ತೇಜೋವಧೆ ಆರೋಪ: ಮಾಧ್ಯಮಗಳ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿ ಚುನಾವಣಾಧಿಕಾರಿಗೆ ಪ್ರತಾಪ್ ಸಿಂಹ ದೂರು

Update: 2019-04-17 17:24 GMT

ಮೈಸೂರು,ಎ.17: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ತನ್ನ ಚಾರಿತ್ರ್ಯ ಹರಣ ಮಾಡುತ್ತಿರುವ ವ್ಯಕ್ತಿಗಳು ಹಾಗೂ ಮಾಧ್ಯಮಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಜಿಲ್ಲಾ ಚುನಾವಣಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರಿಗೆ ದೂರು ನೀಡಿದ್ದಾರೆ.

ಚುನಾವಣೆಗೆ 48 ಗಂಟೆಗಳ ಮುನ್ನ ಅಭ್ಯರ್ಥಿಯ ತೇಜೋವಧೆ ಅಥವಾ ಮಾನಹಾನಿಕರ ಯಾವುದೇ ಸುದ್ಧಿ ಪ್ರಕಟಿಸಬಾರದು ಎಂದು ನೀತಿ ಸಂಹಿತೆ ಸ್ಪಷ್ಟವಾಗಿ ತಿಳಿಸಿದೆ. ಆದರೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಉಲ್ಲಂಘಿಸಿ ಉದ್ದೇಶ ಪೂರ್ವಕವಾಗಿ ನನ್ನ ವಿರುದ್ಧ ವೀಡಿಯೋ, ಆಡಿಯೋ ಸಂಭಾಷಣೆಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಜತೆಗೆ ಕೆಲ ಮಾಧ್ಯಮಗಳಲ್ಲೂ ಸಹ ಇದು ಪ್ರಕಟವಾಗುತ್ತಿದ್ದು, ಚುನಾವಣೆ ಹೊಸ್ತಿಲಿನಲ್ಲಿ ನನ್ನ ತೇಜೋವಧೆ ಮಾಡುವ ಸಲುವಾಗಿಯೇ ಈ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಇಂತಹ ಮಾಧ್ಯಮ ಹಾಗೂ ವ್ಯಕ್ತಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಎಂದು ಸಂಸದ ಪ್ರತಾಪ್ ಸಿಂಹ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ವಾರ್ತಾಭಾರತಿಯೊಂದಿಗೆ ಜಿಲ್ಲಾ ಚುನಾವಣಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾತನಾಡಿ, ಸಂಸದ ಪ್ರತಾಪ್ ಸಿಂಹ ಅವರು ಕೆಲ ಮಾಧ್ಯಮ ಹಾಗೂ ವ್ಯಕ್ತಿಗಳನ್ನು ಉಲ್ಲೇಖಿಸಿ, ತೇಜೋವಧೆ ಮಾಡುತ್ತಿದ್ದಾರೆಂದು ಆರೋಪಿಸಿ ದೂರು ನೀಡಿದ್ದು, ಅವರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿದ್ದಾರೆ. ಸಂಸದದ ದೂರನ್ನು ಗಂಭೀರವಾಗಿ ಪರಿಗಣಿಸಿದ್ದು, ವೈರಲ್ ಆಗಿರುವ ಆಡಿಯೋ ಮತ್ತು ವೀಡಿಯೋಗಳ ಸತ್ಯಾಸತ್ಯತೆ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುವಂತೆ ಫ್ಲೈಯಿಂಗ್ ಸ್ಕ್ವಾಡ್ ಗಳಿಗೆ ಲಿಖಿತ ರೂಪದಲ್ಲಿ ಆದೇಶ ನೀಡಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News