ನಾಳೆ ಅಭ್ಯರ್ಥಿಗಳ ಹಣೆಬರಹ ನಿರ್ಧಾರ: ಪಾರದರ್ಶಕ ಚುನಾವಣೆಗೆ ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ದತೆ

Update: 2019-04-17 14:34 GMT

ಮಂಡ್ಯ, ಎ.17: ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ದತೆ ಕೈಗೊಂಡಿದ್ದು, ಮತದಾರರು ನಾಳೆ(ಎ.18) ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ನಡುವೆ ನೇರಾಹಣಾಹಣಿ ಏರ್ಪಟ್ಟಿದ್ದು, ಚುನಾವಣೆ ಕುತೂಹಲ ಕೆರಳಿಸಿದೆ. ಪುತ್ರ ನಿಖಿಲ್ ಗೆಲುವಿಗೆ ಸಿಎಂ ಕುಮಾರಸ್ವಾಮಿ ಹರ ಸಾಹಸಪಟ್ಟಿದ್ದು, ಬಿಜೆಪಿ, ರೈತಸಂಘ ಹಾಗೂ ಅತೃಪ್ತ ಕಾಂಗ್ರೆಸ್‍ನವರ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಭಾರಿ ಪೈಪೋಟಿ ಒಡ್ಡಿದ್ದಾರೆ.

ಲೋಕಸಭೆಯಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಳ್ಳದಿದ್ದರೆ ಮೈತ್ರಿ ಸರಕಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಪಕ್ಷ ಪ್ರಬಲವಾಗಿರುವ ಮಂಡ್ಯ, ಹಾಸನದಲ್ಲಿ ಮಗ ಹಾಗೂ ಸಹೋದರನ ಪುತ್ರನನ್ನು ಕಣಕ್ಕಿಳಿಸಿದ್ದಾರೆ. ತುಮಕೂರಿನಲ್ಲಿ ಸ್ವತಃ ಮಾಜಿ ಪ್ರಧಾನಿ ದೇವೇಗೌಡರು ಅಗ್ನಿ ಪರೀಕ್ಷೆಗೆ ನಿಲ್ಲುವ ಮೂಲಕ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.

ಪ್ರತಿಷ್ಠೆಯ ಕ್ಷೇತ್ರವಾಗಿ ಮಾರ್ಪಟ್ಟಿರುವ ಈ ಮೂರೂ ಕ್ಷೇತ್ರಗಳಲ್ಲಿ ಮೈತ್ರಿ ಧರ್ಮ ಪರಿಪಾಲನೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಮಂಡ್ಯ ಕ್ಷೇತ್ರದಲ್ಲಿ ಅಸ್ತಿತ್ವದ ಪ್ರಶ್ನೆಯಾಗಿಸಿಕೊಂಡಿರುವ ವಿಧಾನಸಭೆಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳು ವ್ಯವಸ್ಥಿತವಾಗಿ ಪಕ್ಷೇತರ ಅಭ್ಯರ್ಥಿಯ ಪರ ನಿಂತಿರುವುದು ಜೆಡಿಎಸ್‍ಗೆ ನುಂಗಲಾರದ ಬಿಸಿತುಪ್ಪವಾಗಿದೆ.

ಸಿನಿಮಾ ನಟರಾದ ಯಶ್, ದರ್ಶನ್ ಬಿರುಸಿನ ಪ್ರಚಾರದೊಂದಿಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ವಾತಾವರಣ ನಿರ್ಮಿಸಲು ತಮ್ಮೆಲ್ಲಾ ಶ್ರಮವನ್ನು ಧಾರೆ ಎರೆದಿದ್ದಾರೆ. ಜಿಲ್ಲೆಯ ಜನಪ್ರಿಯ ನಟರಾದ ದಿವಂಗತ ಅಂಬರೀಷ್ ಅನುಕಂಪದ ಅಲೆ, ಜೆಡಿಎಸ್ ಅಭ್ಯರ್ಥಿ ನಿಖಿಲ್ ಹೊರ ಜಿಲ್ಲೆಯವರು ಎಂಬ ಅಭಿಪ್ರಾಯವನ್ನು ಮತಗಳಾಗಿ ಪರಿವರ್ತಿತಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

ರೈತಸಂಘ, ಬಿಜೆಪಿ, ಅತೃಪ್ತ ಕಾಂಗ್ರೆಸ್ಸಿಗರ ಭಾರೀ ಬೆಂಬಲ, ಅನುಕಂಪದ ಅಲೆ, ಜಿಲ್ಲೆಯ ಜನರ ಸ್ವಾಭಿಮಾನ ಮುಂದಿಟ್ಟು ಸುಮಲತಾ ಪ್ರಚಾರ ನಡೆಸಿ ಜೆಡಿಎಸ್‍ಗೆ ಆತಂಕ ಸೃಷ್ಟಿಸಿದ್ದಾರೆ. ನಾಮಪತ್ರ ಸಲ್ಲಿಸುವ ಹಾಗೂ ಮತಯಾಚನೆ ಅಂತ್ಯಗೊಂಡ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ರ‍್ಯಾಲಿಯಲ್ಲಿ ಅಭೂತಪೂರ್ವ ಜನಬೆಂಬಲ ಅವರನ್ನು ಪ್ರಬಲಗೊಳಿಸಿರುವುದಷ್ಟೇ ಅಲ್ಲದೆ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿವರ್ತನೆಗೊಳ್ಳಲು ಕಾರಣವಾಗಿದೆ. ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರೇ ಇದ್ದು, ಬೃಹತ್ ಕಾರ್ಯಕರ್ತರ ಪಡೆಯನ್ನು ತಳಮಟ್ಟದಲ್ಲಿಯೇ ಜೆಡಿಎಸ್ ಹೊಂದಿದ್ದು, ಇದು ನಿಖಿಲ್ ಗೆ ವರದಾನವಾಗಲಿದೆ.  

ಜಿಲ್ಲಾಡಳಿತ ಸಿದ್ದತೆ: ಶಾಂತಿಯುತ, ಪಾರದರ್ಶಕ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ದತೆ ಕೈಗೊಂಡಿದ್ದು, ಎ.18ರ ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಚುನಾವಣೆಯ ಮುನ್ನಾ ದಿನವಾದ ಬುಧವಾರ ಮಸ್ಟರಿಂಗ್, ಡಿ-ಮಸ್ಟರಿಂಗ್ ಕಾರ್ಯ ಎಂಟು ವಿಧಾನಸಭಾ ಕ್ಷೇತ್ರಗಳ ನಿಗದಿಪಡಿಸಿದ ಸ್ಥಳದಲ್ಲಿ ನಡೆಯಿತು.

ಎಂಟು ಕ್ಷೇತ್ರಗಳಲ್ಲಿರುವ 2046 ಮತಗಟ್ಟೆಗಳಿಗೆ ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡಿರುವ 9904 ಅಧಿಕಾರಿ, ಸಿಬ್ಬಂದಿ ಮತಯಂತ್ರ ಮತ್ತು ಚುನಾವಣಾ ಪರಿಕರಗಳ ಸಮೇತ ಸಂಬಂಧಿಸಿದ ಮತಗಟ್ಟೆಗಳಿಗೆ ನಿಗದಿಪಡಿಸಿದ ಬಸ್‍ಗಳಲ್ಲಿ ತೆರಳಿದರು.

17,12,012 ಮತದಾರರಿದ್ದು, ಈ ಪೈಕಿ 8,54,758 ಪುರುಷರು ಹಾಗೂ 8,56,285 ಮಹಿಳಾ ಮತದಾರರಿದ್ದಾರೆ. ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 2,42,223 ಮತದಾರರು, ಮದ್ದೂರು 2,08,226, ಮೇಲುಕೋಟೆ 1,97,048, ಮಂಡ್ಯ 2,27,784, ಶ್ರೀರಂಗಪಟ್ಟಣ 2,11,691, ನಾಗಮಂಗಲ 2,10,144, ಕೃಷ್ಣರಾಜಪೇಟೆ 2,08,473 ಹಾಗೂ ಕೃಷ್ಣರಾಜನಗರದಲ್ಲಿ 2,06,423 ಮತದಾರರಿದ್ದಾರೆ. ಇದರಲ್ಲಿ 147 ಇತರೆ ಮತದಾರರು ಹಾಗೂ 822 ಸೇವಾ ಮತದಾರರು ಒಳಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News