ಮೋದಿ ವಿದೇಶಯಾನ ಚಂದ್ರಯಾನಕ್ಕಿಂತ ದುಬಾರಿ: ಮುಖ್ಯಮಂತ್ರಿ ಚಂದ್ರು ಲೇವಡಿ

Update: 2019-04-17 14:26 GMT

ಹಾವೇರಿ, ಎ.17: ಕಾಂಗ್ರೆಸ್ ಸರಕಾರವು 450 ಕೋಟಿ ವೆಚ್ಚದಲ್ಲಿ ವಿಜ್ಞಾನಿಗಳನ್ನು ಚಂದ್ರಯಾನಕ್ಕೆ ಕಳುಹಿಸಿದ್ದರೆ, ಪ್ರಧಾನಿ ನರೇಂದ್ರ ಮೋದಿ 2 ಸಾವಿರ ಕೋಟಿ ಖರ್ಚು ಮಾಡಿ ವಿದೇಶಯಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ. 

ಬುಧವಾರ ಹಾವೇರಿ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೋದಿ ಸಂಸತ್ತು ಅಧಿವೇಶನದಲ್ಲಿ ಪಾಲ್ಗೊಂಡದ್ದು 19 ದಿನಗಳು ಮಾತ್ರ. ಸಂಸತ್ತಿಗೂ ಗೌರವ ನೀಡಲಿಲ್ಲ. ಐದು ವರ್ಷಗಳಲ್ಲಿ ನೇರವಾಗಿ ಒಂದೇ ಒಂದು ಪತ್ರಿಕಾಗೋಷ್ಠಿಯನ್ನೂ ಎದುರಿಸಿಲ್ಲ. ಬರೀ ಮಾತು, ಮಾತು, ಮಾತು ಎಂದು ದೂರಿದರು.

ಮುಂದೆ, ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಷಿ ಸ್ಥಿತಿ ಮೋದಿಗೂ ಬರಬಹುದು. ಇಲ್ಲವೇ, ಮೋದಿಯನ್ನೂ ಆರೆಸ್ಸೆಸ್‌ನವರೇ ಮೂಲೆಗುಂಪು ಮಾಡಬಹುದು. ಒಟ್ಟಾರೆ, ಮೋದಿ ಸರ್ವಾಧಿಕಾರ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ, ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ದೇಶ ಉಳಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಕಾಂಗ್ರೆಸ್ 60 ವರ್ಷಗಳಲ್ಲಿ ಏನೂ ಮಾಡಿಲ್ಲ ಎನ್ನುತ್ತಾರೆ. ಏನೂ ಮಾಡಿದ್ದರೆ, ಈ ದೇಶ ಇರುತ್ತಿತ್ತಾ, ಮೋದಿ ಪ್ರಧಾನಿ ಆಗಲು ಸಾಧ್ಯವಿತ್ತಾ ಎಂದು ಪ್ರಶ್ನಿಸಿದ ಅವರು, ರಾಮನ ಹೆಸರಿನಲ್ಲಿ ಜನರಿಗೆ ನಾಮ ಹಾಕವುದೇ ಬಿಜೆಪಿ ಕೆಲಸವಾಗಿದೆ. ಕಳೆದ ಐದು ವರ್ಷಗಳಲ್ಲಿ ರಾಮಮಂದಿರ ಏಕೆ ಕಟ್ಟಲಿಲ್ಲ ಎಂದು ಪ್ರಶ್ನಿಸಿದರು.

ಸಾಹಿತಿ ಪ್ರೊ.ಜಿ.ಎಸ್.ಸಿದ್ದರಾಮಯ್ಯ ಮಾತನಾಡಿ, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಕೇಂದ್ರ ಸಚಿವರೊಬ್ಬರು ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದ್ದಾರೆ ಎಂದರು.  ಬ್ಯಾಂಕಿಂಗ್ ಹಾಗೂ ಪ್ರಮುಖ ಪರೀಕ್ಷೆಗಳನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಮಾತ್ರ ನಡೆಸುವ ಮೂಲಕ, ಕನ್ನಡಿಗರಿಗೆ ಬ್ಯಾಂಕ್ ಕೆಲಸವೂ ಸಿಗಬಾರದು, ವ್ಯವಹಾರವೂ ನಡೆಸಬಾರದು ಎಂಬ ಹುನ್ನಾರ ಮಾಡಿದ್ದಾರೆ. ಈ ಬಗ್ಗೆ ಯುವಜನತೆ ಎಚ್ಚೆತ್ತುಕೊಳ್ಳಬೇಕು ಎಂದರು. 

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರುದ್ರಪ್ಪ, ಸಂಜೀವಕುಮಾರ್ ನೀರಲಗಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News