ಸುಳ್ಳು ಹೇಳುವುದರಲ್ಲಿ ಮೋದಿ ನಂ.1, ಪ್ರತಾಪ್ ಸಿಂಹ ನಂ.2: ಸಿದ್ದರಾಮಯ್ಯ
ಕುಶಾಲನಗರ, ಎ.15: ಸುಳ್ಳು ಹೇಳಿ ಜನರನ್ನು ಮೋಡಿ ಮಾಡುವುದರಲ್ಲಿ ನರೇಂದ್ರ ಮೋದಿಯವರು ನಂ.1 ಆದರೆ, ಪ್ರತಾಪ್ ಸಿಂಹ ನಂ.2 ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಕುಶಾಲನಗರದಲ್ಲಿ ನಡೆದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಿಂದ ಮೋದಿ ನೇತೃತ್ವದ ಸರಕಾರ ಜನರನ್ನು ಮೋಡಿ ಮಾಡಿದೆ. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭ ನೀಡಿದ್ದ 165 ಪ್ರಣಾಳಿಕೆಗಳನ್ನೂ ಈಡೇರಿಸಿದ್ದೇನೆ. ಆದರೆ, ಸುಳ್ಳಿನ ಸರದಾರ ನರೇಂದ್ರ ಮೋದಿಯವರಿಗೆ ಈ ರೀತಿ ಮಾತನಾಡಲು ಯಾವ ನೈತಿಕತೆ ಇದೆ. ಸೈನಿಕರ ಹೆಸರನ್ನೇಳಿ ರಾಜಕೀಯ ಮಾಡುತ್ತಿರುವ ಮೋದಿಗೆ ನಾಚಿಕೆಯಾಗಬೇಕು ಎಂದರು. ಕಾಂಗ್ರೆಸ್- ಜೆಡಿಎಸ್‌ನವರು ಒಂದಾಗಿ ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಅವರಿಗೆ ಮತವನ್ನು ನೀಡಿ ಭಾರೀ ಅಂತರದ ಗೆಲುವನ್ನು ನೀಡಬೇಕು ಎಂದು ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಜೆಡಿಎಸ್ ಹಿರಿಯ ಮುಖಂಡ ಬಿ.ಎ.ಜೀವಿಜಯ ಮಾತನಾಡಿ, ವಿಜಯ್ ಶಂಕರ್ ಅವರು ಕಾಂಗ್ರೆಸ್‌ನವರು ಎಂಬುದನ್ನು ಮರೆತು ದೇಶದ ಅಭಿವೃದ್ಧಿಗಾಗಿ ಮೈತ್ರಿ ಅಭ್ಯರ್ಥಿ ಯನ್ನು ಜಯಗೊಳಿಸಬೇಕು ಎಂದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಹಿರಿಯ ಮುಖಂಡ ಎಂ.ಸಿ. ನಾಣಯ್ಯ, ಮಾಜಿ ಸಚಿವ ಸಿ.ಎಂ.ಇಬ್ರಾಹೀಂ ಮಾತನಾಡಿದರು. ಈ ಸಂದರ್ಭ ಕಾಂಗ್ರೆಸ್-ಜೆಡಿಎಸ್ ಪ್ರಮುಖರು ಹಾಗೂ ಕಾರ್ಯಕರ್ತರು ಹಾಜರಿದ್ದರು.