ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 1,222 ಮತಗಟ್ಟೆಗಳಲ್ಲಿ ನಾಳೆ ಮತದಾನ

Update: 2019-04-17 17:03 GMT

ಚಿಕ್ಕಮಗಳೂರು, ಎ.17: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ರಾಜ್ಯದಲ್ಲಿ ಎ.18 (ಗುರುವಾರ) ನಾಳೆ ನಡೆಯಲಿದ್ದು, ಅಬ್ಬರದ ಪ್ರಚಾರ ಮಂಗಳವಾರವೇ ತೆರೆಕಂಡಿದೆ. ಬುಧವಾರ ಸಂಜೆವರೆಗೂ ಕಾರ್ಯಕರ್ತರು ತಮ್ಮ ಅಭ್ಯರ್ಥಿಯ ಪರ ಮನೆ ಮನೆ ಪ್ರಚಾರ ನಡೆಸಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ 12 ಜನ ಅಭ್ಯರ್ಥಿಗಳು ಹಾಗೂ ಹಾಸನ ಲೋಕಸಭಾ ಕ್ಷೇತ್ರದಿಂದ 6 ಜನ ಅಭ್ಯರ್ಥಿಗಳು ಸ್ಫರ್ಧಾ ಕಣದಲ್ಲಿದ್ದು, ಉಡುಪಿ ಚಿಕ್ಕಮಗಳೂರು ಕ್ಷೇತ್ರದ 1,222 ಮತಗಟ್ಟೆ ಹಾಗೂ ಹಾಸನ ಲೋಕಸಭಾ ಕ್ಷೇತ್ರದ 2,173 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. 

ಗುರುವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಮತದಾನ ಪ್ರಕ್ರಿಯೆ ನಡೆಯಲಿದ್ದು, ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಲಿರುವ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳಿಗೆ ಮತದಾನಕ್ಕೆ ಅವಶ್ಯಕವಾಗಿರುವ ಪರಿಕರಗಳನ್ನು ಬುಧವಾರ ವಿತರಿಸಲಾಯಿತು. ನಗರದ ಐಡಿಎಸ್‍ಜಿ ಕಾಲೇಜು ಆವರಣದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಹಾಗೂ ಹಾಸನ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಿಗೆ ನಿಯೋಜಿಸಿರುವ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳಿಗೆ ಮತಯಂತ್ರದೊಂದಿಗೆ ಮತ್ತು ಅಗತ್ಯ ಪರಿಕರದೊಂದಿಗೆ ಕರ್ತವ್ಯಕ್ಕೆ ನಿಯೋಜಿಸಿರುವ ಸ್ಥಳಗಳಿಗೆ ತೆರಳಿದರು.

ಮತಯಂತ್ರ ಹಾಗೂ ಅಗತ್ಯ ಪರಿಕರಗಳನ್ನು ಪರಿಶೀಲನೆ ನಡೆಸಿ ತಾವು ನಿಯೋಜನೆಗೊಂಡ ಮತಗಟ್ಟೆಗಳಿಗೆ ಚುನಾವಣಾ ಆಯೋಗದಿಂದ ಏರ್ಪಡಿಸಿದ್ದ ವಾಹನದಲ್ಲಿ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ತಾವು ನಿಯೋಜನೆಗೊಂಡ ಮತಗಟ್ಟೆಗಳಿಗೆ ತೆರಳುವ ಮುನ್ನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಥಳದಲ್ಲಿದ್ದು ಮತದಾನ ಪ್ರಕ್ರಿಯೆಯಲ್ಲಿ ಯಾವ ರೀತಿ ಕರ್ತವ್ಯ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಿದರು.

ಚುನಾವಣಾ ಕರ್ತವ್ಯಕ್ಕೆ 8,129 ಸಿಬ್ಬಂದಿ

ಚುನಾವಣಾ ಕರ್ತವ್ಯಕ್ಕೆ ಮತಗಟ್ಟೆ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು, ಹಾಗೂ ವಾಹನ ಚಾಲಕರು ಸೇರಿದಂತೆ 8,129 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಮತದಾನ ಪ್ರಕ್ರಿಯೆಗೆ ಬೇಕಾಗುವ ಮೂಲಭೂತ ಸೌಲಭ್ಯಗಳನ್ನು ಮತಕೇಂದ್ರಗಳಲ್ಲಿ ಈಗಾಗಲೇ ಕಲ್ಪಿಸಲಾಗಿದ್ದು, ಜಿಲ್ಲಾಧ್ಯಂತ ನಿಷೇಧಾಜ್ಞೆ ಜಾರಿಯಲ್ಲಿದೆ.

ಮತದಾನ ಹಿನ್ನೆಲೆ ಬಿಗಿ ಬಂದೋಬಸ್ತ್
ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಇಂದು ನಡೆಯಲಿದ್ದು, ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಜಿಲ್ಲಾದ್ಯಾಂತ 1,700 ಬೂತ್‍ಮಟ್ಟದಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಲಸಾಗಿದೆ. ಡಿಎಆರ್, ಕೆಎಸ್‍ಆರ್‍ಪಿ, ಸಿಆರ್‍ಪಿಎಫ್ ತುಕಡಿಗಳನ್ನು ಜಿಲ್ಲೆಯಲ್ಲಿ ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ದುರ್ಗಮ ಪ್ರದೇಶ ಮತ್ತು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.

ಗಮನ ಸೆಳೆಯುತ್ತಿರುವ ಸಾಂಪ್ರದಾಯಿಕ ಮತಗಟ್ಟೆಗಳು: 

ಜಿಲ್ಲೆಯಲ್ಲಿರುವ 1222 ಮತಟ್ಟೆಗಳ ಪೈಕಿ 3 ಮತಗಟ್ಟೆಗಳನ್ನು 4 ಸಾಂಪ್ರದಾಯಿಕ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಜಿಲ್ಲೆಯ ಕೊಪ್ಪ, ಶೃಂಗೇರಿ ತಾಲೂಕುಗಳ ವ್ಯಾಪ್ತಿಯಲ್ಲಿ ಗುಡ್ಡಗಾಡು ಜನಾಂಗದವರು ವಾಸಿಸುವ ಸ್ಥಳಗಳಲ್ಲಿ 3 ಸಾಂಪ್ರದಾಯಿಕ ಮತಗಟ್ಟೆಗಳನ್ನು ಆರಂಭಿಸಲಾಗಿದ್ದು, ಚಿಕ್ಕಮಗಳೂರು ವಿಧಾನ ಸಭೆ ಕ್ಷೇತ್ರದಲ್ಲಿ 1 ಸಾಂಪ್ರದಾಯಿಕ ಮತಗಟ್ಟೆ ತೆರೆಯಲಾಗಿದೆ. ಗುಡ್ಡಗಾಡು ಜನರ ಆಚಾರ, ವಿಚಾರ ಬಿಂಬಿಸುವಂತೆ ಸಿಂಗಾರಗೊಂಡಿರುವ ಈ ಮತಗಟ್ಟೆಗಳು ಈ ಚುನಾವಣೆಯ ಆಕರ್ಷಣೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News