ರಾಜಕೀಯ ಲಾಭಕ್ಕಾಗಿ ಪುಲ್ವಾಮ ದಾಳಿ: ಸಿಪಿಎಂ ಮುಖಂಡ ಬಸವರಾಜು ಆರೋಪ

Update: 2019-04-17 17:42 GMT

ಹೊಸಪೇಟೆ, ಎ.17: ಲೋಕಸಭಾ ಚುನಾವಣೆಯಲ್ಲಿ ಲಾಭ ಗಳಿಸುವ ಸ್ವಾರ್ಥದಿಂದಾಗಿ ಬಿಜೆಪಿ ಪುಲ್ವಾಮ ದಾಳಿಯ ಸಂಚನ್ನು ರೂಪಿಸಿದೆ. ಈ ಕುರಿತು ಸಮಗ್ರ ತನಿಖೆಯಾದರೆ ಸತ್ಯಾಂಶ ಹೊರಕ್ಕೆ ಬರಲಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್.ಎಸ್.ಬಸವರಾಜು ಆಗ್ರಹಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾಗನಾಡಿದ ಅವರು, ಕಳೆದ 5 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಒಂದೇ ಒಂದು ಜನಪರವಾದ ಕೆಲಸ ಮಾಡಿಲ್ಲ. ಹೀಗಾಗಿ ಸೋಲಿನ ಭೀತಿಯಿಂದಾಗಿ ಬಿಜೆಪಿ ಪುಲ್ವಾಮ ದಾಳಿಯನ್ನು ರೂಪಿಸಿದೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ದೇಶದ ಯುವಕರಿಗೆ ಕಿಂಚಿತ್ತೂ ಮಾಡಿಲ್ಲ. ಉದ್ಯೋಗ ಸೃಷ್ಟಿಸುತ್ತೇನೆಂದು ಭರವಸೆ ನೀಡಿ, ವಿಶ್ವಾಸ ದ್ರೋಹ ಮಾಡಿದ್ದಾರೆ. ಈ ಹಿಂದೆ ಇದ್ದ ಉದ್ಯೋಗದ ಪ್ರಮಾಣವನ್ನೆ ಕಡಿಮೆ ಮಾಡುವ ಮೂಲಕ ಯುವಕರು, ಸಣ್ಣ ಪುಟ್ಟ ವ್ಯಾಪಾರಸ್ಥರು ಮನೆಯಲ್ಲಿರುವಂತೆ ಮಾಡಿರುವುದೆ ಕೇಂದ್ರ ಸರಕಾರದ ಮಹಾತ್ಕಾರ್ಯವೆಂದು ಅವರು ಕಿಡಿಕಾರಿದ್ದಾರೆ.

ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡಿಲ್ಲ. ರೈತರು ಖರೀದಿಸಿದ ಕೃಷಿ ಉತ್ಪನ್ನಗಳಿಗೆ ಸಬ್ಸಿಡಿ ನೀಡುವ ಬದಲು, ರಾಸಾಯನಿಕ ಕಂಪೆನಿಗಳಿಗೆ ಸಬ್ಸಿಡಿ ನೀಡಲಾಗಿದೆ. ಈ ಐದು ವರ್ಷಗಳಲ್ಲಿ ರೈತರ, ಕಾರ್ಮಿಕರ ಹಾಗೂ ಸಣ್ಣ ವ್ಯಾಪಾರಿಗಳ ವಿರುದ್ಧವಾಗಿ ದೊಡ್ಡ ದೊಡ್ಡ ಉದ್ಯಮಿಗಳ ಪರವಾಗಿ ನೀತಿಗಳನ್ನು ಜಾರಿ ಮಾಡಿರುವುದು ಕೇಂದ್ರ ಸರಕಾರದ ಹೆಗ್ಗಳಿಕೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಿಪಿಎಂ ಮುಖಂಡ ಜಂಬಯ್ಯ ನಾಯಕ, ಕೆ.ಕರುಣಾನಿಧಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News