗೆ ಮುಸ್ಲಿಮರ ಬೆಂಬಲ ಬಗ್ಗೆ ನನಗೆ ಗೊತ್ತಿಲ್ಲ. ನನಗೂ ಮುಸ್ಲಿಮರ ಬೆಂಬಲ ಇದೆ ಎಂದರು.

ನಂತರ, ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ನಿಖಿಲ್, ಯತೀಂದ್ರ ಅಣ್ಣ ನನ್ನ ಪರವಾಗಿ ಶಕ್ತಿ ತುಂಬಲು ಬಂದಿದ್ದಾರೆ. ಮೊನ್ನೆ ಸಿದ್ದರಾಮಣ್ಣ ಬೆಂಬಲಕ್ಕೆ ಬಂದಿದ್ದರು. ಈಗ ಯತೀಂದ್ರ ಅಣ್ಣ ಬಂದಿದ್ದಾರೆ. ತುಂಬಾ ಸಂತೋಷವಾಗಿದೆ. ನನಗೆ ಮತ್ತಷ್ಟು ಶಕ್ತಿ ಬಂದಿದೆ. ಕೊನೆ ದಿನ 16ನೇ ತಾರೀಖು ಮಂಡ್ಯ ಟೌನ್‍ನಲ್ಲಿ ಪ್ರಚಾರ ಮುಗಿಸೋಣ ಅಂದುಕೊಂಡಿದ್ದೇವೆ. ಜನ ನನ್ನ ಕೈ ಹಿಡಿದೆ ಹಿಡೀತಾರೆ ಅನ್ನೋ ಆತ್ಮವಿಶ್ವಾಸ ಮೂಡಿದೆ ಎಂದು ಹೇಳಿದರು.

ಈ ಸಂದರ್ಭ ಹಾಜರಿದ್ದ ಶಾಸಕ ಡಾ.ಯತೀಂದ್ರ ಮಾತನಾಡಿ, ಜಿ.ಟಿ.ದೇವೇಗೌಡ ಮತ್ತು ನಮ್ಮ ತಂದೆ ಸಿದ್ದರಾಮಯ್ಯ ರಾಜಕೀಯದಲ್ಲಿ ಸ್ನೇಹಿತರಾಗಿದ್ದರು. ನಂತರ ರಾಜಕೀಯ ಸನ್ನಿವೇಶ ಬೇರೆ ಆದಾಗ ಬೇರೆ ಬೇರೆ ಪಕ್ಷದಿಂದ ಸ್ಪರ್ಧೆ ಮಾಡಿದರು. ರಾಜಕೀಯ ಹೋರಾಟ ಬೇರೆ, ವೈಯಕ್ತಿಕ ಸಂಬಂಧ ಬೇರೆ. ಹಾಗಾಗಿ ಅವರಿಬ್ಬರೂ ಒಗ್ಗೂಡುವುದರಲ್ಲಿ ಆಶ್ಚರ್ಯ ಪಡಬೇಕಿಲ್ಲ ಎಂದರು.

ನಮ್ಮ ಗುರಿ ಮೈತ್ರಿ ಅಭ್ಯರ್ಥಿನ್ನು ಗೆಲ್ಲಿಸಿ, ಕೋಮುವಾದಿ ಪಕ್ಷ ಸೋಲಿಸುವುದು. ಅದಕ್ಕಾಗಿ ಏನೆಲ್ಲ ಮಾಡಬೇಕೋ, ಅದನ್ನು ನಾವು ಮಾಡುತ್ತೇವೆ. ಮಳವಳ್ಳಿ ತಾಲೂಕಿನ ಹಲವೆಡೆ ಪ್ರಚಾರ ಮಾಡುತ್ತಿದ್ದೇನೆ. ನಮ್ಮ ತಂದೆ ಹೆಸರು ಬಳಸಿಕೊಂಡು ಮತದಾರರನ್ನು ತಪ್ಪು ದಾರಿಗೆ ಎಳೆಯಬಾರದು ಎಂದು ಎದುರಾಳಿಗಳಿಗೆ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News