ಲೋಕಸಭಾ ಚುನಾವಣೆ: ಮೊದಲ ಹಂತದ ಬಹಿರಂಗ ಪ್ರಚಾರಕ್ಕೆ ಮಂಗಳವಾರ ತೆರೆ

Update: 2019-04-15 16:36 GMT

ಬೆಂಗಳೂರು, ಎ.15: ಮೊದಲ ಹಂತದ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ(ಮಂಗಳವಾರ) ಸಂಜೆ ತೆರೆ ಬೀಳಲಿದ್ದು, ಕೊನೆಕ್ಷಣದಲ್ಲಿ ಮತದಾರರನ್ನು ಓಲೈಸಿಕೊಳ್ಳಲು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಅಖಾಡದಲ್ಲಿರುವ ಸ್ವತಂತ್ರ ಅಭ್ಯರ್ಥಿಗಳು ಹರಸಾಹಸ ಪಡುತ್ತಿದ್ದಾರೆ.

ಬಿಜೆಪಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪಕ್ಷ ಹಾಗೂ ಪ್ರಭಾವಿ ಪಕ್ಷೇತರ ಅಭ್ಯರ್ಥಿಗಳ ಬಹಿರಂಗ ಪ್ರಚಾರ ಅಂತ್ಯಗೊಂಡು ಮನೆ ಮನೆ ಪ್ರಚಾರ ನಡೆಸಲಿದ್ದಾರೆ. ಸ್ಟಾರ್ ಪ್ರಚಾರಕರು, ಪಕ್ಷದ ಹಿರಿಯ ನಾಯಕರು, ಮುಖಂಡರು ತಮ್ಮ ಪ್ರವಾಸವನ್ನು ಇಂದು ಸಂಜೆಗೆ ಕೊನೆಗೊಳಿಸಿ, ಎರಡನೇ ಹಂತದ 14 ಕ್ಷೇತ್ರಗಳತ್ತ ಪ್ರಯಾಣ ಬೆಳೆಸಲಿದ್ದಾರೆ. ಮೊದಲ ಹಂತದಲ್ಲಿ ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಚಿತ್ರದುರ್ಗ ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

ಹೈವೋಲ್ಟೇಜ್ ಕ್ಷೇತ್ರಗಳು: ಹಾಸನದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ, ಬಿಜೆಪಿಯಿಂದ ಎ.ಮಂಜು, ಉಡುಪಿ-ಚಿಕ್ಕಮಗಳೂರಿನಲ್ಲಿ ಬಿಜೆಪಿಯಿಂದ ಶೋಭಾ ಕರಂದ್ಲಾಜೆ ಮತ್ತು ಮೈತ್ರಿ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್, ಮೈಸೂರಿನಲ್ಲಿ ಬಿಜೆಪಿಯ ಪ್ರತಾಪ ಸಿಂಹ, ಮೈತ್ರಿ ಅಭ್ಯರ್ಥಿಯಾಗಿ ವಿಜಯಶಂಕರ್, ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ, ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಬಿಜೆಪಿಯ ಬಸವರಾಜು ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.

ಬೆಂಗಳೂರು ಉತ್ತರದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮತ್ತು ರಾಜ್ಯ ಸಚಿವ ಕೃಷ್ಣ ಬೈರೇಗೌಡ, ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಯ ತೇಜಸ್ವಿ ಸೂರ್ಯ ಮತ್ತು ಮೈತ್ರಿ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಹಾಗೂ ಚಿಕ್ಕಬಳ್ಳಾಪುರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ವೀರಪ್ಪಮೊಯ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಚ್ಚೇಗೌಡ ಸ್ಪರ್ಧಿಸಿದ್ದು ಹೈವೋಲ್ಟೇಜ್ ಕ್ಷೇತ್ರಗಳಾಗಿವೆ. ಈ ಕ್ಷೇತ್ರಗಳಲ್ಲಿ ಬಿರುಸಿನ ಚುನಾವಣೆ ನಡೆಯಲಿದೆ.

ಎಲ್ಲಿ? ಎಷ್ಟು ಅಭ್ಯರ್ಥಿಗಳು?: ಮೊದಲ ಹಂತದಲ್ಲಿ 241 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಉಡುಪಿ-ಚಿಕ್ಕಮಗಳೂರು 14, ಹಾಸನ 10, ದಕ್ಷಿಣ ಕನ್ನಡ 17, ಚಿತ್ರದುರ್ಗ 24, ತುಮಕೂರು 23, ಮಂಡ್ಯ 27, ಮೈಸೂರು 30, ಚಾಮರಾಜನಗರ 13, ಬೆಂಗಳೂರು ಗ್ರಾಮಾಂತರ 21, ಬೆಂಗಳೂರು ಉತ್ತರ 38, ಬೆಂಗಳೂರು ಕೇಂದ್ರ 30, ಬೆಂಗಳೂರು ದಕ್ಷಿಣ 35, ಚಿಕ್ಕಬಳ್ಳಾಪುರ 25, ಕೋಲಾರ 23 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಒಟ್ಟು ಮತಗಟ್ಟೆಗಳು: ಮೊದಲ ಹಂತದ 14 ಕ್ಷೇತ್ರಗಳಲ್ಲಿ 30,164 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಉಡುಪಿಯಲ್ಲಿ ಅತಿ ಕಡಿಮೆ 1,837 ಮತಗಟ್ಟೆಗಳಿವೆ. ಸುಮಾರು 2.50 ಕೋಟಿ ಮತದಾರರು ಈ ಕ್ಷೇತ್ರಗಳಲ್ಲಿ ಮತ ಚಲಾವಣೆ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News