ಇದು ಕೋಮುವಾದಿಗಳು- ಜಾತ್ಯತೀತವಾದಿಗಳ ನಡುವಿನ ಚುನಾವಣೆ: ಸಿದ್ದರಾಮಯ್ಯ

Update: 2019-04-15 17:40 GMT

ಚಿಕ್ಕಮಗಳೂರು, ಎ.15: ದೇಶದಲ್ಲಿ ಈ ಬಾರಿ ನಡೆಯುತ್ತಿರುವ ಚುನಾವಣೆ ಕೋಮುವಾದಿಗಳು ಮತ್ತು ಜಾತ್ಯತೀತವಾದಿಗಳ ನಡುವಿನ ಚುನಾವಣೆ ಎಂದು ಮಾಜೀ ವುುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

ನಗರದ ವಿಜಯಪುರದಲ್ಲಿನ ಗಣಪತಿ ಪೆಂಡಾಲ್ ಆವರಣದಲ್ಲಿ ಕಾಂಗ್ರೆಸ್-ಜೆಡಿಎಸ್-ಸಿಪಿಐ ಪಕ್ಷಗಳ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಕಾರ್ಯಕರ್ತರ ಬೃಹತ್ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರಸಕ್ತ ಕೋವಾದಿಗಳು ಅಧಿಕಾರದ ಅಮಲಿನಲ್ಲಿ ವಿಜೃಂಭಿಸುತ್ತಾ ಸರ್ವಾಧಿಕಾರದ ಆಡಳಿತ ನಡೆಸುತ್ತಿದ್ದಾರೆ. ಮನಬಂದಂತೆ ಆಡಳಿತ ನಡೆಸುತ್ತಾ, ಶೋಷಿತ ಜನರ ಭಾವನೆಗಳಿಗೆ ಬೆಲೆ ನೀಡದೇ ದೇಶದ ಸಾಮರಸ್ಯವನ್ನು ಹಾಳುಗೆಡವುತ್ತಿದ್ದಾರೆ. ಈ ಚುನಾವಣೆ ಕೋಮುವಾದಿಗಳು ಮತ್ತು ಜಾತ್ಯತೀತರ ನಡುವಿನ ಸಂಘರ್ಷವಾಗಿದ್ದು, ಈ ಚುನಾವಣೆ ಬಳಿಕ ಕೋಮುವಾದಿ ಮನಸ್ಥಿತಿಯವರು ಮೂಲೆಗುಂಪಾಗಲಿದ್ದಾರೆ ಎಂದು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಬಿಜೆಪಿ ಪಕ್ಷದ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ, ದೇಶದ ಬಡಜನರ ಸಮಸ್ಯೆಗಳು ಹಾಗೂ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಶೇ.20ರಷ್ಟು ಜನ ಕಡುಬಡವರಿದ್ದಾರೆ. ನಿರುದ್ಯೋಗ ತಾಂಡವವಾಡುತ್ತಿದೆ. ರೈತರು ಅತಂತ್ರರಾಗಿದ್ದಾರೆ. ಹಿಂದುಳಿದ ವರ್ಗ-ಅಲ್ಪಸಂಖ್ಯಾತರು ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. ಆದರೆ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಈ ವಿಷಯಗಳ ಮೇಲೆ ಎಲ್ಲೂ ಮಾತನಾಡುತ್ತಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಯಾವುದೇ ಒಂದು ಸರಕಾರ ಚುನಾವಣೆ ಸಂದರ್ಭದಲ್ಲಿ ತನ್ನ ಐದು ವರ್ಷಗಳ ಸಾಧನೆಗಳನ್ನು ಜನರ ಮುಂದಿಟ್ಟು ಮುಂದಿನ ಐದು ವರ್ಷಗಳಲ್ಲಿ ಏನು ಮಾಡುತ್ತೇವೆಂಬುದನ್ನು ಹೇಳಬೇಕು. ಕಳೆದ ಬಾರಿ ನೀಡಿದ್ದ ಭರವಸೆಗಳನ್ನು ಈಡೇರಿಸಲಾಗಿದೆಯೇ ಇಲ್ಲವೆ ಎಂಬುದನ್ನು ಹೇಳಬೇಕು. ಈಡೇರಿಸದಿದ್ದಲ್ಲಿ ಕಾರಣ ಏನೆಂಬುದನ್ನೂ ಹೇಳಬೇಕಿತ್ತು ಎಂದರು. ಆದರೆ, ಮೋದಿ ಸರಕಾರದ ಸಾಧನೆ ಶೂನ್ಯವಾಗಿರು ವುದರಿಂದ ಈ ಬಗ್ಗೆ ಮೋದಿ, ಅಮಿತ್ ಶಾ ಎಲ್ಲೂ ಮಾತನಾಡುತ್ತಿಲ್ಲ. ಬದಲಾಗಿ ಕೋಮುವಾದದ ಮೂಲಕ ಜನರ ಭಾವನೆಗಳನ್ನು ಕೆರಳಿಸುವ ಮಾತನ್ನಾಡುತ್ತಿದ್ದಾರೆ. ಆದ್ದರಿಂದ ಈ ಬಾರಿ ಯಾರಿಗೆ ಅಧಿಕಾರ ನೀಡಬೇಕೆನ್ನುವ ಬಗ್ಗೆ ನಿರ್ಧರಿಸಬೇಕು ಎಂದು ಸಿದ್ದರಾಮಯ್ಯ ನುಡಿದರು,

ಪ್ರಧಾನಿ ನರೇಂದ್ರ ಮೋದಿಗೆ ಚೌಕಿದಾರ ಎಂದು ಯಾರೂ ಬಿರುದು ನೀಡಿಲ್ಲ. ಅವರು ತಮ್ಮನ್ನು ತಾವೇ ಚೌಕೀದಾರ ಎಂದು ಕರೆದುಕೊಂಡಿದ್ದಾರೆ. ದೇಶದ ಬ್ಯಾಂಕ್‌ಗಳಲ್ಲಿದ್ದ ಸಾವಿರಾರು ಕೋ. ರೂ. ಜನರ ಹಣವನ್ನು ನೀರವ್ ಮೋದಿ, ವಿಜಯ್‌ಮಲ್ಯ, ಲಲಿತ್ ಮೋದಿ, ಚೋಕ್ಸಿಯಂತವರು ಕೊಳ್ಳೆ ಹೊಡೆದು ದೇಶ ಬಿಟ್ಟು ಪರಾರಿಯಾಗುವಾಗ ಈ ಚೌಕೀದಾರ ಎಲ್ಲಿದ್ದರು ಎಂದು ಪ್ರಶ್ನಿಸಿದ ಅವರು, ಸಾಮಾನ್ಯ ಜನರ ಹಣವನ್ನು ಕೊಳ್ಳೆ ಹೊಡೆದವರಿಗೆ ಮಾತ್ರ ಮೋದಿ ಕಾವಲುಗಾರರಾಗಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಯಡಿಯೂರಪ್ಪ, ಜನಾರ್ಧನ ರೆಡ್ಡಿ, ಕಟ್ಟಾಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ ನಾವೂ ಚೌಕಿದಾರರೆಂದು ಹೇಳಿಕೊಳ್ಳುತ್ತಿದ್ದಾರೆ. ಜೈಲಿಗೆ ಹೋಗಿಬಂದವರು ಚೌಕಿದಾರರಲ್ಲ ಚೋರ್ ಚೌಕೀದಾರ್‌ಗಳು ಎಂದು ವಾಗ್ದಾಳಿ ನಡೆಸಿದರು. ರಫೇಲ್ ಒಪ್ಪಂದದ ವೇಳೆ 30 ಸಾವಿರ ಕೋ. ರೂ. ಭ್ರಷ್ಟಾಚಾರ ನಡೆದಿದೆ. ಕಳೆದ ಐದು ವರ್ಷಗಳ ಮೋದಿ ಅಧಿಕಾರವಧಿಯಲ್ಲಿ ಎಲ್ಲ ಸಂವಿಧಾನಿಕ ಸಂಸ್ಥೆಗಳು ಅಪಾಯದಲ್ಲಿವೆ. ಐಟಿ ದಾಳೆಗೆ ನಮ್ಮ ವಿರೋಧವಿಲ್ಲ. ಆದರೆ, ಮೋದಿ, ಅಮಿತ್ ಶಾ ಅಣತಿಯಂತೆ ಐಟಿ ಇಲಾಖೆ ದಾಳಿ ಮಾಡಿರುವುದಕ್ಕೆ ವಿರೋಧವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಡಿಯೂರಪ್ಪ, ಅಶೋಕ್, ಸಿ.ಟಿ.ರವಿ, ಶೋಭಾ ಕರಂದ್ಲಾಜೆಯಂತವರು ಸತ್ಯಹರಶ್ಚಂದ್ರನ ವಂಶಸ್ಥರೇ? ಅವರು ಗಂಟು ಮಾಡಿಲ್ಲವೇ, ಅವರ ಮೇಲೇಕೆ ಐಟಿ ದಾಳಿ ನಡೆಯುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು,. 

ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಮೀಸಲಾತಿ ತೆಗೆಯಬೇಕೆಂದು ಹೇಳಿಕೆ ನೀಡಿದ್ದಾನೆ. ದಿಲ್ಲಿಯ ಜಂತರ್ ಮಂತರ್‌ನಲ್ಲಿ ಬಿಜೆಪಿಯವರೇ ಸಂವಿದಾನದ ಪ್ರತಿಗಳನ್ನು ಸುಟ್ಟುಹಾಕಿದ್ದಾರೆ. ಪ್ರತಾಪ್‌ಸಿಂಹ ಇದೇ ಧಾಟಿಯಲ್ಲಿ ಮಾತನಾಡುತ್ತಿದ್ದು, ಅಂಬೇಡ್ಕರ್ ಸಂವಿಧಾನ ಎಲ್ಲ ಧರ್ಮೀಯರಿಗೂ ಸಮಾನ ಅವಕಾಶ, ಹಕ್ಕು ನೀಡಿರುವುದು ಬಿಜೆಪಿಯವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಇದಕ್ಕೆ ಬಿಜೆಪಿಯವರು ಸಂವಿಧಾನವನ್ನು ವಿರೋಧಿಸುತ್ತಿದ್ದಾರೆ. ಅವರ ಉದ್ದೇಶ ಸಂವಿಧಾನ ಬದಲಾವಣೆಯಾಗಿದ್ದು, ನಮಗೆ ಸಂವಿಧಾನವೇ ಧರ್ಮಗ್ರಂಥ, ಅದೇ ನಮ್ಮ ಭಗವದ್ಗೀತೆ, ಕುರಾನ್, ಬೈಬಲ್ ಆಗಿದೆ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಎಚ್.ಡಿ.ದೇವೇಗೌಡ, ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ಬಿ.ಎಲ್. ಶಂಕರ್ ಮಾತನಾಡಿದರು. ಮಾಜಿ ಸಚಿವರಾದ ಸಗೀರ್ ಅಹ್ಮದ್, ಮೋಟಮ್ಮ, ಬಿ.ಬಿ.ನಿಂಗಯ್ಯ, ಎಚ್.ಎಚ್. ದೇವರಾಜ್, ಡಾ.ಡಿ.ಎಲ್. ವಿಜಯ್‌ ಕುಮಾರ್, ಎಸ್.ಎಲ್.ಭೋಜೇಗೌಡ, ಧರ್ಮೇಗೌಡ, ಎ.ಎನ್.ಮಹೇಶ್, ಸಂದೀಪ್, ಎಂ.ಎಲ್.ಮೂರ್ತಿ, ನಯನಾ ಮೋಟಮ್ಮ, ಪಿ.ವಿ.ಲೋಕೇಶ್, ಗಾಯತ್ರಿ ಶಾಂತೇಗೌಡ, ಎಚ್.ಟಿ. ರಾಜೇಂದ್ರ, ವೆಂಕಟೇಶ್ ಮತ್ತಿತರರುರು ಉಪಸ್ಥಿತರಿದ್ದರು.

ಈಶ್ವರಪ್ಪ, ಸಿ.ಟಿ.ರವಿ ಅವರಿಗೆ ಸಂಸ್ಕೃತಿ ಎಂಬುದೇ ಇಲ್ಲ. ಚುನಾವಣೆ ಸಂದರ್ಭದಲ್ಲಿ ಮಾನಸಿಕ ಅಸ್ವಸ್ಥರಂತೆ ಮಾತನಾಡುತ್ತಾರೆ. ನಾವು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲ್ಲ ಎಂದು ಈಶ್ವರಪ್ಪ ಹೇಳಿದರೆ, ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಮೋದಿಗೆ ಮತ ನೀಡದವರು ತಾಯ್ಗಂಡರು ಎಂದು ಹೇಳಿಕೆ ನೀಡಿದ್ದಾರೆ. ಸ್ವತಃ ಸಿ.ಟಿ.ರವಿಯೇ ಶೋಭಾ ಕರಂದ್ಲಾಜೆಗೆ ಓಟ್ ಹಾಕಲ್ಲ. ಗೋಬ್ಯಾಕ್ ಶೋಭಾ ಎಂದು ತನ್ನ ಹಿಂಬಾಲಕರ ಮೂಲಕ ಹೇಳಿಸಿದವನೇ ಸಿ.ಟಿ.ರವಿ ಎಂದು ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.

ನಾನು ಸಿಎಂ ಆಗಿದ್ದಾಗ ಕೊಟ್ಟ 165 ಭರವಸೆಗಳನ್ನೂ ಈಡೇರಿಸಿದ್ದೇನೆ. ಈ ಬಗ್ಗೆ ಮೋದಿಗೆ ಲೆಕ್ಕ ಕೊಡಲು ಸಿದ್ಧನಿದ್ದೇನೆ. ಪ್ರಧಾನಿ ಮೋದಿ ಚುನಾವಣೆಗೂ ಮುನ್ನ ನೀಡಿದ 15 ಲಕ್ಷದ ಭರವಸೆ, ಉದ್ಯೋಗ ಸೃಷ್ಟಿ, ಜನ್‌ಧನ್ ಖಾತೆಗೆ ಹಣ, ರೈತರ ಸಾಲ ಮನ್ನಾ ಘೋಷಣೆಗಳ ಬಗ್ಗೆ ಮೋದಿ ಲೆಕ್ಕ ಕೊಡಲಿ. ಈ ಬಗ್ಗೆ ಪ್ರಶ್ನಿಸಿದರೆ, ಚುನಾವಣಾ ಪ್ರಚಾರಕ್ಕಾಗಿ ಇದನ್ನು ಹೇಳಲಾಗಿತ್ತು, ಜಾರಿ ಮಾಡಲು ಅಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ಕೊಟ್ಟ ಮಾತಿನಂತೆ ನಡೆಯದವರಿಗೆ ಅಧಿಕಾರ ನೀಡಬಾರದು.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News