ಚುನಾವಣೆ ಬಳಿಕ ಬಿಜೆಪಿ ಮತ್ತೆ ಅಧಿಕಾರಕ್ಕೆ: ಶಾಸಕ ಬಿ.ಶ್ರೀರಾಮುಲು

Update: 2019-04-17 12:45 GMT

ಬಾದಾಮಿ, ಎ.17: ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬಿದ್ದು ಹೋಗುತ್ತೆ, ಸರಕಾರಕ್ಕೆ ಅಸ್ತಿತ್ವವಿಲ್ಲ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಮುಖಂಡ ಬಿ.ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾದರೂ, ಲೋಕಸಭೆ ಚುನಾವಣೆಯಲ್ಲಿ ಏಳೆಂಟು ಸ್ಥಾನಕ್ಕಿಂತ ಜಾಸ್ತಿ ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ. ರಾಜ್ಯದ ಮೈತ್ರಿ ಸರಕಾರದ ಆಡಳಿತವನ್ನು ನೋಡಿ ಜನತೆ ಬೇಸತ್ತಿದ್ದಾರೆ ಎಂದು ನುಡಿದರು.

ಎಲ್ಲ ಅನುದಾನವನ್ನು ಸಿಎಂ ಕುಮಾರಸ್ವಾಮಿ 5 ಜಿಲ್ಲೆಗಳಿಗೆ ಉಪಯೋಗಿಸಿದ್ದಾರೆ. ಭ್ರಷ್ಟಾಚಾರದ ಉದ್ದೇಶದಿಂದ 5 ಜಿಲ್ಲೆಗೆ ಅನುದಾನ ನೀಡಿ ಚುನಾವಣೆ ಖರ್ಚಿಗೆ ಕಮಿಷನ್ ಪಡೆದಿರುವುದು ಜಗಜ್ಜಾಹೀರಾಗಿದೆ ಎಂದ ಅವರು, ಕಮಿಷನ್ ಹಣದಿಂದ ಚುನಾವಣೆ ಮಾಡಿ ನೂರಾರು ಕೋಟಿ ರೂ.ಹಾಕಿ ಪುತ್ರನನ್ನು ಗೆಲ್ಲಿಸಲು ಪ್ರಯತ್ನ ನಡೆಸಿದ್ದಾರೆ. ಆದರೆ, ಫಲಿತಾಂಶ ಬೇರೆಯದೆ ಬರಲಿದೆ ಎಂದರು.

ಸಿಎಂ ಎಲ್ಲಿದ್ದೀಯಪ್ಪಾ..: ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಎಲ್ಲಿದ್ದೀಯಪ್ಪಾ? ಅನ್ನುವುದು ವೈರಲ್ ಆಗಿತ್ತು. ಇನ್ನು ಮುಂದೆ ಇದಕ್ಕೆ ಮತ್ತೊಂದು ಸೇರ್ಪಡೆ ಸಿಎಂ ಎಲ್ಲಿದ್ದೀಯಪ್ಪಾ ಎಂದು ಕೇಳಬೇಕಾಗುತ್ತದೆ ಎಂದು ಶ್ರೀರಾಮುಲು ಲೇವಡಿ ಮಾಡಿದರು.

ಎರಡನೆ ಚುನಾವಣೆಗಾಗಿ ನಾಯಕರ ತಂಡ ಉತ್ತರ ಕರ್ನಾಟಕದ ಕಡೆಗೆ ಬರುತ್ತಿದೆ. ಒಂದನೆ ಹಂತದಲ್ಲಿ ಚುನಾವಣೆಯಲ್ಲಿ ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಹೇಳುತ್ತಿದ್ದರು. ಈಗ ಎರಡನೆ ಹಂತದಲ್ಲಿ ಈ ಭಾಗದ ಜನತೆ ‘ಸಿಎಂ ಎಲ್ಲಿದ್ದೀಯಪ್ಪಾ’ ಎಂದು ಕೇಳಬೇಕಿದೆ. ಏಕೆಂದರೆ ಉತ್ತರ ಕರ್ನಾಟಕ ಭಾಗವನ್ನು ಕುಮಾರಸ್ವಾಮಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News