ಲೋಕಸಭಾ ಚುನಾವಣೆ: ರಾಜ್ಯದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್- ನೀಲಮಣಿ ಎನ್.ರಾಜು

Update: 2019-04-16 12:51 GMT

ಬೆಂಗಳೂರು, ಎ.16: ಲೋಕಸಭಾ ಸಾರ್ವತ್ರಿಕ ಚುನಾವಣೆ ಶಾಂತಿಯುತವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ರಾಜ್ಯದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಇಂದಿಲ್ಲಿ ಹೇಳಿದರು.

ಮಂಗಳವಾರ ನಗರದ ನೃಪತುಂಗ ರಸ್ತೆಯ ಪೊಲೀಸ್ ಮಹಾ ನಿರ್ದೇಶಕ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ನಡೆಯಲಿರುವ ಚುನಾವಣೆಯನ್ನು ಮುಕ್ತ ಮತ್ತು ಶಾಂತಿಯುತವಾಗಿ ನಡೆಸಲು 90,997 ಸಿಬ್ಬಂದಿಯನ್ನು ನಿಯೋಜಿಸಿ ಅಭೂತಪೂರ್ವ ಭದ್ರತೆ ಕೈಗೊಳ್ಳಲಾಗಿದೆ. ಎರಡು ಹಂತಗಳಲ್ಲಿ ನಡೆಯುವ ಚುನಾವಣೆಗೆ 58,225 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಅದರಲ್ಲಿ 11,992 ಸೂಕ್ಷ್ಮ, 46,223 ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಇಬ್ಬರು ಮುಖ್ಯಪೇದೆ, ಗೃಹ ರಕ್ಷಕ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಸಾಮಾನ್ಯ ಮತಗಟ್ಟೆಗಳಲ್ಲಿ ಮುಖ್ಯಪೇದೆ ಸೇರಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.

ಮತದಾನದ ಬಗ್ಗೆ ನಿಗಾ ವಹಿಸಲು 3,313 ವಲಯ ಸಂಚಾರಿ ಗಸ್ತು ದಳಗಳನ್ನು ರಚಿಸಿದ್ದರೆ, 851 ವಲಯ ಮೇಲುಸ್ತುವಾರಿ ಗಸ್ತು ದಳವನ್ನು ರಚಿಸಲಾಗಿದೆ. ಮತದಾನದ ನಿಗಾ ವಹಿಸಲು 307 ಡಿಎಸ್ಪಿ, ಸಂಚಾರಿ ಗಸ್ತುದಳ, 916 ಸಂಚಾರ ತಂಡಗಳು, 827 ಸ್ಥಿರ ಕಣ್ಗಾವಲು ತಂಡಗಳು, 10 ಭದ್ರತಾ ಕೊಠಡಿಗಳಿಗೆ ಕೇಂದ್ರೀಯ ಪಡೆಗಳ ಕಂಪೆನಿಗಳನ್ನು ನಿಯೋಜಿಸಲಾಗಿದೆ.

ಅದೇ ರೀತಿ, ಚುನಾವಣೆಗೆ 8,282 ಪೊಲೀಸ್ ಉಪಾಧೀಕ್ಷಕರು, 851 ಪೊಲೀಸ್ ನಿರೀಕ್ಷಕರು, 1188 ಉಪನಿರೀಕ್ಷಕರು, 4205 ಸಹಾಯಕ ಪೊಲೀಸ್ ಉಪನಿರ್ದೇಶಕರು. 42,950 ಮುಖ್ಯ ಪೇದೆಗಳು, 40,117 ಗೃಹ ರಕ್ಷಕರು, 414 ಅರಣ್ಯ ವೀಕ್ಷಕರು, ರಕ್ಷಕರು, 990 ಜೈಲು ವಾರ್ಡರ್‌ಗಳೂ ಸೇರಿ 90,997 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಶಸ್ತ್ರಾಸ್ತ್ರ ಠೇವಣಿ ಚುನಾವಣೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪರವಾನಿಗೆ ಪಡೆದ 98,055 ಶಸ್ತ್ರಾಸ್ತ್ರಗಳಲ್ಲಿ 95,422 ಶಸ್ತ್ರಗಳನ್ನು ಠೇವಣಿಯಾಗಿ ಪಡೆಯಲಾಗಿದೆ. ಅಪರಾಧ ಹಿನ್ನಲೆ ಹೊಂದಿರುವ ರೌಡಿಗಳು ಹಾಗೂ ದುಷ್ಕರ್ಮಿಗಳ ಮೇಲೆ ನಿಗಾವಹಿಸಲು ಹಾಗೂ ಮತದಾನದ ವೇಳೆ ಶಾಂತಿ ಕಾಪಾಡುವ ಸಲುವಾಗಿ ರಾಜ್ಯಾದ್ಯಂತ 47,427 ವ್ಯಕ್ತಿಗಳ ವಿರುದ್ಧ 44,844 ಮುಂಜಾಗ್ರತಾ ಪ್ರಕರಣಗಳನ್ನು ದಾಖಲಿಸಿ 12,621 ವ್ಯಕ್ತಿಗಳು ಸಾರ್ವಜನಿಕರಲ್ಲಿ ಭಯ ಹುಟ್ಟಿಸುವವರಾಗಿದ್ದಾರೆ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು.

ಮದ್ಯ ಜಪ್ತಿ: ಅಬಕಾರಿ ಕಾಯ್ದೆಯಡಿ 1,594 ಪ್ರಕರಣಗಳನ್ನು ದಾಖಲಿಸಿ 11,220 ಲೀ. ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಇದುವರೆಗೂ 15 ಕೋಟಿ 72 ಲಕ್ಷ 17 ಸಾವಿರದ 616 ರೂ.ನಗದು, 3.12 ಕೆಜಿ ಚಿನ್ನ, 43.85 ಕೆಜಿ ಬೆಳ್ಳಿ ಅಲ್ಲದೆ 38 ಲಕ್ಷ ಮೌಲ್ಯದ ಇತರೆ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಕಾನೂನು ಮತ್ತು ಸುವ್ಯವಸ್ಥೆ) ಕಮಲ್ ಪಂತ್ ಮಾತನಾಡಿ, ರಾಜ್ಯದಲ್ಲಿನ 58,225 ಮತಗಟ್ಟೆಗಳ ಪೈಕಿ, 1ನೇ ಹಂತದಲ್ಲಿ 6,318 ಮತ್ತು 2ನೇ ಹಂತದಲ್ಲಿ 5,674 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ ಹಾಗೂ ತುಮಕೂರು ಲೋಕಸಭಾ ಕ್ಷೇತ್ರಗಳನ್ನು ಸೂಕ್ಷ್ಮ ಕ್ಷೇತ್ರಗಳೆಂದು ಪರಿಗಣಿಸಲಾಗಿದೆ. ನಕ್ಸಲ್ ಚಟುವಟಿಕೆ ಹಾವಳಿ ಇಲ್ಲ. ಆದಾಗ್ಯೂ ಕೂಡ ಗಡಿ ಭಾಗದ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾವಹಿಸಲಾಗಿದೆ ಎಂದು ತಿಳಿಸಿದರು.

ನೋಡಲ್ ಅಧಿಕಾರಿ ನೇಮಕ

ಚುನಾವಣಾ ಕರ್ತವ್ಯಕ್ಕೆ ಪೊಲೀಸ್ ಇಲಾಖೆಯ ನೋಡಲ್ ಅಧಿಕಾರಿಯನ್ನಾಗಿ ಎಡಿಜಿಪಿ ಕಮಲ್ ಪಂತ್ ಅವರನ್ನು ನೇಮಿಸಲಾಗಿದೆ. ಚುನಾವಣಾ ಖರ್ಚು-ವೆಚ್ಚುಗಳ ನಿಗಾಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಆರ್.ಹಿತೇಂದ್ರ ಹಾಗೂ ಸಶಸ್ತ್ರ ಪಡೆಯ ಮುಖ್ಯಸ್ಥರನ್ನಾಗಿ ಕುಲದೀಪ್ ಅವರಿಗೆ ವಹಿಸಲಾಗಿದೆ.

-ನೀಲಮಣಿ ಎನ್.ರಾಜು, ಪೊಲೀಸ್ ಮಹಾ ನಿರ್ದೇಶಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News