ಅಭ್ಯರ್ಥಿಗಳ ಕ್ರಿಮಿನಲ್ ಪ್ರಕರಣಗಳನ್ನು ಪ್ರಕಟಿಸಲು ಚು.ಆಯೋಗ ಕಟ್ಟುನಿಟ್ಟಿನ ಸೂಚನೆ

Update: 2019-04-15 17:20 GMT

ಬೆಂಗಳೂರು, ಎ.15: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ತಮ್ಮ ಮೇಲಿರುವ ಕ್ರಿಮಿನಲ್ ಪ್ರಕರಣಗಳನ್ನು ಈ ಕೂಡಲೇ ಮಾಧ್ಯಮಗಳಲ್ಲಿ ಪ್ರಕಟಿಸಬೇಕು ಎಂದು ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಸೋಮವಾರ ನಗರದ ವಾರ್ತಾಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಇದುವರೆಗೂ ಬಹುತೇಕ ಅಭ್ಯರ್ಥಿಗಳು ತಮ್ಮ ಮೇಲಿರುವ ಕ್ರಿಮಿನಲ್ ಪ್ರಕರಣಗಳು ಕುರಿತು ಸಾರ್ವಜನಿಕವಾಗಿ ಪ್ರಕಟಿಸಲು ಮುಂದಾಗಿಲ್ಲ. ಹೀಗಾಗಿ, ಮುಂದಿನ ಎರಡು ದಿನಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಹೇಳಿದರು.

ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಸುದ್ದಿ ಪತ್ರಿಕೆಗಳಲ್ಲಿ ಮೂರು ಬಾರಿ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಮೂರು ಬಾರಿ ತಮ್ಮ ಮೇಲಿರುವ ಕ್ರಿಮಿನಲ್ ಪ್ರಕರಣಗಳು ಪ್ರಕಟಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚನೆಯಾಗಿದೆ. ಆದುದರಿಂದ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಎಲ್ಲ ಅಭ್ಯರ್ಥಿಗಳು ತಮ್ಮ ಕ್ಷೇತ್ರದ ಪ್ರದೇಶದಲ್ಲಿರುವ ಹೆಚ್ಚು ಪ್ರಸಾರವಿರುವ ದಿನಪತ್ರಿಕೆಗಳಲ್ಲಿ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಘೋಷಣೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ರಾಜಕೀಯ ಪಕ್ಷಗಳು ತಮ್ಮ ಅಧಿಕೃತ ವೆಬ್‌ಸೈಟ್‌ಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಕುರಿತ ಕ್ರಿಮಿನಲ್ ಪ್ರಕರಣಗಳ ವರದಿಯನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದ ಅವರು, ಚುನಾವಣಾ ಆಯೋಗದ ಆದೇಶವನ್ನು ಪಾಲಿಸದಿದ್ದಲ್ಲಿ ಆಯೋಗದ ಕಾನೂನುಬದ್ಧ ನಿರ್ದೇಶನಗಳಲ್ಲಿ ಪಾಲಿಸುವಲ್ಲಿ ವೈಫಲ್ಯ ಎಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಚಿವ ಸಿ.ಎಚ್.ಶಿವಳ್ಳಿ ಅವರ ಅಕಾಲಿಕ ಮರಣದಿಂದ ತೆರವಾದ ವಿಧಾನಸಭಾ ಕ್ಷೇತ್ರಕ್ಕೆ ಮೇ 19 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಸಂಬಂಧ ಇದುವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳದವರಿಗೆ ಮೇ 12 ರವರೆಗೂ ಹೆಸರು ನೋಂದಣಿಗೆ ಅವಕಾಶ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಚುನಾವಣೆ ಘೋಷಣೆಯಾಗಿರುವುದರಿಂದ ಮೇ 19 ರವರೆಗೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಅವರು ವಿವರಿಸಿದರು.

ವೈಯಕ್ತಿಕ ಟೀಕೆಗೆ ಕ್ರಮ: ರಾಜಕೀಯ ಪಕ್ಷಗಳ ನಾಯಕರು ಬೇರೆ ಪಕ್ಷಗಳ ನಾಯಕರ ವೈಯಕ್ತಿಕ ಜೀವನದ ಕುರಿತು ಟೀಕಿಸಿದರೆ ಕ್ರಮ ಕೈಗೊಳ್ಳಲಾಗುವುದು. ಈ ಹಿಂದಿನ ದಾಖಲೆಗಳು ಅಥವಾ ಕೆಲಸಗಳಿಗೆ ಸೀಮಿತವಾಗಿರಬೇಕು ಎಂದು ಅವರು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಚಿತ್ರದುರ್ಗದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅವರ ಹೆಲಿಕ್ಯಾಪ್ಟರ್‌ನಿಂದ ಅನುಮಾನಾಸ್ಪದ ಬಾಕ್ಸ್‌ವೊಂದನ್ನು ಭದ್ರತಾ ಸಿಬ್ಬಂದಿ ಮತ್ತೊಂದು ಕಾರಿಗೆ ಸಾಗಿಸುತ್ತಿದ್ದ ವಿಡಿಯೋ ಕುರಿತು ತನಿಖೆ ಪೂರ್ಣಗೊಂಡಿದ್ದು, ಅದು ಪ್ರಧಾನಿಯ ಭದ್ರತಾ ವಸ್ತುಗಳನ್ನು ಹೊತ್ತೊಯ್ಯುತ್ತಿದ್ದ ಪೆಟ್ಟಿಗೆ ಎಂದು ದೃಢೀಕರಿಸಲಾಗಿದೆ ಎಂದು ಚುನಾವಣಾಧಿಕಾರಿ ಸ್ಪಷ್ಟಪಡಿಸಿದರು.

ಕಳೆದ ಬಾರಿ ಚುನಾವಣಾ ರಾಯಭಾರಿಯಾಗಿದ್ದ ರಾಹುಲ್ ದ್ರಾವಿಡ್‌ಗೆ ಈ ಬಾರಿ ಮತದಾನದಿಂದ ವಂಚಿತರಾಗಿರುವ ಕುರಿತು ಪ್ರತಿಕ್ರಿಯಿಸಿದ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಅವರು ಮನೆ ವಿಳಾಸ ಬದಲಾವಣೆ ಮಾಡಿದರು. ಅದರ ಬಳಿಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ನಮೂನೆ 6 ನೀಡಬೇಕಿತ್ತು, ಅವರು 7 ನೀಡಿದ್ದಾರೆ. ಬೂತ್ ಮಟ್ಟದ ಅಧಿಕಾರಿಗಳು ಅವರಲ್ಲಿಗೆ ಹೋಗಿದ್ದರೂ ಕೆಲಸದ ನಿಮಿತ್ತ ಸಿಕ್ಕಿಲ್ಲ. ತಾಂತ್ರಿಕ ಕಾರಣದಿಂದ ಅವರ ಹೆಸರು ಕೈ ಬಿಟ್ಟುಹೋಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News