ಭ್ರಷ್ಟಾಚಾರ ಮುಕ್ತ ಎನ್ನುತ್ತಲೇ ಮೋದಿಯಿಂದ ವ್ಯಾಪಕ ಭ್ರಷ್ಟಾಚಾರ: ಎಚ್.ಡಿ.ದೇವೇಗೌಡ

Update: 2019-04-15 17:01 GMT

ಚಿಕ್ಕಮಗಳೂರು, ಎ.15: ಪ್ರಧಾನಿ ಮೋದಿ ಭ್ರಷ್ಟಚಾರ ಮುಕ್ತ ಭಾರತ ಮಾಡುತ್ತೇನೆ ಎಂದು ಅಧಿಕಾರಕ್ಕೂ ಮುನ್ನ ಭರವಸೆ ನೀಡಿದ್ದರು. ಆದರೆ ಪ್ರಸಕ್ತ ಅವರು ಚುನಾವಣೆಗೆ ಡಬ್ಬದಲ್ಲಿ ಹಣ ಸಾಗಿಸುತ್ತಿದ್ದಾರೆ. ಚುನಾವಣೆಯಲ್ಲಿ ಹಣದ ಹೊಳೆ ಹರಿಸುತ್ತಿರುವುದು ಮಾಧ್ಯಮಗಳಲ್ಲಿ ನೋಡಿದ್ದೇನೆ. ಭ್ರಷ್ಟ ಮುಕ್ತ ಭಾರತ ಎನ್ನುತ್ತಲೇ ಮೋದಿ ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದರು.

ಸೋಮವಾರ ನಗರದ ವಿಜಯಪುರದ ಗಣಪತಿ ಪೆಂಡಾಲ್ ಆವರಣದಲ್ಲಿ ಮೈತ್ರಿ ಪಕ್ಷಗಳು ಪ್ರಮೋದ್ ಮಧ್ವರಾಜ್ ಪರ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ತಾನು ಪ್ರಧಾನಿಯಾಗಿದ್ದ ಹನ್ನೊಂದುವರೆ ತಿಂಗಳು ಈ ದೇಶದಲ್ಲಿ ಯಾವ ಕೋಮುಗಲಭೆಗಳೂ ನಡೆದಿರಲಿಲ್ಲ. ಸಣ್ಣ ಅಹಿತಕರ ಘಟನೆಗಳಿಗೂ ಅವಕಾಶ ನೀಡಲಿಲ್ಲ. ಜಮ್ಮು ಕಾಶ್ಮೀರಕ್ಕೆ ಐದು ಬಾರಿ ಭೇಟಿ ನೀಡಿದ್ದೆ. ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಈ ಬಗ್ಗೆ ಇತ್ತೀಚೆಗೆ ಸಂಸತ್‍ನಲ್ಲಿ ನಾನು ಮಾಡಿದ ಸಾಧನೆಗಳ ಬಗ್ಗೆ ಹೇಳಿದಾಗ ಅವುಗಳಲ್ಲಿ ಕೆಲವು ಅಭಿವೃದ್ಧಿ ಯೋಜನೆಗಳನ್ನು ನಾನೇ ಮಾಡಿದ್ದು ಎಂದರು ಎಂದು ದೇವೇಗೌಡ ಆರೋಪಿಸಿದರು.

ಮೋದಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಬಗ್ಗೆ ದೊಡ್ಡದಾಗಿ ಭಾಷಣ ಮಾಡುತ್ತಾರೆ. ಆದರೆ ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಗೆ 43ಕ್ಕೂ ಹೆಚ್ಚು ಸೈನಿಕರು ವೀರ ಮರಣವನ್ನಪ್ಪಿದರು. ತಮ್ಮ ಸರಕಾರದ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಸ್ಥಾನಕ್ಕೆ ಗೌರವ ತರುವ ರೀತಿಯಲ್ಲಿ ಮಾತನಾಡತ್ತಿಲ್ಲ. ಸೈನಿಕರು ಹಾಕಿಕೊಳ್ಳಲು ಸರಿಯಾದ ಶೂ ಇರಲಿಲ್ಲ, ಸಮವಸ್ತ್ರ ಇರಲಿಲ್ಲ, ಗುಂಡು ನಿರೋಧಕ ಜಾಕೆಟ್ ಇರಲಿಲ್ಲ. ನಾನು ಪ್ರಧಾನಿ ಆದ ನಂತರ ಸರಿಯಾದ ಶೂ, ಸಮವಸ್ತ್ರ, ಗುಂಡು ನಿರೊಧಕ ಜಾಕೆಟ್ ನೀಡಿದ್ದೇನೆ ಎಂದು ಹೇಳುತ್ತಾರೆ. ವಾಜಿಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ನಡೆದ ಜಮ್ಮು ಕಾಶ್ಮೀರ ಯುದ್ಧದಲ್ಲಿ ಸೈನಿಕರು ಜಯಶಾಲಿಗಳಾಗಲಿಲ್ಲವೇ ? ಇಂದಿರಾಗಾಂಧಿ ಅವಧಿಯಲ್ಲಿ ನಡೆದ 1971ರಲ್ಲಿ ನಡೆದ ಭಾರತ ಪಾಕಿಸ್ತಾನ ಯುದ್ಧದಲ್ಲಿ ನಮ್ಮ ಸೈನಿಕರು ಗೆಲುವು ಸಾಧಿಸಲಿಲ್ಲವೇ ಎಂದು ಪ್ರಶ್ನಿಸಿದರು.

ನಮ್ಮನ್ನು ಮುಂದೆ ನೂಕಿ ಆಟ ಆಡುವ ವರ್ಗ ಒಂದಿದೆ. ಯುವಜನತೆ ಮೋದಿ ಮೋದಿ ಎನ್ನುವ ಶಬ್ಧ ಬಿಟ್ಟು, ನಮಗೂ ಶಕ್ತಿ ಇದೆ ಎಂಬುದನ್ನು ಈ ಚುನಾವಣೆಯಲ್ಲಿ ಸಾಬೀತು ಮಾಡಬೇಕಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಫೇಲ್ ಹಗರಣವನ್ನು ಬಯಲಿಗೆಳೆದರೆ ಹಗರಣದ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸಂಸತ್‍ನ ಒಳಗೇ ಬರಲಿಲ್ಲ, ಇದರ ಬಗ್ಗೆ ಚರ್ಚಿಸುವ ಶಕ್ತಿ ಅವರಿಗೆ ಇಲ್ಲವೇ? ಇಂತಹವರು ಪ್ರಧಾನಿ ಕುರ್ಚಿ ಮೇಲೆ ಕೂರಬೇಕೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ದೇವೇಗೌಡ-ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಎಲ್ಲ ವರ್ಗಗಳ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರಲಾಯಿತು. ಬೆಂಗಳೂರು ಐಟಿ ಹಬ್ ಆಗಿ ಜಗತ್ತಿನಲ್ಲಿ ಮುಂಚೂಣಿಗೆ ಬಂತು ಎಂದ ಅವರು ಜಿಲ್ಲೆಯಲ್ಲಿನ ಇನಾಂ ಸಮಸ್ಯೆ, ನೀರಾವರಿ ಸಮಸ್ಯೆಗೆ ಎಚ್.ಡಿ.ಕುಮಾರಸ್ವಾಮಿ ಸ್ಪಂದಿಸಿದ್ದಾರೆಂದ ಅವರು, ದೇಶದಲ್ಲಿ ಎಲ್ಲ ಸಮುದಾಯಗಳ ಜನರು ಸೌಹಾರ್ದದಿಂದ ಬದುಕಲು ಮೈತ್ರಿ ಪಕ್ಷಗಳಿಗೆ ಅಧಿಕಾರ ನೀಡಿ ಎಂದು ಮನವಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಜನರ ಭಾವನೆಗಳ ಆಧಾರದ ಮೇಲೆ ಚುನಾವಣೆ ಎದುರಿಸುತ್ತಿದ್ದಾರೆ. ದೇಶವನ್ನು ಬಿಜೆಪಿಗೆ ಗುತ್ತಿಗೆ ನೀಡಿಲ್ಲ. ಬಿಜೆಪಿಯಲ್ಲಿದ್ದರೇ ಮಾತ್ರ ದೇಶಪ್ರೇಮಿಗಳು ಉಳಿದವರು ದೇಶದ್ರೋಹಿಗಳು ಎನ್ನುವವರು ದೇಶಕ್ಕೆ ಕಂಟಕ, ಇವರ ಆಡಳಿತದಿಂದ ದೇಶಕ್ಕೆ ಗಂಡಾಂತರ ಬರಲಿದೆ ಎಂದು ಟೀಕಿಸಿದ ಅವರು, ಅಂಬೇಡ್ಕರ್ ಸಂವಿಧಾನದಲ್ಲಿ ಇಂತಹವರಿಗೆ ಅವಕಾಶವಿಲ್ಲ. ಈ ಕಾರಣಕ್ಕೆ ಅಂಬೇಡ್ಕರ್ ಸಂವಿಧಾನದಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ಸಂವಿಧಾನವನ್ನು ಬದಲಾಯಿಸಲು ಹೊರಟಿದ್ದಾರೆ. ಕಾಂಗ್ರೆಸ್ ದೇಶಕ್ಕೆ ಬಲಿದಾನ ಮಾಡಿದ ಪಕ್ಷ ಎಂಬ ಇತಿಹಾಸ ಹೊಂದಿದೆ. ಕಾಂಗ್ರೆಸ್ ಅಂಬೇಡ್ಕರ್ ಸಂವಿಧಾನದ ಪರವಾಗಿ ಹಿಂದೆಯೂ ಇತ್ತು, ಮುಂದೆಯೂ ಇರಲಿದೆ ಎಂದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮಾತನಾಡಿ, ಕಾಂಗ್ರೆಸ್ ಪಕ್ಷದ ವ್ಯಕ್ತಿಯೊಬ್ಬ ಜೆಡಿಎಸ್ ಚಿಹ್ನೆಯಡಿಯಲ್ಲಿ ಚುನಾವಣೆಗೆ ಸ್ಪರ್ಧಿಸಿರುವುದು ಇತಿಹಾಸವಾಗಿದ್ದು, ಸಂಸದೆ ಶೋಭಾ ಕರಂದ್ಲಾಜೆ ಅವರ ಜನವಿರೋಧಿ ಅಲೆ ನನಗೆ ಶ್ರೀರಕ್ಷೆಯಾಗಲಿದೆ. ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವ ಜವಬ್ದಾರಿ ಕಾರ್ಯಕರ್ತರದ್ದು, ಗೆದ್ದ ಬಳಿಕ ಕಾರ್ಯಕರ್ತರ ಜವಬ್ದಾರಿ ನನ್ನದು. ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಸಂಸತ್‍ನಲ್ಲಿ ಹೋರಾಡುತ್ತೇನೆಂದು ಭರವಸೆ ನೀಡಿದರು.

ಮಾಜಿ ಸಚಿವ ಬಿ.ಎಲ್.ಶಂಕರ್ ಮಾತನಾಡಿದರು. ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ, ಕಾಂಗ್ರೆಸ್ ಮುಖಡ ಬಿ.ಎಲ್.ಶಂಕರ್, ಮಾಜಿ ಸಚಿವೆ ಮೋಟಮ್ಮ, ಮಾಜಿ ಸಚಿವ ಸಗೀರ್ ಅಹಮದ್, ಮಾಜಿ ಶಾಸಕ ಜಿ.ಹೆಚ್. ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್ ದೇವರಾಜ್, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ರೇಖಾಹುಲಿಯಪ್ಪಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News