ಕಾಂಗ್ರೆಸ್ ಗೆ ಚುನಾವಣೆ ವೇಳೆ ಮಾತ್ರ ಬಡವರ ನೆನಪು: ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್

Update: 2019-04-15 13:25 GMT

ಶಿವಮೊಗ್ಗ, ಎ.15: 'ಚುನಾವಣೆ ಸಂದರ್ಭಗಳಲ್ಲಿ ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಬಡವರ ನೆನಪಾಗುತ್ತದೆ. ಬಡತನ ನಿರ್ಮೂಲನೆ ಮಾಡುವುದಾಗಿ ಹೇಳುತ್ತದೆ. ಇಂದಿರಾ ಗಾಂಧಿ ಕಾಲದಿಂದಲೂ ಇದೇ ಹೇಳಿಕೊಂಡು ಬರುತ್ತಿದೆ. ಇದೀಗ ಆ ಪಕ್ಷದ ನ್ಯಾಯ್ ಕಾರ್ಯಕ್ರಮ ಕೂಡ ಚುನಾವಣಾ ನೆಪವಾಗಿದೆ' ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‍ರವರು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. 

ನಗರದ ಎನ್.ಇ.ಎಸ್. ಮೈದಾನ ಆವರಣದಲ್ಲಿ ಸೋಮವಾರ ಬಿಜೆಪಿ ಮಹಿಳಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಕಳೆದ ಐದು ವರ್ಷಗಳ ಅವಧಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಬಡವರನ್ನು ಸಶಕ್ತೀಕರಣಗೊಳಿಸುವ ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಇದಕ್ಕಾಗಿಯೇ ಸಮಗ್ರ ಯೋಜನೆ ರೂಪಿಸಿದೆ ಎಂದು ಹೇಳಿದರು. 2008 ರಲ್ಲಿ ಮುಂಬೈ ದಾಳಿಯಾದಾಗ 150 ನಾಗರೀಕರು ಅಸುನೀಗಿದರು. ಆಗ ನಮ್ಮ ಸೈನ್ಯದ ಶಕ್ತಿಯನ್ನು ಪಾಕಿಸ್ತಾನಕ್ಕೆ ತೋರ್ಪಡಿಸಿದ್ದರೆ, ಸಶಸ್ತ್ರ ಪಡೆಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿದ್ದರೆ ಮತ್ತೆ ಪುಲ್ವಾಮ ದಾಳಿಯಂತಹ ಪರಿಸ್ಥಿತಿ ಭಾರತಕ್ಕೆ ಬರುತ್ತಿರಲಿಲ್ಲ ಎಂದು ತಿಳಿಸಿದರು. 

ಆದರೆ ಉಗ್ರರ ದಮನದ ವಿಚಾರದಲ್ಲಿ ನರೇಂದ್ರ ಮೋದಿಯವರು ಕಠಿಣ ಕ್ರಮಕೈಗೊಂಡರು. 2016 ರಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಡಗಿ ಕುಳಿತಿದ್ದ ಉಗ್ರರ ಶಿಬಿರದ ಮೇಲೆ ಭಾರತೀಯ ಸೇನೆಯಿಂದ ಸರ್ಜಿಕಲ್ ಸ್ಟ್ರೈಕ್ ನಡೆಸಿದರು. ನಂತರ 2019ರಲ್ಲಿ ಪಾಕಿಸ್ತಾನದ ಪ್ರದೇಶವಾದ ಬಾಲ್‍ಕೋಟ್‍ನಲ್ಲಿ ಸ್ಥಾಪಿತವಾಗಿದ್ದ ಜೈಶ್ ಮೊಹಮ್ಮದ್ ಉಗ್ರರ ನೆಲೆಯ ಮೇಲೆ ವಾಯು ದಾಳಿ ನಡೆಸಿ ಧ್ವಂಸಗೊಳಿಸಿತು. ಬಿಜೆಪಿ ಪಕ್ಷವು ದೇಶದ ರಕ್ಷಣೆ-ಭದ್ರತೆಯ ವಿಷಯದಲ್ಲಿ ಎಂದಿಗೂ ರಾಜೀ ಮಾಡಿಕೊಳ್ಳುವುದಿಲ್ಲ ಎಂದರು. 

ಮೋದಿಯವರು ದೇಶದ ರೈತರ ಹಿತಾಸಕ್ತಿ ರಕ್ಷಣೆಯ ಬಗ್ಗೆಯೂ ಕಾಳಜಿ ವಹಿಸಿದ್ದಾರೆ. ಸಣ್ಣ ರೈತರಿಗೆ ಪ್ರತಿವರ್ಷ 6 ಸಾವಿರ ರೂ. ಸಹಾಯಧನ ನೀಡುವ ಯೋಜನೆ ಪ್ರಕಟಿಸಿದ್ದಾರೆ. ಆದರೆ ಕರ್ನಾಟಕ ಸಮ್ಮಿಶ್ರ ಸರ್ಕಾರವು ಸಣ್ಣ ರೈತರ ಪಟ್ಟಿ ನೀಡುವಲ್ಲಿ ವಿಳಂಬ ಮಾಡುವ ಮೂಲಕ, ರೈತರಿಗೆ ಇದರ ಲಾಭ ಸಿಗದಂತೆ ಮಾಡಿದೆ ಎಂದು ಟೀಕಿಸಿದರು. 

ಮೋದಿ ಸರ್ಕಾರ 2014 ರಲ್ಲಿ ಅಧಿಕಾರಕ್ಕೇರಿದಾಗ ಬೇಳೆ ಕಾಳುಗಳ ಬೆಲೆ 150 ರಿಂದ 200 ರೂ.ಗಳಿಗೇರಿತ್ತು. ಬೇಳೆಕಾಳುಗಳ ಉತ್ಪಾದನೆಗಿಂತ ಬಳಕೆ ಹೆಚ್ಚಾಗಿದ್ದರಿಂದ ಬೆಲೆ ಏರಿಕೆಯಾಗಿತ್ತು. ಮೋದಿಯವರು ಬೇಳೆಕಾಳುಗಳ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದರಿಂದ ಪ್ರಸ್ತುತ ಬೆಲೆ ನಿಯಂತ್ರಣದಲ್ಲಿದೆ ಎಂದರು. 

ಸಮಾರಂಭದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಪಕ್ಷದ ಮುಖಂಡರಾದ ಕೆ.ಎಸ್.ಈಶ್ವರಪ್ಪ, ಡಿ.ಹೆಚ್.ಶಂಕರಮೂರ್ತಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಆಯನೂರು ಮಂಜುನಾಥ್ ಸೇರಿದಂತೆ ಮೊದಲಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News