ಬೆಳಗಾವಿ ಜಿಲ್ಲೆಗೆ ಸುರೇಶ್ ಅಂಗಡಿ ಮೋಸ ಮಾಡಿದ್ದಾರೆ: ಲಕ್ಷ್ಮಿ ಹೆಬ್ಬಾಳ್ಕರ್

Update: 2019-04-17 16:13 GMT

ಬೆಳಗಾವಿ, ಎ.17: ಸಂಸದ ಸುರೇಶ್ ಅಂಗಡಿ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಏನೂ ಮಾಡಲಿಲ್ಲ. ನಮ್ಮ ಜಿಲ್ಲೆಗೆ ಬರಬೇಕಿದ್ದ ಐಐಐಟಿ ಹಾಗೂ ಉಡಾನ್ ಯೋಜನೆಯನ್ನು ಹುಬ್ಬಳ್ಳಿಗೆ ಮಂಜೂರು ಮಾಡಿಸಿದ್ದಾರೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಿಸಿದ್ದಾರೆ.

ಬುಧವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಂಚರಿಸಿ ಪಾದಯಾತ್ರೆಯ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಸಾಧುನವರ್ ಪರವಾಗಿ ಮತಯಾಚನೆ ಮಾಡುವಾಗ ಅವರು ಮಾತನಾಡಿದರು.

ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಜೊತೆ ಕೇಂದ್ರ ಸಚಿವರನ್ನು ಭೇಟಿಯಾಗಿ, ಮನವಿ ಅರ್ಪಿಸಿರುವ ಸಂಸದ ಸುರೇಶ್ ಅಂಗಡಿ, ಬೆಳಗಾವಿ ಜಿಲ್ಲೆಗೆ ಐಐಐಟಿ ಹಾಗೂ ಉಡಾನ್ ಯೋಜನೆಯನ್ನು ತಪ್ಪಿಸುವ ಮೂಲಕ ಜಿಲ್ಲೆಗೆ ಮೋಸ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಹದಿನೈದು ವರ್ಷ ಕ್ಷೇತ್ರದ ಜನ ಸುರೇಶ ಅಂಗಡಿಗೆ ಅಧಿಕಾರ ನೀಡಿದ್ದರು. ಅಧಿಕಾರದ ಅವಧಿಯಲ್ಲಿ ಕ್ಷೇತ್ರದ ಒಬ್ಬ ಯುವಕನಿಗೂ ಉದ್ಯೋಗ ಕೊಡಿಸಲಿಲ್ಲ. ರೈತರ ಸಾಲ ಮನ್ನಾ ಮಾಡಿ, ಕಳಸಾ ಬಂಡೂರಿ ನಾಲಾ ಯೋಜನೆಯ ಅನುಷ್ಠಾನಕ್ಕೆ ತಾಂತ್ರಿಕ ತೊಂದರೆಗಳನ್ನು ಬಗೆಹರಿಸಿ ಎಂದು ಸುರೇಶ್ ಅಂಗಡಿ ಒಂದು ಬಾರಿಯೂ ಧ್ವನಿ ಎತ್ತಲಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದರು.

ಕ್ಷೇತ್ರದ ಜನರ ಧ್ವನಿಯಾಗಿ ಕೆಲಸ ಮಾಡದ ಸುರೇಶ್ ಅಂಗಡಿಗೆ ಈ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದ ಅವರು, ನುಡಿದಂತೆ ನಡೆದಿದ್ದೇನೆ. ಅಲ್ಲ ಅವಧಿಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇನೆ ಎಂದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೇನೆ, ಲೋಕಸಭಾ ಚುನಾವಣೆ ನನ್ನ ಗೌರವದ ಪ್ರಶ್ನೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಡಾ.ವಿ.ಎಸ್.ಸಾಧುನವರ್ ಅವರನ್ನು ಗೆಲ್ಲಿಸಿ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸಲು ಶಕ್ತಿ ಕೊಡಿ ಎಂದು ಅವರು ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಡಾ.ವಿ.ಎಸ್.ಸಾಧುನವರ್ ಮಾತನಾಡಿ, ಕ್ಷೇತ್ರದ ಜನ ಒಂದು ಬಾರಿ ಸೇವೆ ಮಾಡುವ ಅವಕಾಶ ನೀಡಿದರೆ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಸವದತ್ತಿ ಯಲ್ಲಮ್ಮನ ಕ್ಷೇತ್ರಕ್ಕೆ ರೈಲು ಸಂಪರ್ಕ, ಪಂಡರಪೂರ ಮಾದರಿಯಲ್ಲಿ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ, ಕ್ಷೇತ್ರದಲ್ಲಿ ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಜನಪರ ಕಾರ್ಯಗಳನ್ನು ಮಾಡುವುದರ ಜೊತೆಗೆ ಕಳಸಾ ಬಂಡೂರಿಗಾಗಿ ಸಂಸತ್ತಿನಲ್ಲಿ ರೈತರ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News