ಬಿಜೆಪಿ ನೀತಿಗೆಟ್ಟ ರಾಜಕಾರಣ ಮಾಡುತ್ತಿದೆ: ದಿನೇಶ್‍ ಗುಂಡೂರಾವ್

Update: 2019-04-15 17:35 GMT

ಮಡಿಕೇರಿ,ಎ.15: ಬಿಜೆಪಿಗೆ ಮತಹಾಕದವರನ್ನು ಪಾಕಿಸ್ತಾನದೊಂದಿಗೆ ಹೋಲಿಸಿ ನೋಡುವಂತಹ ನೀತಿಗೆಟ್ಟ ರಾಜಕಾರಣವನ್ನು ಬಿಜೆಪಿ ಮಾಡುತ್ತಿದೆ. ಪ್ರತಿಯೊಂದು ಹಂತದಲ್ಲೂ ಪಾಕಿಸ್ತಾನವನ್ನು ಬಿಜೆಪಿ ಎಳೆದು ತರುತ್ತಿದೆ. ಆದರೆ, ಪಾಕ್ ಪ್ರಧಾನಿ ಇಮ್ರಾನ್ ಖಾನ್‍ಗೆ ನರೇಂದ್ರ ಮೋದಿಯವರೆ ಮತ್ತೆ ಭಾರತದ ಪ್ರಧಾನಿಯಾಗಬೇಕಂತೆ. ಪಾಕ್‍ನ ಇಚ್ಛೆಯೇ ಹೀಗಿರುವಾಗ ಬಿಜೆಪಿಗೆ ವಿರುದ್ಧವಾಗಿ ಮತ ನೀಡುವವರ ಬಗ್ಗೆ ಬಿಜೆಪಿ ಮಾಡುತ್ತಿರುವ ವ್ಯಾಖ್ಯಾನ ಸರಿಯೇ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಕುಶಾಲನಗರದಲ್ಲಿ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅರ್ಥವಾಗದ ತೆರಿಗೆ ಪದ್ಧತಿ, ನೋಟು ಅಮಾನ್ಯೀಕರಣ, ಜಿಎಸ್‍ಟಿ ನಿಯಮಗಳಿಂದಾಗಿ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಬಿಜೆಪಿ ನಿರಂತರವಾಗಿ ದೇಶವನ್ನು ಒಡೆಯುವ ಕಾರ್ಯದಲ್ಲಿ ತೊಡಗಿದೆ. ಕಳೆದ ಚುನಾವಣೆಯಲ್ಲಿ ಶೇ.67 ರಷ್ಟು ಮತದಾರರು ಬಿಜೆಪಿ ವಿರುದ್ಧವಾಗಿ ಮತದಾನ ಮಾಡಿದ್ದಾರೆ. ದೇಶದಲ್ಲಿರುವ ಎಲ್ಲರು ದೇಶ ಭಕ್ತರೇ ಆದರೆ, ಮತಹಾಕಲಿಲ್ಲ ಎನ್ನುವ ಕಾರಣಕ್ಕೆ ದೇಶ ವಿರೋಧಿಗಳು ಎನ್ನುವುದು ಸರಿಯಲ್ಲ. ನಾವು ಬಿಜೆಪಿಯವರನ್ನು ದೇಶ ವಿರೋಧಿಗಳು ಎಂದು ಎಲ್ಲಿಯೂ ಹೇಳಿಲ್ಲ ಮತ್ತು ಹೇಳಲೂ ಬಾರದು. ನೀವು ಹೇಗೆ ಇರಬೇಕು, ಯಾವ ರೀತಿ ನಡೆದುಕೊಳ್ಳಬೇಕು ಎನ್ನುವುದನ್ನು ಇವರು ಹೇಳುವ ಅಗತ್ಯವಿಲ್ಲ. ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ದಿನೇಶ್ ಗುಂಡೂರಾವ್, ದೇಶದ ಒಟ್ಟು ವ್ಯವಸ್ಥೆಯನ್ನು ಸರಿಪಡಿಸಲು ರಾಹುಲ್ ಗಾಂಧಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಬರಬೇಕೆಂದರು.

ನೋಟು ಅಮಾನ್ಯೀಕರಣದ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೇಳಿಕೊಂಡಿತ್ತು. ಆದರೆ, ಇಂದು ಕಪ್ಪು ಹಣ ಬಹುತೇಕರ ಕೈಯಲ್ಲಿ ಇದೆ ಎಂದು ಆರೋಪಿಸಿದರು. ನೋಟು ಅಮಾನ್ಯೀಕರಣದ ನಾಟಕವಾಡಿ ಬಡವರ ಹಣ ಪಡೆದು ಶ್ರೀಮಂತರ ಕಪ್ಪು ಹಣವನ್ನು ಬಿಳಿಮಾಡಲಾಗಿದೆ ಎಂದು ಟೀಕಿಸಿದರು.

ಮನ್‍ಕೀ ಬಾತ್ ಮಾತನಾಡುವ ನರೇಂದ್ರ ಮೋದಿ ಅವರಿಗೆ ಜನರ ಮಾತು ಕೇಳಲು ಸಮಯವಿಲ್ಲ. ಮೋದಿಯವರು ಏನನ್ನು ಮಾಡದಿದ್ದರು ದೇಶದ ಸಾಕಷ್ಟು ಮಾಧ್ಯಮಗಳು ಮೋದಿ ಪರ ಅಗತ್ಯಕ್ಕಿಂತ ಹೆಚ್ಚು ಪ್ರಚಾರ ಮಾಡುತ್ತಿವೆ. ಇದಕ್ಕೆ ಅನೇಕ ಮಾಧ್ಯಮಗಳು ಬಿಜೆಪಿ ಕಪಿಮುಷ್ಠಿಯಲ್ಲಿರುವುದೇ ಕಾರಣವೆಂದು ಆರೋಪಿಸಿದರು.

ಈ ಹಿಂದೆ ಸಂಸದರಾಗಿದ್ದ ಪ್ರತಾಪ ಸಿಂಹ ಅವರ ಕೊಡುಗೆ ಏನೂ ಇಲ್ಲ. ಬೆಂಕಿ ಹಚ್ಚುವ ಕೆಲಸವನ್ನು ಮಾತ್ರ ಮಾಡಿದ್ದಾರೆ. ರಾಜ್ಯದ ಯಾವೊಬ್ಬ ಬಿಜೆಪಿ ಎಂಪಿ ಕೂಡ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News