ಪಿಯುಸಿ ಫಲಿತಾಂಶ: ಎ.17 ರಿಂದ ಉತ್ತರ ಪತ್ರಿಕೆಯ ಸ್ಕಾನಿಂಗ್ ಪ್ರತಿ ಪಡೆಯಲು ಅವಕಾಶ

Update: 2019-04-15 12:54 GMT

ಬೆಂಗಳೂರು, ಎ.15: ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತೀರ್ಣರಾದ ವಿದ್ಯಾರ್ಥಿಗಳ ಭಾವಚಿತ್ರದಲ್ಲಿನ ನ್ಯೂನತೆ ಸರಿಪಡಿಸಲು ಎ.16 ರಿಂದ 30 ರವರೆಗೆ ಕಾಲಾವಕಾಶವಿದೆ.

ಉತ್ತರ ಪತ್ರಿಕೆಯ ಸ್ಕಾನಿಂಗ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ಎ.17 ರಿಂದ ಪ್ರಕ್ರಿಯೆ ಆರಂಭವಾಗಲಿದ್ದು, ಎ.29 ರವರೆಗೂ ಅವಕಾಶವಿರುತ್ತದೆ. ಉತ್ತರ ಪತ್ರಿಕೆಯ ಸ್ಕಾನಿಂಗ್ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಎ.27 ರಿಂದ ಆರಂಭವಾಗಲಿದ್ದು, ಮೇ 6 ರವರೆಗೂ ಅವಕಾಶವಿರುತ್ತದೆ. ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಹಾಗೂ ಮರು ಎಣಿಕೆಗಾಗಿ ಅರ್ಜಿ ಸಲ್ಲಿಸಲು ಎ.29 ರಿಂದ ಪ್ರಕ್ರಿಯೆ ಆರಂಭವಾಗಲಿದ್ದು, ಮೇ 8 ರಂದು ಕೊನೆಯ ದಿನಾಂಕವಾಗಿರುತ್ತದೆ.

ಪರೀಕ್ಷೆ ಬರೆದ ವಿದ್ಯಾರ್ಥಿಗಳು ಸ್ಕಾನಿಂಗ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 539 ರೂ. ಸಂದಾಯ ಮಾಡಬೇಕು ಹಾಗೂ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಪ್ರತಿ ವಿಷಯಕ್ಕೆ 1670 ರೂ.ಗಳು ಸಲ್ಲಿಸಬೇಕು. ಮರು ಮೌಲ್ಯಮಾಪನದಲ್ಲಿ ಹೆಚ್ಚಿನ ಅಂಕ ಅಥವಾ ಕಡಿಮೆ ಅಂಕಗಳು ಬಂದಲ್ಲಿ ಫಲಿತಾಂಶ ಪರಿಷ್ಕರಿಸಿ ಪ್ರಕಟಿಸಲಾಗುತ್ತದೆ.

ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಶುಲ್ಕ ಪಾವತಿಸಲು ಎ.30 ರಂದು ಕೊನೆ ದಿನಾಂಕವಾಗಿದ್ದು, ಕಾಲೇಜಿನವರು ಒಂದೇ ಕಂತಿನಲ್ಲಿ ಸಂದಾಯ ಮಾಡಲು ಮೇ 2 ರಂದು ಕೊನೆ ದಿನವಾಗಿದೆ. ಕಾಲೇಜಿನವರು ಪರೀಕ್ಷಾ ಅರ್ಜಿಗಳನ್ನು ಮೂಲ ಚಲನ್ ಸಹಿತ ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಸಲ್ಲಿಸಲು ಕೊನೆ ದಿನಾಂಕ ಮೇ 4 ಆಗಿರುತ್ತದೆ.

ಪೂರಕ ಪರೀಕ್ಷೆಗೆ ಸಾಮಾನ್ಯ ಅಭ್ಯರ್ಥಿಗಳು ಒಂದು ವಿಷಯಕ್ಕೆ 140 ರೂ., ಎರಡು ವಿಷಯಕ್ಕೆ 270 ರೂ., ಮೂರು ಅಥವಾ ಹೆಚ್ಚಿನ ವಿಷಯಕ್ಕೆ 400 ರೂ.,ಗಳು ಪಾವತಿಸಬೇಕು. ಎಸ್ಸಿ-ಎಸ್ಟಿ, ಪ್ರವರ್ಗ-1 ವಿದ್ಯಾರ್ಥಿಗಳು ಸೇರಿ ಎಲ್ಲರೂ ಕಡ್ಡಾಯವಾಗಿ ಅಂಕಪಟ್ಟಿ ಶುಲ್ಕ 50 ರೂ., ಸಲ್ಲಿಸಬೇಕು. ಇನ್ನು ಪ್ರಥಮ ಬಾರಿಗೆ ಒಂದು ವಿಷಯಕ್ಕೆ 175, ದ್ವಿತೀಯ ಹಾಗೂ ಅಂತಿಮ ಬಾರಿಗೆ ಒಂದು ವಿಷಯಕ್ಕೆ 350 ರೂ., ಪಾವತಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News