ನಾಳೆ ರಾಜ್ಯದಲ್ಲಿ ಮೊದಲ ಹಂತದ ಮತದಾನ

Update: 2019-04-17 16:19 GMT

ಬೆಂಗಳೂರು, ಎ.17: ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ನಾಳೆ (ಗುರುವಾರ) ಬೆಳಗ್ಗೆ 7ಗಂಟೆಯಿಂದ ಆರಂಭವಾಗಲಿದ್ದು, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು ಚುನಾವಣಾ ಸಿಬ್ಬಂದಿ ಇವಿಎಂ, ವಿವಿಪ್ಯಾಟ್‌ಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದ್ದಾರೆ.

ಮಂಡ್ಯ, ತುಮಕೂರು ಸೇರಿದಂತೆ 14 ಲೋಕಸಭಾ ಕ್ಷೇತ್ರಗಳ ಮತದಾನಕ್ಕೆ 30,164 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಸದಾನಂದಗೌಡ, ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಸೇರಿದಂತೆ 241 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ.

ಬುಧವಾರ ನಗರದ ವಾರ್ತಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಮೊದಲನೆ ಹಂತದಲ್ಲಿ 1.35 ಕೋಟಿಗೂ ಅಧಿಕ ಪುರುಷರು, 1.32 ಕೋಟಿಗೂ ಅಧಿಕ ಮಹಿಳೆಯರು, 2817 ಇತರರು ಸೇರಿದಂತೆ 2.67ಕೋಟಿಗೂ ಅಧಿಕ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

14 ಲೋಕಸಭಾ ಕ್ಷೇತ್ರಗಳಲ್ಲಿ ಶೇ.99.33ರಷ್ಟು ಮತದಾರರ ಚೀಟಿಯನ್ನು ಈಗಾಗಲೇ ಮತದಾರರಿಗೆ ತಲುಪಿಸಲಾಗಿದೆ. ಅಲ್ಲದೆ, ಶೇ.100ರಷ್ಟು ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದ್ದು, ಎಲ್ಲರಿಗೂ ಮತದಾರ ಗುರುತಿನ ಚೀಟಿಯನ್ನು ನೀಡಲಾಗಿದೆ. ಮತದಾರರಿಗೆ ನೀಡಿರುವ ಮತದಾನ ಚೀಟಿಯಿಂದ ಮತ ಚಲಾಯಿಸಲು ಸಾಧ್ಯವಿಲ್ಲ. ಅದು ಕೇವಲ ಮತದಾರರನ್ನು ಗುರುತಿಸಲು ಮಾತ್ರ ಎಂದು ತಿಳಿಸಿದರು.

ಎಲ್ಲೆಲ್ಲಿ ಎಷ್ಟು ಮತಗಟ್ಟೆಗಳು:

ಉಡುಪಿ-ಚಿಕ್ಕಮಗಳೂರು 1837, ಹಾಸನ 2235, ದಕ್ಷಿಣ ಕನ್ನಡ 1861, ಚಿಕ್ಕೋಡಿ 2161, ತುಮಕೂರು 1907, ಮಂಡ್ಯ 2046, ಮೈಸೂರು 2187, ಚಾಮರಾಜನಗರ 2005, ಬೆಂಗಳೂರು ಗ್ರಾಮಾಂತರ 2672, ಬೆಂಗಳೂರು ಉತ್ತರ 2656, ಬೆಂಗಳೂರು ಕೇಂದ್ರ 2082, ಬೆಂಗಳೂರು ದಕ್ಷಿಣ 2131, ಚಿಕ್ಕಬಳ್ಳಾಪುರ 2284, ಕೋಲಾರ 2100 ಸೇರಿದಂತೆ 30164 ಮತಗಟ್ಟೆಗಳಿವೆ ಎಂದು ವಿವರಿಸಿದರು.

ಸೂಕ್ಷ್ಮ ಮತಗಟ್ಟೆಗಳು: ಮೊದಲ ಹಂತದ ಮತದಾನದಲ್ಲಿ 6012 ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಿವೆ. ಅದರಲ್ಲಿ 990 ಸಿಎಪಿಎಫ್, 2038 ಮೈಕ್ರೋ ಅಬ್ಸರ್ವರ್‌ಗಳು, 1666 ವೆಬ್ ಕ್ಯಾಮೆರಾಗಳು, 2308 ಮತಗಟ್ಟೆಗಳನ್ನು ವಿಡಿಯೋ ಗ್ರಾಫರ್‌ಗಳು ನಿರ್ವಹಣೆ ಮಾಡಲಿದ್ದಾರೆ ಎಂದು ಹೇಳಿದರು.

ವಿಶೇಷಚೇತನರಿಗೆ ಸೌಲಭ್ಯ: ಮೊದಲ ಹಂತದ ಚುನಾವಣೆಯಲ್ಲಿ ನೋಂದಣಿ ಮಾಡಿಕೊಂಡಿರುವ ವಿಶೇಷಚೇತನರಿಗೆ ವಿಶೇಷ ಸೌಲಭ್ಯಗಳನ್ನು ಆಯೋಗ ಕಲ್ಪಿಸುತ್ತಿದೆ. 1,95,719 ವಿಶೇಷಚೇತನರಿಗೆ 19,965 ವೀಲ್ಹ್‌ಚೇರ್‌ಗಳು, 29,352 ಭೂತಕನ್ನಡಿಗಳು, 22,552 ಸಹಾಯಕರು, 175 ಭಾಷಾ ತಜ್ಞರು, 7,388 ವಾಹನಗಳು, 31,299 ಸ್ವಯಂ ಸೇವಕರು, 7,066 ನಡಿಗೆ ಕೋಲುಗಳನ್ನು ಈಗಾಗಲೇ ಸರಬರಾಜು ಮಾಡಲಾಗಿದೆ. ಬೆಂಗಳೂರು ನಗರ, ಮೈಸೂರುನಲ್ಲಿ ಓಲಾ ಕ್ಯಾಬ್ ಸೇವೆ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ 39 ಊಬರ್ ಕ್ಯಾಬ್‌ಗಳು ಸೇವೆ ಸಲ್ಲಿಸಲಿವೆ ಎಂದು ತಿಳಿಸಿದರು.

14 ಕ್ಷೇತ್ರಗಳ ವ್ಯಾಪ್ತಿಯಲ್ಲಿ 52,112 ಇವಿಎಂಗಳನ್ನು, 36,196 ಕಂಟ್ರೋಲ್ ಯೂನಿಟ್‌ಗಳು, 37,705 ವಿವಿಪ್ಯಾಟ್‌ಗಳನ್ನು ನೀಡಲಾಗಿದೆ. ಈಗಾಗಲೇ ಎಲ್ಲ ಅಧಿಕಾರಿಗಳಿಗೆ ಮತದಾನ ಕೇಂದ್ರದಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಇವಿಎಂಗಳ ಬಳಕೆ ಸೇರಿದಂತೆ ಎಲ್ಲ ರೀತಿಯ ತರಬೇತಿಯನ್ನೂ ನೀಡಲಾಗಿದೆ ಎಂದರು.

ಭದ್ರತೆ: ಮತದಾನ ಕೇಂದ್ರದ ವ್ಯಾಪ್ತಿಯ 100 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಮತದಾನ ಕೇಂದ್ರದ ಸುತ್ತಲೂ ಪೊಲೀಸ್, ಸಿಆರ್‌ಪಿಎಫ್ ಪಡೆ ಸೇರಿದಂತೆ ಸೂಕ್ತ ಭದ್ರತೆಯನ್ನು ಕೈಗೊಳ್ಳಲಾಗಿದೆ. ಚುನಾವಣಾ ಕಾರ್ಯಕ್ಕೆ 1,54,262 ಸಿಬ್ಬಂದಿ ನಿಯೋಜಿಸಿದ್ದು, ಮತಗಟ್ಟೆಗಳ ಭದ್ರತೆಗೆ 38,597 ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. 

397 ಸಖಿ ಮತಗಟ್ಟೆಗಳು

ಮೊದಲ ಹಂತದ ಲೋಕಸಭಾ ಚುನಾವಣೆ 14 ಕ್ಷೇತ್ರಗಳ ವ್ಯಾಪ್ತಿಯಲ್ಲಿ 393 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. 32 ಕಡೆಗಳಲ್ಲಿ ಪಾರಂಪರಿಕ ಮತಗಟ್ಟೆಗಳಿದ್ದು, 61 ಕಡೆಗಳಲ್ಲಿ ವಿಶೇಷಚೇತನರೇ ನಿರ್ವಹಿಸುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಮತ ಹಾಕಲು 11 ದಾಖಲೆಗಳು

- ಪಾಸ್‌ಪೋರ್ಟ್

- ಡ್ರೈವಿಂಗ್ ಲೈಸೆನ್ಸ್

- ಕೇಂದ್ರ ಸರಕಾರ, ರಾಜ್ಯ ಸರಕಾರ ಹಾಗೂ ಸಾರ್ವಜನಿಕ ಸಂಸ್ಥೆಗಳು ನೀಡುವ ಭಾವಚಿತ್ರವಿರುವ ಸೇವಾ ಕಾರ್ಡ್

- ಬ್ಯಾಂಕ್‌ನ ಪಾಸ್‌ಬುಕ್ - ಪಾನ್‌ಕಾರ್ಡ್ - ಎನ್‌ಪಿಆರ್ ಅಡಿಯ ಆರ್‌ಜಿಐ ನೀಡಿರುವ ಸ್ಮಾರ್ಟ್‌ಕಾರ್ಡ್

- ಮಹಾತ್ಮಗಾಂಧಿ ನರೇಗಾ ಕಾರ್ಡ್

- ಕಾರ್ಮಿಕ ಇಲಾಖೆಯಿಂದ ನೀಡಿರುವ ಆರೋಗ್ಯ ಕಾರ್ಡ್

- ಆಧಾರ್ ಕಾರ್ಡ್

ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ ತೋರಿಸಿ ‘ಚಾಲೆಂಜ್ ವೋಟ್’ ಹಾಕಬಹುದು ಎಂಬ ಸಂದೇಶ ರವಾನೆಯಾಗುತ್ತಿದೆ. ಆದರೆ, ಇದಕ್ಕೆ ಯಾವುದೇ ಅವಕಾಶವಿಲ್ಲ. ಮತದಾರರ ಪಟ್ಟಿಯಲ್ಲಿ ಹೆಸರಿದ್ದಾಗ ಅಷ್ಟೇ ಚಾಲೆಂಜ್ ವೋಟ್ ಹಾಕಲು ಸಾಧ್ಯವಾಗುತ್ತದೆ. ಇನ್ನು ಟೆಂಡರ್ ವೋಟ್ ಬೂತ್‌ನ ಏಜೆಂಟ್ ಮತದಾರರನ್ನು ಗುರುತಿಸದೇ ಇದ್ದ ವೇಳೆ ಏಜೆಂಟ್‌ಗಳು 2ರೂ. ಠೇವಣಿಯಿಟ್ಟು ಮತಚಲಾವಣೆಗೆ ಅವಕಾಶವಿರುತ್ತದೆ. 5ಕ್ಕಿಂತ ಅಧಿಕ ಈ ರೀತಿಯ ವೋಟ್‌ಗಳು ಬಂದರೆ ಮರುಚುನಾವಣೆಗೆ ಅವಕಾಶವಿರುತ್ತದೆ.

ಯಾವುದೇ ರೀತಿಯ ಮತಗಳನ್ನು ಆನ್‌ಲೈನ್ ಮೂಲಕ ಚಲಾಯಿಸಲು ಅವಕಾಶವಿಲ್ಲ. ಪ್ರತಿಯೊಬ್ಬರೂ ಮತಕೇಂದ್ರಕ್ಕೆ ಬಂದು ಮತ ಚಲಾವಣೆ ಮಾಡಬೇಕು. ಅಲ್ಲದೆ, ಮತದಾನ ಮಾಡಲು ಚುನಾವಣಾ ಆಯೋಗವು ಯಾವುದೇ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿಲ್ಲ. ಅಪಪ್ರಚಾರಗಳಿಗೆ ಯಾರೂ ಕಿವಿಗೊಡಬಾರದು’

-ಸಂಜೀವ್ ಕುಮಾರ್, ಮುಖ್ಯ ಚುನಾವಣಾಧಿಕಾರಿ

ಎಡಗೈ ತೋರು ಬೆರಳಿಗೆ ಶಾಹಿ

ಮತದಾನದ ಬಳಿಕ ಮತ ಚಲಾವಣೆಯ ಗುರುತನ್ನು ಪ್ರತಿ ಮತದಾರರ ಎಡಗೈನ ನಾಲ್ಕನೇ ಬೆರಳಿಗೆ ಶಾಹಿ ಗುರುತು ಹಾಕಲಾಗುತ್ತದೆ. ಕುಂದಗೋಳ ಹಾಗೂ ಚಿಂಚೊಳ್ಳಿ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸುವವರಿಗೆ ಎಡಗೈನ ಮಧ್ಯದ ಬೆರಳಿಗೆ ಶಾಹಿ ಗುರುತು ಹಾಕಲಾಗುತ್ತದೆ.

ಮೊಬೈಲ್ ಬಳಸುವಂತಿಲ್ಲ

ಭದ್ರತಾ ದೃಷ್ಟಿಯಿಂದ ಮತದಾರರು ತಮ್ಮ ಮತ ಚಲಾವಣೆ ಸಂದರ್ಭದಲ್ಲಿ ಮತಗಟ್ಟೆಗೆ ಯಾವುದೇ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವಂತಿಲ್ಲ. ಮೊಬೈಲ್ ಫೋನ್ ತಂದರೆ, ಭದ್ರತಾ ಅಧಿಕಾರಿಗಳು ಅದನ್ನು ವಶಕ್ಕೆ ಪಡೆಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News