ಬುಡಕಟ್ಟು ಬಾಲಕಿಯರ ಮೇಲೆ ಅತ್ಯಾಚಾರ: ಹಾಸ್ಟೆಲ್ ಅಧಿಕಾರಿಗಳ ಬಂಧನ

Update: 2019-04-16 03:57 GMT

ಮಹಾರಾಷ್ಟ್ರ, ಎ.16: ಒಂಬತ್ತು ಮತ್ತು ಹನ್ನೊಂದು ವರ್ಷದ ಇಬ್ಬರು ಬುಡಕಟ್ಟು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಚಂದ್ರಾಪುರದ ಇನ್‌ಫ್ಯಾಂಟ್ ಜೀಸಸ್ ಇಂಗ್ಲಿಷ್ ಸ್ಕೂಲ್ ಹಾಸ್ಟೆಲ್‌ನ ಅಧೀಕ್ಷಕ ಮತ್ತು ಉಪ ಅಧೀಕ್ಷಕನನ್ನು ರಾಜುರಾ ಪೊಲೀಸರು ಬಂಧಿಸಿದ್ದಾರೆ. ಅಧಿಕ ಪ್ರಮಾಣದ ಮಾದಕ ವಸ್ತುಗಳನ್ನು ನೀಡಿದ್ದರಿಂದ ತೀವ್ರ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರ ವೈದ್ಯಕೀಯ ತಪಾಸಣೆ ನಡೆಸಿದಾಗ ಅವರ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಹಾಸ್ಟೆಲ್ ಅಧೀಕ್ಷಕ ಚಬನ್ ಪಚಾರೆ ಮತ್ತು ಉಪ ಅಧೀಕ್ಷಕ ನರೇಂದ್ರ ವರೂತ್‌ಕರ್ ಬಂಧಿತರು. ಬಂಧಿತರ ಕಚೇರಿಗಳಿಂದ ಭಾರಿ ಸಂಖ್ಯೆಯ ಕಾಂಡೋಮ್ ಮತ್ತು ವಯಾಗ್ರಾ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಬುಡಕಟ್ಟು ಜನಾಂಗದ ಬಾಲಕಿಯರ ಮೇಲೆ ಹಾಸ್ಟೆಲ್‌ನಲ್ಲಿ ಅತ್ಯಾಚಾರ ನಡೆದಿದೆ ಎಂಬ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಹಣಕಾಸು ಸಚಿವ ಸುಧೀರ್ ಮುಂಗಟಿವರ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಬುಡಕಟ್ಟು ಅಭಿವೃದ್ಧಿ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. "ಈ ಸಂಬಂಧ ಹಾಸ್ಟೆಲ್‌ನ ಇಬ್ಬರು ಸಿಬ್ಬಂದಿಯನ್ನು ಬಂಧಿಸಲಾಗಿದ್ದು, ಪೂರಕವಾಗಿ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಎಸ್ಪಿ ಮಹೇಶ್ವರ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ಮತ್ತೊಬ್ಬಳು ಬಾಲಕಿ ತನ್ನನ್ನು ಕೂಡಾ ಇದೇ ರೀತಿ ಪ್ರಜ್ಞೆ ತಪ್ಪಿಸಲಾಗಿತ್ತು ಎಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಆಕೆಯನ್ನೂ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಹಾಗೂ ಎಂಎನ್‌ಎಸ್ ಮುಖಂಡ ರಾಜು ಕುಕ್ಡೆ ಎಂಬುವವರು ನಿಯೋಗದೊಂದಿಗೆ ಎಸ್ಪಿಯವರನ್ನು ಭೇಟಿ ಮಾಡಿ, ಎಪ್ರಿಲ್ 6ರಂದು 13 ಮಂದಿ ಅಪ್ರಾಪ್ತ ವಯಸ್ಸಿನ ಬಾಲಕಿಯರು ಹಾಸ್ಟೆಲ್‌ನಲ್ಲಿ ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂದು ದೂರು ನೀಡಿದ್ದರು. ಸ್ಥಳೀಯ ಆಸ್ಪತ್ರೆಗೆ ಅವರನ್ನು ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ಬಾಲಕಿಯರ ಗುಪ್ತಾಂಗ ಊದಿಕೊಂಡಿರುವುದು ಪ್ರಾಥಮಿಕ ಪರೀಕ್ಷೆಯಿಂದ ತಿಳಿದುಬಂದ ಹಿನ್ನೆಲೆಯಲ್ಲಿ ಅತ್ಯಾಚಾರ ನಡೆದ ಬಗ್ಗೆ ಅನುಮಾನ ಹುಟ್ಟಿಕೊಂಡಿತ್ತು. ಮಾರ್ದನಿ ಮಹಿಳಾ ಮಂಚ್‌ನ ಸುಳಿವು ಆಧರಿಸಿ ರಾಜು ಕುಕ್ಡೆ ಈ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News