ಎಂ.ಬಿ.ಪಾಟೀಲ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಎಸ್.ಎಸ್.ಪಾಟೀಲ್

Update: 2019-04-15 13:07 GMT

ವಿಜಯಪುರ, ಎ.15: ನನ್ನನ್ನು ಅರೆಹುಚ್ಚ ಎಂದು ಕರೆಯುತ್ತಿರುವ ಗೃಹ ಸಚಿವ ಎಂ.ಬಿ.ಪಾಟೀಲ್, ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರನ್ನು ಕೂಡಲೇ ಹುಚ್ಚಾಸ್ಪತ್ರೆಗೆ ಸೇರಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ ಎಂದು ಬಿಜೆಪಿ ಶಾಸಕ ಎ.ಎಸ್.ಪಾಟೀಲ್(ನಡಹಳ್ಳಿ) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಗೃಹ ಸಚಿವರಾಗಿ ಮುಂದುವರೆಯುವ ಸಾಮರ್ಥ್ಯವನ್ನು ಎಂ.ಬಿ.ಪಾಟೀಲ್ ಕಳೆದುಕೊಂಡಿದ್ದಾರೆ. ಚಿಕಿತ್ಸೆ ಪಡೆಯುವವರೆಗೂ ಅವರು ಗೃಹ ಸಚಿವರಾಗಿ ಕಾರ್ಯನಿರ್ವಹಿಸಬಾರದು ಎಂದರು.

ನಾನು ಏನು, ನನ್ನ ಯೋಗ್ಯತೆ ಏನು ಅನ್ನೋದು ವಿಜಯಪುರ ಜಿಲ್ಲೆಯ ಜನರಿಗೆ ಗೊತ್ತಿದೆ. ಎಂ.ಬಿ.ಪಾಟೀಲ್ ಅರ್ಹತೆ, ಯೋಗ್ಯತೆ ಏನು ಅನ್ನೋದು ಅವರ ಹೇಳಿಕೆಗಳು ತೋರಿಸುತ್ತವೆ. ನಾನು ನನ್ನ ಸ್ವಂತ ಸಾಮರ್ಥ್ಯದಿಂದ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆದರೆ, ಅವರು ಅಪ್ಪ ನೆಟ್ಟಿರುವ ಆಲದ ಮರದ ಆಶ್ರಯದಲ್ಲಿ ಶಾಸಕರಾಗಿ, ಮಂತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನೀವು ಗೆಲುವು ಸಾಧಿಸಿರುವ ರೀತಿಯೇ ಸಂಶಯಾಸ್ಪದವಾಗಿದೆ. ನಿಮ್ಮ ಮತ ಕ್ಷೇತ್ರ ಬಬಲೇಶ್ವರದಲ್ಲಿ ಇವಿಎಂಗಳು ಸಿಕ್ಕಿದ್ದವು. ನಿಮ್ಮ ಅರ್ಹತೆ ಏನು ಅನ್ನೋದು ಕೇವಲ ವಿಜಯಪುರ ಜಿಲ್ಲೆ ಅಷ್ಟೇ ಅಲ್ಲ, ಇಡೀ ರಾಜ್ಯದ ಜನತೆಗೆ ಗೊತ್ತಿದೆ ಎಂದು ಎ.ಎಸ್.ಪಾಟೀಲ್ ಹೇಳಿದರು.

ವಿಜಯಪುರದಲ್ಲಿ ಶನಿವಾರ ನಾನು ಸುದ್ದಿಗೋಷ್ಠಿ ಮಾಡುತ್ತಿದ್ದಾಗ, ಅವರ ಹಿಂಬಾಲಕರನ್ನು ಬಿಟ್ಟು ಗಲಾಟೆ ಮಾಡಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಎ.ಎಸ್.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News