ಕ್ಷೇತ್ರ ನಿರ್ಲಕ್ಷ್ಯವೇ ಶೋಭಾ ಕರಂದ್ಲಾಜೆ ಸೋಲಿಗೆ ಕಾರಣವಾಗಲಿದೆ: ಎಚ್.ಎಚ್.ದೇವರಾಜ್

Update: 2019-04-17 17:57 GMT

ಚಿಕ್ಕಮಗಳೂರು, ಎ.17: ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಉತ್ತಮ ಜನಾಭಿಪ್ರಾಯ ವ್ಯಕ್ತವಾಗಿದೆ. ಅವರ ಗೆಲುವು ನಿಶ್ಚಿತ. ಕ್ಷೇತ್ರದ ಅಭಿವೃದ್ಧಿಯಲ್ಲಿ ಹಿಂದಿನ ಸಂಸದೆ ಶೋಭಾ ಕರಂದ್ಲಾಜೆ ತೋರಿದ ನಿರ್ಲಕ್ಷ್ಯ ಧೋರಣೆಯೇ ಮೈತ್ರಿ ಪಕ್ಷಗಳ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ಯತೀತ ಪಕ್ಷಗಳು ಒಗ್ಗೂಡಿ ಚುನಾವಣೆ ಎದುರಿಸುವ ಮೂಲಕ ಜಿಲ್ಲೆಯಲ್ಲಿ ಇತಿಹಾಸ ಸೃಷ್ಟಿಸಿದೆ. ಚುನಾವಣಾ ಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತಯಾಚನೆ ವೇಳೆ ನಮ್ಮನ್ನು ಯಾರೂ ಪ್ರಶ್ನೆ ಮಾಡಲಿಲ್ಲ ಎಂದ ಅವರು, ವಿರೋಧ ಪಕ್ಷದ ಅಭ್ಯರ್ಥಿಗೆ ಕ್ಷೇತ್ರದಲ್ಲಿ ಇಷ್ಟೊಂದು ವಿರೋಧ ವ್ಯಕ್ತವಾಗಿರುವುದು ಇದೇ ಮೊದಲು. ಅವರು ಹೋದ ಕಡೆಯಲ್ಲಿ ಐದು ವರ್ಷ ಏನು ಸಾಧನೆ ಮಾಡಿದ್ದೀರಾ? ಸಾಧನೆ ಪಟ್ಟಿ ತೋರಿಸಿ ಮತಕೇಳಿ ಎಂದು ಕೇಳುತ್ತಿದ್ದಾರೆ. ಇದರಿಂದಾಗಿ ಶೋಭಾ ಅವರನ್ನು ಮತದಾರರು ಈ ಬಾರಿ ತಿರಸ್ಕಾರ ಮಾಡಲಿದ್ದಾರೆ ಎಂದು ತಿಳಿಸಿದರು.

ಸಂಸದೆ ಜಿಲ್ಲೆಗೆ ಬರಬಾರದು ಎಂದು ಪಕ್ಷದ ಮುಖಂಡರು ಹಾಗೂ ಜನತೆ ವಿರೋಧ ವ್ಯಕ್ತಪಡಿಸಿ ಗೋಬ್ಯಾಕ್ ಶೋಭಾ ಎನ್ನುತ್ತಿದ್ದಾರೆ, ಆದರೂ ಅವರು ಯಾವ ನೈತಿಕತೆ ಇಟ್ಟುಕೊಂಡು ಮತ ಕೇಳುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳಿಗೆ ತಿಂಗಳಿಗೊಮ್ಮೆಯೂ ಭೇಟಿ ನೀಡಲಿಲ್ಲ. ರೈತರಪರ ಧ್ವನಿ ಎತ್ತಲಿಲ್ಲ. ಇಂತಹ ಸಂಸದರು ನಮಗೆ ಬೇಕಿಲ್ಲ, ಅವರನ್ನು ಈ ಬಾರಿ ಮನೆಗೆ ಕಳಿಸಬೇಕು ಎಂದು ಹೇಳಿದರು.

ಸಂಸದೆ ಶೋಭಾ ಜಿಲ್ಲೆಯ ಒಂದು ಸಮಸ್ಯೆಗೆ ಸ್ಪಂದಿಸಿದ್ದೇನೆಂದರೆ ಅವರನ್ನು ನಾವು ಅಭಿನಂದಿಸುತ್ತೇವೆಂದು ಸವಾಲು ಹಾಕಿದ ಎಚ್.ಎಚ್.ದೇವರಾಜ್, ನೀರಾವರಿ ಯೋಜನೆ, ರೈಲ್ವೇ ಯೋಜನೆ ಯಾವುದಕ್ಕೂ ಸ್ಪಂದಿಸಲಿಲ್ಲ, ಶೃಂಗೇರಿ, ಸಕಲೇಶಪುರಕ್ಕೆ ರೈಲು ಬಿಡುತ್ತೇವೆ ಎಂದಿದ್ದರು, ಆದರೆ ಈ ಬಿಜೆಪಿಯವರು ಬರೀ ಡೂಪ್ಲಿಕೇಟ್ ರೈಲು ಬಿಟ್ಟರು ಎಂದು ವ್ಯಂಗ್ಯವಾಡಿದರು.

ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರ ಐದು ವರ್ಷದ ಸಾಧನೆ ಶೂನ್ಯ. ಜಿಲ್ಲೆಯ ಜ್ವಲಂತ ಸಮಸ್ಯೆಯಾದ ಕಸ್ತೂರಿ ರಂಗನ್ ವರದಿ, ಕಾಫಿಬೆಳೆಗಾರರ ಸಮಸ್ಯೆ, ಭೂ ಒತ್ತುವರಿ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದ ಅವರು, ಅಡಿಕೆ, ಕಾಫಿ, ಕಾಳುಮೆಣಸು, ತೆಂಗು ಬೆಳೆಗಾರರು ಬರಗಾಲದಿಂದ ಮತ್ತು ದರ ಕುಸಿತದಿಂದ ಕಂಗಲಾಗಿದ್ದ ಸಂದರ್ಭದಲ್ಲಿ ಕೇಂದ್ರ ಸರಕಾರ ಹಾಗೂ ಮಂತ್ರಿಗಳೊಂದಿಗೆ ಚರ್ಚಿಸಿ ಬೆಳೆಗಾರರ ನೆರವಿಗೆ ಬರುವ ಭರವಸೆ ರೈತರು ಹೊಂದಿದ್ದರು. ಆದರೆ ಸಂಸದೆ ಯಾರೊಂದಿಗೂ ಚರ್ಚಿಸುವು ಬಿಡಿ, ತುಟಿಬಿಚ್ಚಲಿಲ್ಲ ಎಂದು ಲೇವಡಿ ಮಾಡಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತಪರವಾಗಿ ಚಿಂತಿಸಿ ರೈತರಿಗೆ ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾದ ಸಂದರ್ಭದಲ್ಲಿ ಅವರ ಮನೆಗೆ ಭೇಟಿನೀಡಿ ಆತ್ಮಹತ್ಯೆಗೆ ಶರಣಾದ ಕುಟುಂಬಕ್ಕೆ 50ಸಾವಿರ ರೂ. ಅನ್ನು ತಮ್ಮ ಜೇಬಿನಿಂದ ನೀಡಿದ್ದಾರೆ. ಇನಾಂ ಭೂಮಿಯಲ್ಲಿ ವಾಸವಾಗಿದ್ದ ರೈತರನ್ನು ಒಕ್ಕಲೆಬ್ಬಿಸುವ ಪರಿಸ್ಥಿತಿ ಬಂದಾಗ ಅವರ ನೆರವಿಗೆ ಬಂದಿದ್ದಾರೆ ಎಂದು ತಿಳಿಸಿದರು.

ಶೋಭಾ ಕರಂದ್ಲಾಜೆ ತಾವು ಹೋದ ಕಡೆಯೆಲ್ಲ, 370 ಕೋಟಿ ರೂ. ಅನುದಾನ ಜಿಲ್ಲೆಗೆ ತಂದಿದ್ದೇನೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಯಾರೇ ಇದ್ದರೂ ಸಂಸದರ ನಿಧಿಯಿಂದ ಅನುದಾನ ಬರುತ್ತದೆ. ಜಿಲ್ಲೆಗೆ ವಿಶೇಷವಾಗಿ ಏನು ಮಾಡಿದ್ದಾರೆ ಎಂಬುದನ್ನು ಹೇಳಲಿ ಎಂದ ಅವರು, ಸುಳ್ಳು ಹೇಳಲು ಇತಿಮಿತಿ ಬೇಕು. ಜವಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಂತಿಪ್ರಿಯ ಜಿಲ್ಲೆಯ ಪ್ರತಿನಿಧಿಯಾದ ಸಂಸದೆ ಶೋಭಾ, ರಾಜ್ಯದ ಮಂಗಳೂರು, ಶಿವಮೊಗ್ಗ, ಮಡಿಕೇರಿಯಲ್ಲಿ ನಡೆದ ಕೋಮುಗಲಭೆ ಸಂದರ್ಭದಲ್ಲಿ ಕಿರುಚಾಡಿ ಜಿಲ್ಲೆಗೆ ಅಪಮಾನ ಮಾಡಿದ್ದಾರೆ. ಸಮಸ್ಯೆ ಪರಿಹಾರ ಮಾಡಿ ಎಂದು ಜನತೆ ಆರಿಸಿ ಕಳಿಸಿದ್ದು, ಕಿರುಚಾಡಲು ಅಲ್ಲ ಎಂದ ದೇವರಾಜ್, ಇಂತಹ ಬೇಜವಬ್ದಾರಿ ಸಂಸದರನ್ನು ಈ ಬಾರಿ ಜನತೆ ಮನೆಗೆ ಕಳಿಸಿ. ಮೈತ್ರಿ ಪಕ್ಷದ ಅಭ್ಯರ್ಥಿ ಮಧ್ವರಾಜ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಎಂ.ಡಿ.ರಮೇಶ್, ಮಂಜಪ್ಪ, ಬೈರೇಗೌಡ, ವಿನಯ್ ಉಪಸ್ಥಿತರಿದ್ದರು.

ಮೋದಿಗೆ ಮತ ನೀಡದವರನ್ನು ಕೀಳುಮಟ್ಟದ ಶಬ್ಧದಿಂದ ನಿಂದಿಸಿರುವ ಶಾಸಕ ಸಿ.ಟಿ.ರವಿ ಮೂರನೇ ದರ್ಜೆಯ ರಾಜಕಾರಣ ಮಾಡಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರಿಗೆ ನಾಚೀಕೆಯಾಗಬೇಕು. ಸಿ.ಟಿ.ರವಿ ತಕ್ಷಣ ಜನರ ಕ್ಷಮೆ ಕೇಳಬೇಕು. ಈ ಸಂಬಂಧ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದ್ದು, ಅವರು ರವಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು

-ಎಚ್.ಎಚ್.ದೇವರಾಜ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News