ಯೋಗಿ ಮೇಲೆ ಕ್ರಮ ಕೈಗೊಂಡ ಆಯೋಗ ಕಲ್ಯಾಣ್ ಸಿಂಗ್ ರನ್ನು ಬಿಟ್ಟಿದ್ದೇಕೆ: ಎಚ್.ಕೆ.ಪಾಟೀಲ್ ಪ್ರಶ್ನೆ
ಹುಬ್ಬಳ್ಳಿ, ಎ.17: ಸೇನೆಯನ್ನು ಮೋದಿ ಸೇನೆ ಎಂದು ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮೇಲೆ ಕೊನೆಗೂ ಸಣ್ಣಕ್ರಮಕ್ಕೆ ಮುಂದಾಗಿರುವ ಚುನಾವಣಾ ಆಯೋಗ, ರಾಜಸ್ತಾನದ ರಾಜ್ಯಪಾಲ ಕಲ್ಯಾಣ್ ಸಿಂಗ್ ಅವರ ಮೇಲೆ ಕ್ರಮ ಕೈಗೊಳ್ಳದಿರುವುದಕ್ಕೆ ಕಾರಣವೇನು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಪ್ರಶ್ನಿಸಿದ್ದಾರೆ.
ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಸ್ಥಾನದ ರಾಜ್ಯಪಾಲರು ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಅವರು ಬಹಿರಂಗವಾಗಿ ಮೋದಿ ಅವರಿಗೆ ಮತ ನೀಡಿ ಎಂದು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು ಸಂವಿಧಾನ ವಿರೋಧಿ. ಈ ನಿಟ್ಟಿನಲ್ಲಿ ನೀಡಿದ್ದ ದೂರನ್ನು ಚುನಾವಣಾ ಆಯೋಗ ರಾಷ್ಟ್ರಪತಿ ಅವರಿಗೆ ರವಾನಿಸಿತ್ತು. ಆದರೆ, ರಾಷ್ಟ್ರಪತಿಯವರು ಅವರ ಮೇಲೆ ಕ್ರಮ ಕೈಗೊಳ್ಳುವ ಬದಲು ಗೃಹ ಇಲಾಖೆಗೆ ರವಾನಿಸಿದ್ದು ಸರಿಯಾದ ಕ್ರಮವಲ್ಲ. ರಾಷ್ಟ್ರಪತಿಗಳು ತಕ್ಷಣ ಕಲ್ಯಾಣ್ ಸಿಂಗ್ ಅವರನ್ನು ಅಮಾನತುಗೊಳಿಸಬೇಕಾಗಿತ್ತು. ಇಲ್ಲವೆ ಚುನಾವಣಾ ಪ್ರಕ್ರಿಯೆ ಮುಗಿಯುವ ವರೆಗೂ ಕಡ್ಡಾಯ ರಜೆಯಲ್ಲಿ ಕಳುಹಿಸಬೇಕಾಗಿತ್ತು.
ಇವರೆಡನ್ನೂ ಮಾಡದ ರಾಷ್ಟ್ರಪತಿಗಳು ಚುನಾವಣಾ ಪ್ರಕ್ರಿಯೆಯ ಪಾವಿತ್ರತೆಯನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ. ರಾಷ್ಟ್ರಪತಿಗಳ ಈ ಕ್ರಮ ಇತಿಹಾಸದಲ್ಲಿ ಸೇರ್ಪಡೆಯಾಗಲಿದೆ ಎಂದ ಅವರು, ಸ್ವಾತಂತ್ರ್ಯ ನಂತರ ಯಾವುದೇ ಕೆಟ್ಟ ರಾಜಕಾರಣಿಯೂ ಇಂತಹ ಹೇಳಿಕೆ ನೀಡಿರಲಿಲ್ಲ. ಯಾವುದೇ ರಾಜಕಾರಣಿಯೂ ಸೈನ್ಯವನ್ನು ರಾಜಕೀಯಕ್ಕೆ ಬಳಸಿಕೊಂಡಿರಲಿಲ್ಲ. ಸೈನ್ಯವನ್ನು ಪ್ರಸ್ತಾಪಿಸಿ ಜನರನ್ನು ಭಾವೋದ್ರೇಕಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿರಲಿಲ್ಲ. ಯೋಗಿ ಆದಿತ್ಯನಾಥ್ ಅವರು ಬಹಳ ಅನುಭವ ಹೊಂದಿರುವ ವ್ಯಕ್ತಿ. ಕಾವಿ ಹಾಕಿಕೊಂಡರೂ ಗುನ್ನೆ ಪ್ರವೃತ್ತಿಯ ಮನಸ್ಸನ್ನು ಹೊಂದಿದ್ದಾರೆ. ದೇಶದ ಸಂವಿಧಾನ ನೀಡಿರುವ ಪ್ರಮುಖವಾದ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ. ಮೋದಿ ಸೇನೆಯ ಗೆಲುವು ಮೋದಿ ಸೇನೆಯಿಂದ ರಕ್ಷಣೆ ಎನ್ನುವ ಹೇಳಿಕೆ ನೀಡುವ ಮೂಲಕ ನೀಚಮಟ್ಟದ ರಾಜಕಾರಣಕ್ಕೆ ಕೈಹಾಕಿದ್ದಾರೆ ಎಂದರು.
ಅಲ್ಲದೆ ವಿದೇಶದಲ್ಲಿ 3 ಲಕ್ಷ ಕೋಟಿ ರೂ.ಗಳಷ್ಟು ಹಣವನ್ನು ಮುದ್ರಿಸಿ ಭಾರತದಲ್ಲಿ ಚಲಾವಣೆಗೊಳಿಸುವವರ ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಗಮನ ಸೆಳೆಯಲಾಗಿದೆ. ಇದರ ಬಗ್ಗೆ ತನಿಖೆ ಪ್ರಾರಂಭಿಸಬೇಕು. ಹಾಗೂ ಈ ಪ್ರಕರಣದ ಪ್ರಮುಖ ಸಾಕ್ಷಿಗಳಿಗೆ ಸೂಕ್ತ ಭದ್ರತೆಯನ್ನೂ ನೀಡಬೇಕು ಎಂದು ಮನವಿ ಮಾಡಿದ್ದೇನೆ ಎಂದರು.
ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳ ಪರವಾದ ಅಲೆ ಇದೆ. ನಮ್ಮ ಮೈತ್ರಿ ಅಭ್ಯರ್ಥಿಗಳು 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ವ್ಯಾಪಕವಾಗಿ ಪ್ರಚಾರ ಕೈಗೊಂಡ ಪಾಟೀಲ್, ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಅವರ ಪರ ಚುನಾವಣಾ ಪ್ರಚಾರ ನಡೆಸಿದರು