ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಿ: ಅಧಿಕಾರಿಗಳಿಗೆ ಶಿವಮೊಗ್ಗ ಡಿಸಿ ದಯಾನಂದ್ ಸೂಚನೆ

Update: 2019-04-17 16:55 GMT

ಶಿವಮೊಗ್ಗ, ಎ. 17: ಎಪ್ರಿಲ್ 23 ರಂದು ನಡೆಯಲಿರುವ ಶಿವಮೊಗ್ಗ ಲೋಕಸಭಾ ಚುನಾವಣೆಗೆ ನಿಯೋಜಿತರಾದ ಎಲ್ಲಾ ನೌಕರರು ತಮ್ಮ ಜಬಾವ್ದಾರಿ ಅರಿತು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಎಚ್ಚರಿಕೆ ನೀಡಿದ್ದಾರೆ. 

ಬುಧವಾರ ನಗರದ ಜಿಲ್ಲಾಡಳಿತ ಸಭಾಂಗಣದಲ್ಲಿ ಮೈಕ್ರೋ ಅಬ್ಝರ್ವರ್ ಗಳಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಹಂತದ ಅಧಿಕಾರಿಗಳು ಸಮರ್ಪಕವಾಗಿ ತಮ್ಮ ಜವಾಬ್ದಾರಿ ನಿರ್ವಹಿಸಬೇಕು. ಮತಗಟ್ಟೆಗಳಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ಎಚ್ಚರಿಕೆ ವಹಿಸಬೇಕು. ಆಯೋಗದ ನಿರ್ದೇಶನದಂತೆ ಅತ್ಯಂತ ವ್ಯವಸ್ಥಿತವಾಗಿ ಚುನಾವಣೆ ನಿರ್ವಹಿಸಲು ಮುಂದಾಗುವಂತೆ ಅವರು ಸಲಹೆ ನೀಡಿದರು. 

ಚುನಾವಣಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿ, ಸಿಬ್ಬಂದಿಗಳು ಮೊದಲು ಮತ ಚಲಾಯಿಸಬೇಕು. ಯಾರೊಬ್ಬರೂ ಕೂಡ ಮತದಾನದಿಂದ ವಂಚಿತರಾಗಬಾರದು. ಚುನಾವಣಾ ವೀಕ್ಷಕರಾಗಿ ಆಗಮಿಸಿರುವ ಅಧಿಕಾರಿಗಳಿಗೆ ಮೈಕ್ರೋ ಅಬ್ಝರ್ವರ್ಗಳು ಕಣ್ಣು-ಕಿವಿಗಳಿದ್ದಂತೆ ಎಂದರು.

ಈ ಸಂದರ್ಭದಲ್ಲಿ ತರಬೇತುದಾರರು ಮಾಹಿತಿ ನೀಡಿ, ಮತಗಟ್ಟೆಯಲ್ಲಿ ರಾಜಕೀಯ ಪಕ್ಷದ ಓರ್ವ ಪ್ರತಿನಿಧಿಗೆ ಮಾತ್ರ ಅವಕಾಶವಿರುತ್ತದೆ. ಹೊರಗಿನ ವ್ಯಕ್ತಿಗಳು ಮತಗಟ್ಟೆ ಪ್ರವೇಶಿಸುವುದನ್ನು ಹಾಗೂ ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿತ ಸಿಬ್ಬಂದಿಗಳಲ್ಲದೇ ಅನ್ಯರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದರು.

ವಯಸ್ಕರು ಅಥವಾ ದುರ್ಬಲರು ಮತಗಟ್ಟೆಗೆ ಆಗಮಿಸಿದ್ದಲ್ಲಿ ಅಂತಹವರಿಗೆ ಸಹಾಯಕರೊಬ್ಬರನ್ನು ಕರೆದೊಯ್ಯಲು ಅವಕಾಶ ನೀಡಬಹುದಾಗಿದೆ. ಗೌಪ್ಯತೆ ಕಾಪಾಡುವ ಹಿನ್ನೆಲೆಯಲ್ಲಿ ಮತದಾನದ ವಿಡಿಯೋ ಚಿತ್ರೀಕರಣ ಕಡ್ಡಾಯವಾಗಿ ನಿಷೇಧಿಸಿದೆ. ಅರ್ಹ ಮತದಾರರು ಖಚಿತಪಡಿಸುವ ಯಾವುದೇ ಒಂದು ರೀತಿಯ ಚುನಾವಣಾ ಆಯೋಗದ ನಿರ್ಧರಿಸಿರುವ ದಾಖಲಾತಿಯೊಂದನ್ನು ಹಾಜರುಪಡಿಸಿ ಮತ ಚಲಾಯಿಸಬಹುದಾಗಿದೆ ಎಂದರು.

ಮತಗಟ್ಟೆಯಲ್ಲಿ ಚುನಾವಣಾ ಆಯೋಗದ ಸೂಚನೆಯಂತೆ ಮತಯಂತ್ರಗಳನ್ನು ವ್ಯವಸ್ಥಿತವಾಗಿ ಜೋಡಿಸಬೇಕು. ಅಣುಕು ಮತದಾನದ ನಂತರ ಅಳಿಸಿ ಹಾಕಬೇಕು. ಯಾವುದೇ ಆತುರ ಮಾಡದೇ ಸಮಾಧಾನವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಈ ಪ್ರಕ್ರಿಯೆಯನ್ನು ಪಿ.ಆರ್.ಒ.ಗಳು ಮೊಬೈಲ್ ನಲ್ಲಿ ಸೆಲ್ಫಿ ತೆಗೆದು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕಳುಹಿಸುವಂತೆ ಅವರು ಸೂಚಿಸಿದರು.

ಮತಯಂತ್ರ, ವಿ.ವಿ.ಪ್ಯಾಟ್‍ಗಳು ನಿರ್ವಹಿಸುವ ಕಾರ್ಯ, ಸಂಪರ್ಕದ ಬಗ್ಗೆ ಅರಿವು ಹೊಂದಿರಬೇಕು ಎಂದ ಅವರು, ಈ ಬಾರಿಯ ಚುನಾವಣೆಯಲ್ಲಿ ಮತದಾರನ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿತರಾಗಿರುವ ಚುನಾವಣ ವೀಕ್ಷಕರು, ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News