ಮೊದಲ ಹಂತದ ಚುನಾವಣೆ: 14 ಕ್ಷೇತ್ರಗಳಲ್ಲಿ ಕನಿಷ್ಠ 10 ರಲ್ಲಿ ಜಯ- ಯಡಿಯೂರಪ್ಪ

Update: 2019-04-17 16:49 GMT

ಶಿವಮೊಗ್ಗ, ಏ. 17: ಮೊದಲ ಹಂತದ ಚುನಾವಣೆ ನಾಳೆ ನಡೆಯಲಿರುವ 14 ಕ್ಷೇತ್ರಗಳಲ್ಲಿ ಕನಿಷ್ಠ 10 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಲಿದೆ ಆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. 

ಬುಧವಾರ ಶಿವಮೊಗ್ಗದ ಜಿಲ್ಲೆ ಶಿಕಾರಿಪುರದಲ್ಲಿ ಪಟ್ಟಣದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 2014 ಕ್ಕಿಂತ ಈ ಬಾರಿ ಒಳ್ಳೆಯ ವಾತಾವರಣ ರಾಜ್ಯದಲ್ಲಿದೆ. 22 ಸ್ಥಾನ ಗೆಲ್ಲುವುದು ಖಚಿತ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ರವರು ಶಿವಮೊಗ್ಗ ಕ್ಷೇತ್ರದಲ್ಲಿ ಪ್ರಚಾರ ನಡೆಸುವುದರಿಂದ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು. 

ಸರ್ಕಾರ ಪತನ: ಶಿಕಾರಿಪುರ ಪಟ್ಟಣದಲ್ಲಿ ಬಿಜೆಪಿ ಆಯೋಜಿಸಿದ್ದ ವಿಜಯ ಸಂಕಲ್ಪ ಸಮಾವೇಶ ಉದ್ಘಾಟಿಸಿದ ನಂತರ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, 'ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್-ಜೆಡಿಎಸ್‍ನ ಅಪವಿತ್ರ ಮೈತ್ರಿ ಸರಕಾರ ಪತನಗೊಳ್ಳಲಿದೆ' ಎಂದು ತಿಳಿಸಿದರು.  

ಸಮ್ಮಿಶ್ರ ಸರ್ಕಾರವು ರೈತರಿಗೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದೆ. ಸಾಲ ಮನ್ನಾ ಯೋಜನೆಯನ್ನು ಕೇವಲ ಚುನಾವಣೆ ಗಿಮಿಕ್ ಆಗಿ ಮಾಡಿಕೊಂಡು, ರೈತರಿಗೆ ಅನ್ಯಾಯ ಮಾಡಲಾಗಿದೆ. ಸಿಎಂ ಆದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಹೆಚ್.ಡಿ.ಕುಮಾರಸ್ವಾಮಿಯವರು, ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಅನ್ಯಾಯ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. 

ಅಲೆಯಿದೆ: ಪ್ರಸ್ತುತ ದೇಶದಲ್ಲಿ ಎಲ್ಲೇ ಹೋದರು ಎಲ್ಲೆಲ್ಲೂ ಮೋದಿ ಮೋದಿ ಎಂದು ಜನ ಹೇಳುತ್ತಿದ್ದಾರೆ. ಮೋದಿಯರ ಉತ್ತಮ ಆಡಳಿತಕ್ಕೆ ಜನರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಅವರ ಒಳ್ಳೆಯ ಕೆಲಸಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಹಿಂದೆ ಹತ್ತು ವರ್ಷ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್‍ರವರ ಬಗ್ಗೆ ಯಾರೊಬ್ಬರು ಮಾತನಾಡುವುದಿಲ್ಲ. 

ಮನಮೋಹನ್ ಸಿಂಗ್‍ರವರು ಕೇವಲ ಸೋನಿಯಾ ಗಾಂಧಿ ಅವರ ರಿಮೋಟ್ ಆಗಿದ್ದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವದಿಯಲ್ಲಿ, 54 ಲಕ್ಷ ಕೋಟಿಯಷ್ಟು ಸಾಲ ಹೊರೆ ಈ ದೇಶದ ಮೇಲೆ ಬಿದ್ದಿತ್ತು. ಆದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಎಲ್ಲ ಸಾಲವನ್ನು ತೀರಿಸಿ ವಿಶ್ವಕ್ಕೆ ಮಾದರಿಯಾಗಿ, ದೇಶ ಕಟ್ಟುವ ಕಾರ್ಯ ನಡೆಸಿದ್ದಾರೆ ಎಂದರು. 

ಶಿಕಾರಿಪುರ ಕ್ಷೇತ್ರದ ಅಭಿವೃದ್ದಿಗೆ ನಾನು ಮತ್ತು ಬಿ.ವೈ.ರಾಘವೇಂದ್ರ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇವೆ. ಯಾವುದೇ ಕೆಲಸವಾಗಿಲ್ಲ ಎಂದು ಹೇಳುವ ಆಗಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News