ಇಸ್ರೇಲ್‍ಗೆ ಹೋದಾಗಲೇ ನನ್ನ ಜೀವ ಹೋಗಬೇಕಾಗಿತ್ತು: ಕುಮಾರಸ್ವಾಮಿ

Update: 2019-04-15 15:27 GMT

ಮಂಡ್ಯ, ಎ.15: ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಸಿನಿಮಾ ನಟರಾದ ಯಶ್, ದರ್ಶನ್ ವಿರುದ್ಧ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮತ್ತೆ ಭಾವುಕರಾಗುವ ಮೂಲಕ ಪುತ್ರ ಪರ ಪ್ರಚಾರವನ್ನು ತಾರಕಕ್ಕೆ ಮುಟ್ಟಿಸಿದ್ದಾರೆ.

ಕೃಷ್ಣರಾಜಪೇಟೆಯ ಪ್ರಚಾರ ಸಭೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪತಿ ಪ್ರೇಮವನ್ನು ನೇರವಾಗಿ ಪ್ರಶ್ನಿಸಿದ ಅವರು, ಜನರೊಂದಿಗೆ ಇರುವ ನಮ್ಮನ್ನು ಪ್ರಶ್ನಿಸುವ ಅರ್ಹತೆಯೇ ಇಲ್ಲ ಎಂದು ಕಣ್ಣೀರು ಹಾಕಿದರು.

ಇಲ್ಲಿಯವರೆಗೆ ಬಾಯಿ ಮುಚ್ಚಿಕೊಂಡಿದ್ದೆ. ಆಗಲೆ ಎಂಪಿ ಆಗಿದ್ದೇನೆ ಎಂದು ಮೂರು ತಿಂಗಳಿಂದ ನಿಮ್ಮ ತಲೆಗೆ ತುಂಬಿದ್ದಾರೆ. ಆಸ್ಪತ್ರೆಯಲ್ಲೇ ಇದ್ದ ಅಂಬರೀಷ್ ಅವರನ್ನು ನೋಡಿದ್ದೇ ಮೊದಲು ನಾವು. ಆಗ ಇವರು ಎಲ್ಲಿದ್ದರು? ದೇಹವನ್ನು ಮಂಡ್ಯಕ್ಕೆ ತರಲು ವಿರೋಧಿಸಿದ್ದು ಏಕೆಂದು ಅಭಿಮಾನಿಗಳು ಪ್ರಶ್ನಿಸಬೇಕು ಎಂದು ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದರು. 

ದೇಶದ ಇತಿಹಾಸದಲ್ಲಿ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲು ಸೇನೆಯ ವಿಮಾನ ಕೊಡಲ್ಲ. ಅವತ್ತು ಅಭಿಮಾನಿಗಳು ಕೇಳಿಕೊಂಡರು ಎಂದು ಮಾಡಿದೆ. ನಾನು ಒಬ್ಬ ಮುಖ್ಯಮಂತ್ರಿ ಆಗಿ ಅಲ್ಲಿ ಕೂರಲಿಲ್ಲ. ಅಂತ ದರ್ದು ನನಗೇನಿತ್ತು ಎಂದು ಪ್ರಶ್ನಿಸಿದರು. ಅಂಬರೀಷ್ ಅವರನ್ನು ಮೊದಲು ಎಂಪಿ ಮಾಡಿದ್ದು ಜನತಾ ದಳ. ನಂತರ ಕಾಂಗ್ರೆಸ್‍ಗೆ ಹೋದರು. ನಾನು ಅವರಿಗೆ ಏನು ಸಹಾಯ ಮಾಡಿದ್ದೇನೆ. ಅವರು ನನಗೆ ಏನು ಸಹಾಯ ಮಾಡಿದ್ದಾರೆ ಎಂಬುವುದರ ಬಗ್ಗೆ ಈಗ ಮಾತನಾಡುವುದು ಬೇಡ ಎಂದು ಅವರು ಹೇಳಿದರು.

ಸಿನಿಮಾದವರು ಬಂದು ಮಂಡ್ಯ ಸ್ವಾಭಿಮಾನ ಅಂತ ಮಾತಾಡುತ್ತಾರೆ. ರೈತರು ಆತ್ಮಹತ್ಯೆಗೆ ಶರಣಾದಾಗ ಯಾರು ಬಂದಿದ್ದರು? ರೈತರು ಆತ್ಮಹತ್ಯೆ ಮಾಡಿಕೊಂಡು ತಾಯಂದಿರು ಕಣ್ಣೀರು ಹಾಕುವಾಗ ಯಾವ ನಟರು ಬಂದಿದ್ದರು ಎಂದು ಕುಮಾರಸ್ವಾಮಿ ಯಶ್, ದರ್ಶನ್ ವಿರುದ್ಧ ಕಿಡಿಕಾರಿದರು.

ಯಾವನೊ ಅವನು ಯಶ್ ನನ್ನ ಪಕ್ಷ ಕಳ್ಳರ ಪಕ್ಷ ಎನ್ನುತ್ತಾನೆ. ನನ್ನ ಕಾರ್ಯಕರ್ತರು ನನ್ನ ಬಗ್ಗೆ ತಪ್ಪು ಸಂದೇಶ ಹೊಗುತ್ತದೆ ಎಂದು ಸುಮ್ಮನಿದ್ದಾರೆ. ನಾನು ನಿರ್ಮಾಪಕ ಆಗಿದ್ದವನು. ನನ್ನಂಥ ನಿರ್ಮಾಪಕ ಇಲ್ಲದಿದ್ದರೆ ಎಲ್ಲಿ ಬದುಕುತ್ತಿತ್ತು ಇವೆಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ನಾನು ಮಾಧ್ಯಮಗಳಿಂದ ಬದುಕಿಲ್ಲ. ಮಾಧ್ಯಮದವರು ಏನು ಬೇಕಾದರೂ ಮಾಡಿಕೊಳ್ಳಲಿ. ನಾನು ಇಂದು ಇರುವುದು ಜನರಿಂದ ಎಂದು ಹೇಳಿದರು.

ಎರಡು ಬಾರಿ ಚಿಕಿತ್ಸೆಗೆ ಒಳಗಾದವನು ನಾನು. ಇಸ್ರೇಲ್‍ಗೆ ಹೋದಾಗಲೇ ನನ್ನ ಜೀವ ಹೋಗಬೇಕಾಗಿತ್ತು. ವೈದ್ಯರು ಚಿಕಿತ್ಸೆ ಕೊಡಲೇ ಬೇಕು ಅಂದರು. ಆದರೆ ನಾನು ಬಂದಿರುವುದು ರೈತರಿಗೆ ಒಳ್ಳೆಯದು ಮಾಡಲು ಎಂದು ಯಾವುದಾದರೂ ಮಾತ್ರೆ ಕೊಡಿ ಸಾಕು ಎಂದೆ ಎಂದು ಅವರು ಹೇಳಿಕೊಂಡರು.

ಮತ್ತೆ ಕಣ್ಣೀರು: ನಾನು ಕಣ್ಣೀರು ಹಾಕೋದನ್ನು ನಿಲ್ಲಿಸಿದ್ದೆ. 'ಯಾರು ನಿನ್ನ ಕಷ್ಟ ಅರ್ಥ ಮಾಡಿಕೊಳ್ಳಲ್ಲ. ನಿನ್ನ ಪರಿಸ್ಥಿತಿ ಯೋಚನೆ ಮಾಡಲ್ಲ. ನಿನ್ನ ಆರೋಗ್ಯ ಮೇಲೆ ಯಾವ ಪರಿಣಾಮ ಬೀರಿದೆ ಅನ್ನೋದನ್ನು ಯೋಚನೆ ಮಾಡಲ್ಲ' ಎಂದು ಎಚ್.ವಿಶ್ವನಾಥ್ ಅವರು ಕೆಲವು ಮಾತನ್ನು ಹೇಳಿದರು. ಆ ಮಾತುಗಳು ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿದವರು. ನೋವು ತಡಯಲು ಆಗದೆ ನಾನು ಕಣ್ಣೀರು ಹಾಕಿದ್ದೇನೆ ಎಂದು ಕುಮಾರಸ್ವಾಮಿ ಕಣ್ಣೀರು ಹಾಕಿದರು.

ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನು. ನಾನು ಶಿಕ್ಷಣ ಮುಗಿಸಿ ಸಿನಿಮಾ ವಿತರಕನಾಗಿ ನನ್ನ ಜೀವನ ನಡೆಸುತ್ತಿದ್ದೆ. ಅಚಾನಕ್ ಆಗಿ ರಾಜಕೀಯಕ್ಕೆ ಬಂದೆ. ಅಲ್ಲಿಂದ ಇಲ್ಲಿಯವರೆಗೆ ನನ್ನ ಮನೆ ಬಳಿ ಕಷ್ಟ ಹೇಳಿಕೊಂಡು ಬಂದವರ ಜಾತಿ ಧರ್ಮ ಕೇಳದೆ ಸಹಾಯ ಮಾಡಿದ್ದೇನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News