ಅಭಿಮಾನ ಪಕ್ಕಕ್ಕಿಟ್ಟು ಸ್ವಾಭಿಮಾನ ಎತ್ತಿಹಿಡಿಯಿರಿ: ಅಭಿಮಾನಿಗಳಿಗೆ ನಟ ದರ್ಶನ್ ಮನವಿ

Update: 2019-04-14 18:27 GMT

ಮಂಡ್ಯ, ಎ.14: ಈ ಬಾರಿಯ ಚುನಾವಣೆಯಲ್ಲಿ ಅಭಿಮಾನವನ್ನು ಪಕ್ಕಕಿಟ್ಟು ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕು ಎಂದು ಚಿತ್ರನಟ ದರ್ಶನ್ ಮನವಿ ಮಾಡಿದ್ದಾರೆ.

ರವಿವಾರ ಮದ್ದೂರು ತಾಲೂಕಿನ ಕೊಪ್ಪದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಿ ಅವರು ಮತಯಾಚಿಸಿದರು.

ಮಂಡ್ಯವನ್ನು ಇಡೀ ದೇಶ ನೋಡುತ್ತಿದೆ. ಮಂಡ್ಯದ ಜನ ಸ್ವಾಭಿಮಾನಕ್ಕೆ ಹೆಸರಾದವರು. ಎಂದಿಗೂ ಸ್ವಾಭಿಮಾನವನ್ನು ಬಿಡದೆ ಸುಮಲತಾ ಅಂಬರೀಷ್ ಅವರನ್ನು ಅತ್ಯಂತ ಅಧಿಕ ಮತಗಳಿಂದ ಗೆಲ್ಲಿಸಬೇಕು. ಕ್ರಮ ಸಂಖ್ಯೆ 20 ಕಹಳೆ ಊದುತ್ತಿರುವ ರೈತನ ಗುರುತಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. 

ನಿಮ್ಮ ಆಶೀರ್ವಾದ ಸುಮಲತಾ ಅವರಿಗೆ ಬೇಕಾಗಿದೆ. ಅಂಬರೀಷ್ ಅವರಿಗೆ ತೋರಿದ ಪ್ರೀತಿಯನ್ನು ಸುಮಲತಾ ಅವರಿಗೂ ತೋರಿಸಬೇಕಿದೆ. ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಅವರು ಕೋರಿದರು.

ಲಘು ಲಾಠಿ ಪ್ರಹಾರ:
ನೂಕು ನುಗ್ಗಲು ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ಅಭಿಮಾನಿಗಳ ಮೇಲೆ ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದರು. ದರ್ಶನ್ ರೈತಸಂಘದ ಹಸಿರು ಶಾಲನ್ನು ತಿರುಗಿಸಿ ರೈತರ ಗಮನ ಸೆಳೆದರು. ಮುಸ್ಲಿಂ ಯುವಕರಿಂದ ಅಭಿನಂದನೆ ಸ್ವೀಕರಿಸಿದರು. ಮಾಜಿ ಶಾಸಕ ಎನ್. ಚಲುವರಾಯಸ್ವಾಮಿ ಮತ್ತು ಅಂಬರೀಷ್ ಪರ ಘೋಷಣೆಗಳು ಮೊಳಗಿದವು. ದರ್ಶನ್, ಚಲುವರಾಯಸ್ವಾಮಿ ಮತ್ತು ಅವರ ಅಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಿದರು. ಅಭಿಮಾನಿಯೊಬ್ಬ ದರ್ಶನ್ ಇದ್ದ ತೆರೆದ ವಾಹನವೇರಿ ಮುತ್ತು ನೀಡಿ ಅಭಿಮಾನ ಮೆರೆದರು. 

ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕೊಪ್ಪ ದಿವಾಕರ್ ಸೇರಿದಂತೆ, ಹಲವು ಮುಖಂಡರು ಇದ್ದರು.

ಕೈ ನೋವು, ಪ್ರಚಾರ ಮೊಟಕು:
ಮದ್ದೂರು ತಾಲೂಕಿನಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಕೈ ನೊವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದರ್ಶನ್ ಪ್ರಚಾರವನ್ನು ಮೊಟಕುಗೊಳಿಸಿದರು. ಕೊಪ್ಪ, ಕೆಸ್ತೂರು, ಮಾಚಹಳ್ಳಿ, ಕದಲೂರು, ಯರಗನಹಳ್ಳಿ ಗ್ರಾಮಗಳಲ್ಲಿ ಪ್ರಚಾರ ನಡೆಸಿದ ಅವರು ಪ್ರಚಾರ ಮೊಟಕುಗೊಳಿಸಿ ವಾಪಸ್ ತೆರಳಿದರು.
ಈ ಸಂದರ್ಭದಲ್ಲಿ ಅಸಮಾಧಾನಗೊಂಡ ಜನರನ್ನು ಸಮಾಧಾನಪಡಿಸಿದ ದರ್ಶನ್ ಅಭಿಮಾನಿಗಳ ಸಂಘದ ಮುಖಂಡರು, ದರ್ಶನ್ ಅವರ ಕೈ ಪ್ರಾಚ್ಕರ್ ಆಗಿದ್ದು, ನೋವು ಕಾಣಿಸಿಕೊಂಡಿದೆ. ತಾತ್ಕಾಲಿಕವಾಗಿ ಪ್ರಚಾರ ನಿಲ್ಲಿಸಿದ್ದಾರೆ. ವಿರಾಮ ಪಡೆದು ಸಂಜೆ ವೇಳೆಗೆ ಆಗಮಿಸಲಿದ್ದಾರೆ ಎಂದು ಸಮಜಾಯಿಸಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News