ಇದು ಕೇಂದ್ರ ಸರಕಾರದ ವೈಫಲ್ಯಗಳ ವಿರುದ್ಧದ ಚುನಾವಣೆ: ಗೃಹ ಸಚಿವ ಎಂ.ಬಿ.ಪಾಟೀಲ್

Update: 2019-04-15 12:59 GMT

ಹುಬ್ಬಳ್ಳಿ, ಎ. 15: ಲೋಕಸಭಾ ಚುನಾವಣೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ವಸ್ತುವಲ್ಲ. ಬದಲಿಗೆ ಕೇಂದ್ರ ಸರಕಾರದ ಆಡಳಿತ ವೈಫಲ್ಯದ ವಿರುದ್ಧದ ಚುನಾವಣೆ ಇದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ಹೇಳಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಚಾರಿಕ ಭಿನ್ನತೆಗಳನ್ನ ನಾವು ಬಗೆಹರಿಸಿಕೊಳ್ಳುತ್ತೇವೆ. ಧರ್ಮದ ವಿಚಾರ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ. ಲಿಂಗಾಯತ ಧರ್ಮದ ಬಗ್ಗೆ ನಾನು ಈಗ ಮಾತನಾಡಲ್ಲ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಸ್ಪಷ್ಟನೆ ನೀಡಿದ್ದೇನೆ ಎಂದರು.

ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಎಲುಬಿಲ್ಲದ ನಾಲಿಗೆ ಎಂಬಂತೆ ಮನಸೋಇಚ್ಛೆ ಮಾತನಾಡುತ್ತಿದ್ದಾರೆ. ಇವರ ಇತಿಹಾಸ ಎಲ್ಲರಿಗೂ ಗೊತ್ತಿದೆ. ಅರೆ ಹುಚ್ಚನ ರೀತಿ ಮಾತನಾಡಿದರೆ ಹೀಗೆ ಆಗುತ್ತದೆ. ನಡಹಳ್ಳಿ ಸುದ್ದಿಗೋಷ್ಠಿಯಲ್ಲಿ ಗಲಾಟೆ ಮಾಡಿದವರು ನನ್ನ ಬೆಂಬಲಿಗರೆಂದು ನಾನು ಹೇಳುವುದಿಲ್ಲ ಎಂದರು.

ಸಾರಾಯಿ ಕುಡಿದವರ ಹಾಗೆ ನಡಹಳ್ಳಿ ವರ್ತಿಸುತ್ತಿದ್ದಾರೆ. ಈ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದೇನೆ. ಈ ಕುರಿತು ದೂರು ಪ್ರತಿ ದೂರು ದಾಖಲಾಗಿದ್ದು, ಪೊಲೀಸರು ಕಾನೂನು ಪ್ರಕಾರ ಕ್ರಮ ತಗೆದುಕೊಳ್ಳಲಿದ್ದಾರೆ ಎಂದು ಪಾಟೀಲ್ ತಿಳಿಸಿದರು.

ಪ್ರಧಾನಿ ಮೋದಿ ಗಿಮಿಕ್ ಮಾಡುತ್ತಿದ್ದಾರೆ. ಕಪ್ಪುಹಣ ತರಲು ಮೋದಿಯಿಂದ ಸಾಧ್ಯವಾಗಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿ ಮಾಡುವೆ ಎಂದು ಭರವಸೆ ನೀಡಿದ್ದರೂ, ಒಂದೇ ಒಂದು ಉದ್ಯೋಗ ಸೃಷ್ಟಿಯೂ ಆಗಲಿಲ್ಲ. 2 ಸಾವಿರ ರೂ.ನೋಟು ಪ್ರಿಂಟ್ ಮಾಡಿದ್ದು, ಒಂದೇ ವಿಮಾನದಲ್ಲಿ ನೀರವ್ ಮೋದಿ, ಲಲಿತ್ ಮೋದಿಗೆ ತೆಗೆದು ಕೊಂಡು ಹೋಗಲು ಅನುಕೂಲವಾಗಲೆಂದು ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News