ಶೋಕಿಗಾಗಿ ಶಾಸಕರಾಗಿರುವ ನಿಮಗೆ ನಾಚಿಕೆಯಾಗಬೇಕು: ಸಿ.ಟಿ.ರವಿ ವಿರುದ್ಧ ಗಾಯತ್ರಿ ಶಾಂತೇಗೌಡ ವಾಗ್ದಾಳಿ

Update: 2019-04-17 18:06 GMT

ಚಿಕ್ಕಮಗಳೂರು,ಎ.17: ನಾಲ್ಕು ಬಾರಿ ಶಾಸಕರಾಗಿರುವ ನೀವು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಮಾಡಿದ್ದಾದರೂ ಏನು ? ಈ ಕ್ಷೇತ್ರದಲ್ಲಿ ಏನೂ ಸಾಧನೆ ಮಾಡದ ನಿಮಗೆ ನಾಚಿಕೆಯಾಗಬೇಕು ಎಂದು ವಿಧಾನ ಪರಿಷತ್ ಮಾಜಿ ಶಾಸಕಿ ಎ.ವಿ.ಗಾಯತ್ರಿ ಶಾಂತೇಗೌಡ ಶಾಸಕ ಸಿ.ಟಿ.ರವಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕರಗಡ ನೀರಾವರಿಯೋಜನೆ ಕುರಿತ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಶಾಸಕ ಸಿ.ಟಿ.ರವಿ ಅವರ ಪ್ರತಿಕ್ರಿಯೆಗೆ ತಿರುಗೇಟು ನೀಡಿರುವ ಗಾಯತ್ರಿ ಶಾಂತೇಗೌಡ, ಕರಗಡ ಯೋಜನೆ ಹಳ್ಳ ಹಿಡಿಯಲು ಶಾಸಕರಾಗಿರುವ ನೀವೇ ನೇರವಾಗಿ ಹೊಣೆಗಾರರಾಗಿದ್ದೀರಿ. ಟಿ ಯೋಜನೆ ಕಾಮಗಾರಿಯನ್ನು ಅವೈಜ್ಞಾನಿಕ ರೀತಿಯಲ್ಲಿ ತರಾತುರಿಯಲ್ಲಿ ಗೊತ್ತು ಗುರಿ ಇಲ್ಲದೆ ಆರಂಭ ಮಾಡಿರುವ ಪರಿಣಾಮವಾಗಿ ಕರಗಡ ಯೋಜನೆ ಕುಂಟುತ್ತಾ ಸಾಗಲು ನೀವು ಕಾರಣವಾಗಿದ್ದೀರಿ ಎಂದು ತಿರುಗೇಟು ನೀಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಯೋಜನೆ ಬಗ್ಗೆ ಮಾಹಿತಿಗಳನ್ನು ಪಡೆದು ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಅನುದಾನ ನೀಡಿದ್ದರಿಂದಾಗಿ ಈ ಹಂತಕ್ಕೆ ಬಂದು ನಿಂತಿದೆ. ಈ ಯೋಜನೆಗೆ ಸಿದ್ದರಾಮಯ್ಯ ಅವರು ಅನುದಾನ ನೀಡುವ ಮೂಲಕ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ, ನೀವು ಈ ವಿಚಾರದಲ್ಲಿ ಏನು ಕಡಿದು ಕಟ್ಟೆ ಹಾಕಿದ್ದೀರಿ ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಹೇಳಿದ್ದಾರೆ.

ಈ ಯೋಜನೆ ಕುಂಟುತ್ತಾ ಸಾಗುತ್ತಿರುವುದಕ್ಕೆ ಶಾಸಕರಾಗಿರುವ ನೀವೇ ಕಾರಣರಾಗಿದ್ದು, ಈ ವಿಚಾರದಲ್ಲಿ ನಿಮಗೆ ನಾಚಿಕೆಯಾಗಬೇಕು. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ. ಶೋಕಿಗಾಗಿ ಶಾಸಕರಾಗಿರುವ ನಿಮಗೆ ಈ ವಿಚಾರದಲ್ಲಿ ನಾಚಿಕೆಯಾಗಬೇಕು. ಇತಿಹಾಸದಲ್ಲಿ ರಾಜ್ಯದ ನೀರಾವರಿ ಯೋಜನೆಗಳಿಗೆ ಅತಿ ಹೆಚ್ಚು ಅನುದಾನ ಕೊಟ್ಟಿರುವ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ ಎಂಬುದನ್ನು ಮರೆಯಬೇಡಿ ಎಂದ ಅವರು, ನೀವು ಶಾಸಕರಾಗಿ ತನ್ನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ್ದರೆ ಈ ಯೋಜನೆ ಪೂರ್ಣಗೊಂಡು ಅನೇಕ ವರ್ಷಗಳಾಗಿರುತ್ತಿದ್ದವು. ಈ ವಿಚಾರದಲ್ಲಿ ನೀವು ಸಂಪೂರ್ಣ ವಿಫಲರಾಗಿದ್ದು, ಮಾತನಾಡುವ ನೈತಿಕತೆ ಕಳೆದುಕೊಂಡಿದ್ದೀರಿ ಎಂದು ಟೀಕಿಸಿದ್ದಾರೆ.

ನಮ್ಮ ಸರ್ಕಾರದ ಆಡಳಿತಾವಧಿಯಲ್ಲಿ ಉಸ್ತುವಾರಿ ಸಚಿವರು ಯೋಜನೆ ಬಗ್ಗೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದೋ ಅದನ್ನು ಕೈಗೊಂಡಿದ್ದಾರೆ. ಈಗ ಮೈತ್ರಿ ಸರ್ಕಾರದಲ್ಲಿ ಮುಖ್ಯ ಮಂತ್ರಿಕುಮಾರಸ್ವಾಮಿ ಅವರು ಅಗತ್ಯ ಕಾಮಗಾರಿಗಳಿಗೆ ಅನುದಾನವನ್ನು ಬಜೆಟ್‍ನಲ್ಲಿ ನೀಡಿದ್ದಾರೆ. ಆದರೆ, ತಾವು ಒಬ್ಬ ಶಾಸಕರಾಗಿ ಸರ್ಕಾರದ ಗಮನ ಸೆಳೆಯುವಲ್ಲಿ ಏನು ಮಾಡಿದ್ದೀರಿ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.

ತಾನೊಬ್ಬ ಶಾಸಕ ಎಂಬುದನ್ನೇ ಮರೆತು ಕೇವಲ ಪ್ರಚಾರಕ್ಕಾಗಿ ಹೇಳಿಕೆ ಕೊಡುತ್ತಿರುವ ನೀವು ಕರಗಡಯೋಜನೆಗೆ ಏನು ಶ್ರಮ ಹಾಕಿದ್ದೀರಿ ? ಯೋಜನೆ ಕಾಮಗಾರಿಯನ್ನು ತರಾತುರಿಯಲ್ಲಿ ಆರಂಭಿಸಿದ್ದರ ಹಿಂದಿನ ಉದ್ದೇಶ ಏನು ? ಈ ಯೋಜನೆಗಾಗಿ ಎಷ್ಟು ಅನುದಾನ ತಂದಿದ್ದೀರಿ? ಎಂಬುದನ್ನು ಸಾರ್ವಜನಿಕವಾಗಿ ತಿಳಿಸಬೇಕು. ಎಲುಬಿಲ್ಲದ ನಾಲಗೆ ಎಂಬ ಕಾರಣಕ್ಕಾಗಿ ಹರಿಬಿಡುವುದು ಸರಿಯಲ್ಲ. ಶಾಸಕ ಸ್ಥಾನಕ್ಕೆ ಇದು ಶೋಭೆ ತರುವುದಿಲ್ಲ ಎಂದು ಗುಡುಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News