ಬಿಜೆಪಿ ರಾಷ್ಟ್ರೀಯತೆ ಬಳಸಿ ಚುನಾವಣೆ ಎದುರಿಸಲು ಮುಂದಾಗಿದೆ: ಸಿಎಂ ಕುಮಾರಸ್ವಾಮಿ

Update: 2019-04-17 16:46 GMT

ಶಿವಮೊಗ್ಗ, ಏ. 17: ದೇಶವಾಸಿಗಳಿಗೆ 2014 ರ ಚುನಾವಣೆಯಲ್ಲಿ ಹಲವು ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿಯು, ಕಳೆದ 5 ವರ್ಷಗಳಲ್ಲಿ ಆ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. 

ಬುಧವಾರ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನವಟ್ಟಿಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪನವರ ಪರ ಆಯೋಜಿಸಲಾಗಿದ್ದ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಚುನಾವಣೆಯಲ್ಲಿ ಪ್ರಚಾರಕ್ಕೆ ಅಭಿವೃದ್ದಿ ವಿಷಯಗಳು ಇಲ್ಲ. ಈ ಕಾರಣದಿಂದ ಬಿಜೆಪಿಯು, ರಾಷ್ಟ್ರೀಯತೆಯನ್ನ ಬಳಸಿಕೊಂಡು ಚುನಾವಣೆ ನಡೆಸಲು ಮುಂದಾಗಿದೆ. ಬಾಲಾಕೋಟ್‍ನಲ್ಲಿ ಪಾಕ್ ಮೇಲೆ ದಾಳಿ ನಡೆಸಿದ ಸೇನೆ ವಿಚಾರವನ್ನು ಪ್ರಚಾರದಲ್ಲಿ ಬಳಸಿಕೊಂಡು ಮತಯಾಚಿಸುತ್ತಿದೆ ಎಂದರು. 

ರೈತರಿಗೆ ಕೊಟ್ಟ ಭರವಸೆಯಂತೆ ರೈತರ ಸಾಲ ಮನ್ನಾಕ್ಕೆ ಕ್ರಮಕೈಗೊಳ್ಳಲಾಗಿದೆ. ಆದರೆ ಕೇಂದ್ರದ ಬಿಜೆಪಿ ಸರ್ಕಾರ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ಚುನಾವಣೆ ಸಂದರ್ಭದಲ್ಲಿ ರೈತರ ಖಾತೆಗೆ 6 ಸಾವಿರ ರೂ. ಹಾಕುವ ಘೋಷಣೆ ಮಾಡಿತು. ಆದರೆ ಇಲ್ಲಿಯವರೆಗೂ ರಾಜ್ಯದ ರೈತರ ಖಾತೆಗೆ ಹಣ ಸಂದಾಯವಾಗಿಲ್ಲ. ವಿನಾ ಕಾರಣ ರಾಜ್ಯ ಸರ್ಕಾರದ ಮೇಲೆ ಆರೋಪ ಹೊರಿಸುವ ಕಾರ್ಯ ನಡೆಸುತ್ತಿದೆ ಎಂದರು. 

ಕೈ ಹಿಡಿಯಲಿದ್ದಾರೆ: ಆನವಟ್ಟಿ ಹೆಲಿಪ್ಯಾಡ್‍ನಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಸಿಎಂ ಮಾತನಾಡಿದರು. ಮಂಡ್ಯ ಜಿಲ್ಲೆಯ ಜನ ತಮ್ಮನ್ನು ಸೊರಗಲು ಬಿಡುವುದಿಲ್ಲ. ಕೈ ಹಿಡಿಯಲಿದ್ದಾರೆ. ಮಂಡ್ಯದ ರೈತರು ಇನ್ನೂ ಸತ್ತಿಲ್ಲ. ಅಲ್ಲಿನ ರೈತರು ನಮ್ಮ ಕೈಬಿಡಲ್ಲ. ನೀವು ನಿಮ್ಮ ಆರೋಗ್ಯ ನೋಡಿಕೊಳ್ಳಿ ಎಂದು ರೈತರು ಹೇಳುತ್ತಿದ್ದಾರೆ ಎಂದರು. 

ಮಂಡ್ಯದ ಸ್ವಾಭಿಮಾನ ಏನೆಂಬುವುದು ಸುಮಲತಾರಿಗೇನು ಗೊತ್ತು. ಸುಮಲತಾ ಹಾಗೂ ಅವರ ಮಗ ಅಭಿಷೇಕ್‍ರವರು, ಅಂಬರೀಶ್‍ರವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರುವುದು ಬೇಡ ಎಂದುಕೊಂಡಿದ್ದರು. ಆಗಿರುವ ಘಟನೆ ಬಗ್ಗೆ ಮತ್ತೆ ನೆನಪಿಸಿಕೊಳ್ಳುವುದು ಬೇಡ ಎಂದು ತಿಳಿಸಿದರು. 

ಮೊದಲ ಹಂತದ 14 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳು ಗೆಲ್ಲುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗಿದೆ. ಬಿಜೆಪಿಯ ಯಾವುದೇ ಆಟಗಳು ಶಿವಮೊಗ್ಗ ಕ್ಷೇತ್ರದಲ್ಲಿ ನಡೆಯುವುದಿಲ್ಲ ಎಂದರು. 

ಅರ್ಥ ಗೊತ್ತಿಲ್ಲ: ಜನರ ಕಷ್ಟ ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೃದಯದಲ್ಲಿ ಭಾವುಕತೆಯಿದ್ದರೆ ಕಣ್ಣೀರಿನ ಅರ್ಥ ಗೊತ್ತಾಗುತ್ತಿತ್ತು. ನಾನು ಪ್ರತಿದಿನ ಕಣ್ಣೀರು ಹಾಕುತ್ತೆನೆ. ನಾನು ಭಾವುಕ ಜೀವಿ. ಜನರ ಕಷ್ಟ ನೋಡಿದಾಗ ಕಣ್ಣೀರು ಬರುವುದು ಸಹಜ. ಕಣ್ಣಲ್ಲಿ ನೀರು ಸುಮ್ಮನೆ ಬರುವುದಿಲ್ಲ ಎಂದು ಎಸ್.ಎಂ.ಕೃಷ್ಣ ಟೀಕೆಗೆ ತಿರುಗೇಟು ನೀಡಿದರು. 

ಹೆಲಿಕ್ಯಾಪ್ಟರ್ ತಪಾಸಣೆ
ಮಂಗಳವಾರ ಶಿವಮೊಗ್ಗ ನಗರದ ಹೆಲಿಪ್ಯಾಡ್‍ನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಯಾಣಿಸಲಿದ್ದ ಹೆಲಿಕ್ಯಾಪ್ಟರ್ ತಪಾಸಣೆ ನಡೆಸಿದ್ದ ಚುನಾವಣಾಧಿಕಾರಿಗಳು, ಬುಧವಾರ ಸೊರಬ ತಾಲೂಕು ಆನವಟ್ಟಿ ಹೆಲಿಪ್ಯಾಡ್‍ನಲ್ಲಿ ಸಿಎಂ ಕುಮಾರಸ್ವಾಮಿ ಆಗಮಿಸಿದ್ದ ಹೆಲಿಕಾಪ್ಟರ್ ಪರಿಶೀಲನೆ ನಡೆಸಿದರು. ಬೆಲ್ 412 ವಿಟಿ ಜಿವಿಎಂ ಹೆಲಿಕಾಪ್ಟರ್ ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರಿನಿಂದ ಆನವಟ್ಟಿ ಹೆಲಿಪ್ಯಾಡ್‍ಗೆ ಆಗಮಿಸುತ್ತಿದ್ದಂತೆ, ಮೂವರು ಚುನಾವಣಾಧಿಕಾರಿಗಳು ಹತ್ತು ನಿಮಿಷಗಳ ಕಾಲ ತಪಾಸಣೆಗೊಳಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News