ಕರ್ನಾಟಕದಲ್ಲಿ ಮತದಾನ ಬೂತುಗಳಲ್ಲಿ ಮೊಬೈಲ್ ಫೋನ್ ನಿಷೇಧ: ಮುಖ್ಯ ಚುನಾವಣಾಧಿಕಾರಿ

Update: 2019-04-16 05:12 GMT

ಬೆಂಗಳೂರು, ಎ.16: ರಾಜ್ಯದ ಎಲ್ಲಾ ಮತದಾನ ಬೂತುಗಳೊಳಗೆ ಮೊಬೈಲ್ ಫೋನ್ ನಿಷೇಧ ಕ್ರಮವನ್ನು ಲೋಕಸಭಾ ಚುನಾವಣೆ ನಡೆಯುವ ಎ.18 ಹಾಗೂ 23ರಂದು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ದೃಢಪಡಿಸಿದ್ದಾರೆ.

ಮತದಾನ ಬೂತುಗಳಲ್ಲಿ ಮೊಬೈಲ್ ಫೋನ್ ನಿಷೇಧಿಸಿ ಭಾರತದ ಚುನಾವಣಾ ಆಯೋಗ 2007ರಲ್ಲೇ ಆದೇಶ ಹೊರಡಿಸಿತ್ತು.

ಮಾದರಿ ನೀತಿ ಸಂಹಿತೆಯಂತೆ ಈ ಮೊಬೈಲ್ ಫೋನ್ ಬಳಕೆ ನಿಷೇಧ ನಿಯಮವು ಈ ಹಿಂದೆಯೂ ಅನ್ವಯವಾಗುತ್ತಿದ್ದರೂ ಈ ಹಿಂದಿನ ಚುನಾವಣೆಗಳಲ್ಲಿ ಸಿಬ್ಬಂದಿ ಕೊರತೆ ಸಹಿತ ವಿವಿಧ ಕಾರಣಗಳಿಂದಾಗಿ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನ ಪ್ರತಿನಿಧಿತ್ವ ಕಾಯಿದೆ 1951ರ ಸೆಕ್ಷನ್ 128 ಅನ್ವಯ ಮತದಾನ ಬೂತುಗಳಲ್ಲಿ ಇಲೆಕ್ಟ್ರಾನಿಕ್ ಸಾಧನಗಳನ್ನು ನಿಷೇಧಿಸಲಾಗಿದೆ. ಮತದಾನ ಬೂತುಗಳಲ್ಲಿ ಗೌಪ್ಯತೆ ಕಾಪಾಡಬೇಕಾಗಿರುವುದರಿಂದ ಹಾಗೂ ಮತದಾರರು ಬೂತಿನೊಳಗೆ ಮೊಬೈಲ್ ಫೋನ್ ಕೊಂಡು ಹೋಗುವುದರಿಂದ ಗೌಪ್ಯತೆಗೆ ಧಕ್ಕೆ ಬರುವುದರಿಂದ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ.

ಆದರೆ ಚುನಾವಣಾಧಿಕಾರಿಗಳು, ಭದ್ರತಾ ಸಿಬ್ಬಂದಿ ಹಾಗೂ ಅಭ್ಯರ್ಥಿಗಳ ಏಜಂಟರು ಮತದಾನ ಬೂತಿನೊಳಕ್ಕೆ ಮೊಬೈಲ್ ಫೋನುಗಳನ್ನು ಕೊಂಡು ಹೋಗಬಹುದಾಗಿದೆ.

ರಾಜ್ಯದಲ್ಲಿನ 28 ಲೋಕಸಭಾ ಸ್ಥಾನಗಳಿಗೆ ನಡೆಯುವ ಚುನಾವಣೆಗಾಗಿ 58,186 ಮತದಾನ ಬೂತುಗಳನ್ನು ಸ್ಥಾಪಿಸಲಾಗುವುದು. ಒಟ್ಟು 2.6 ಕೋಟಿ ಪುರುಷರು ಹಾಗೂ 2.5 ಕೋಟಿ ಮಹಿಳೆಯರೂ ಸೇರಿದಂತೆ ಸುಮಾರು 5.11 ಕೋಟಿ ಜನರು ಈ ಬಾರಿ ಮತದಾನ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News