ಚುನಾವಣೆ ಬಳಿಕ ಮೈತ್ರಿ ಸರಕಾರ ತನ್ನದೇ ಭಾರದಿಂದ ಕುಸಿಯಲಿದೆ: ಶಾಸಕ ಸಿ.ಟಿ.ರವಿ

Update: 2019-04-17 18:19 GMT

ದಾವಣಗೆರೆ,ಎ.17: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಒಟ್ಟಿಗೆ ಪ್ರಚಾರ ಮಾಡುವುದು ಕೇವಲ ವೇದಿಕೆ ಮೇಲೆ ಮಾತ್ರ. ಕೆಳಗಡೆ ಪರಸ್ಪರ ರಾಜಕೀಯವಾಗಿ ಮುಗಿಸಲು ಸಂಚು ರೂಪಿಸುತ್ತಿದ್ದಾರೆ. ಹಾಗಾಗಿ, ಚುನಾವಣೆ ನಂತರ ಮೈತ್ರಿ ಪಕ್ಷ ತನ್ನದೇ ಭಾರದಿಂದ ಕುಸಿಯಲಿದೆ ಎಂದು ಶಾಸಕ ಸಿ.ಟಿ. ರವಿ ವ್ಯಂಗ್ಯವಾಡಿದರು.

ನಗರದಲ್ಲಿ ಬಿಜೆಪಿ ಲೋಕಾ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಪರ ರೋಡ್ ಶೋ ನಡೆಸಿ, ನಂತರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ತಮ್ಮ ಆಪ್ತರಲ್ಲಿ, ಚುನಾವಣೆ ಮುಗಿಯುತ್ತಿದ್ದಂತೆ ಸರ್ಕಾರ ಕುಸಿಯುತ್ತದೆ ಎಂದು ಹೇಳಿಕೊಂಡಿದ್ದಾರೆ. ಆದ್ದರಿಂದ ಸರ್ಕಾರಕ್ಕೆ ಟೈಂಬಾಂಬ್ ಫಿಕ್ಸ್ ಆಗಿದ್ದು, ಚುನಾವಣೆ ನಂತರ ಸಿಡಿಯುವುದು ನಿಶ್ಚಿತವೆಂದರು.

ಕಾಂಗ್ರೆಸ್‍ಗೆ ವಿಭಜಿಸಿ ಆಳ್ವಿಕೆ ಮಾಡುವುದರಲ್ಲಿ ಹೆಚ್ಚು ನಂಬಿಕೆ. ಅದಕ್ಕಾಗಿಯೇ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ವೀರಶೈವ ಲಿಂಗಾಯಿತ ವಿಭಜನೆ ಮಾಡಲೆತ್ನಿಸಿದರು. ನಂತರ ಈ ಕುರಿತು ಒಬ್ಬರು ಕ್ಷಮಾಪಣೆ ಕೇಳಿದರೆ ಮತ್ತೊಬ್ಬರು ವಿರುದ್ಧ ಮಾತನಾಡುವ ಮೂಲಕ ನಾಟಕ ನಡೆಸುತ್ತಿದ್ದು, ರಾಜ್ಯದ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದರು.

ಜೆಡಿಎಸ್‍ನಲ್ಲೂ ವಂಶವಾಹಿನಿ ಆಡಳಿತ ವಿಸ್ತರಿಸುವ ದುರಾಸೆಗೆ ಮಾಜಿ ಪ್ರಧಾನಿಗಳು ಒಳಗಾಗಿದ್ದಾರೆ. ಅತಿ ಆಸೆ ಗತಿ ಗೇಡು ಎಂಬುದು ಈ ಬಾರಿ ಚುನಾವಣೆಯಲ್ಲಿ ಗೊತ್ತಾಗುತ್ತದೆ. ಜೆಡಿಎಸ್‍ನಿಂದ ಸ್ಫರ್ಧಿಸಿರುವ ಮೂರು ಕ್ಷೇತ್ರಗಳಲ್ಲೂ ಸೋಲು ಕಟ್ಟಿಟ್ಟ ಬುತ್ತಿ ಎಂದರು.

ಇತ್ತೀಚೆಗೆ ಚುನಾವಣಾ ಪ್ರಚಾರದ ವೇಳೆ ನಾನು ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಹೆಣ್ಣಿಗೆ ಗೌರವ ನೀಡುವುದು, ಹೆಣ್ಣನ್ನು ಪೂಜಿಸುವುದನ್ನು ನನ್ನ ತಾಯಿ ಹೇಳಿಕೊಟ್ಟಿದ್ದಾರೆ. ಸಂಸ್ಕಾರ ನನಗೆ ಗೊತ್ತಿದೆ. ಮುಖ್ಯಮಂತ್ರಿಗಳು ತಮ್ಮ ಪ್ರಚಾರದ ವೇಳೆ ರೈತ ಮಹಿಳೆಗೆ ಎಲ್ಲಿ ಮಲಗಿದ್ದೇ? ಎಂದಾಗ ಮೈತ್ರಿ ಮಾಡಿಕೊಂಡ ಮುಖಂಡರ ಬಾಯಿಗೆ ಲಕ್ವಾ ಒಡೆದಿತ್ತಾ? ಎಂದು ಖಾರವಾಗಿ ಪ್ರಶ್ನಿಸಿದ ಅವರು, ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಬಗ್ಗೆ ಹಗುರವಾಗಿ ಮಾತನಾಡುವಾಗ ನಿಮ್ಮ ಸಂಸ್ಕೃತಿ ಎಲ್ಲಿ ಹೋಗಿತ್ತು? ಸಂಸ್ಕಾರ ಕಲಿಸುವುದು ನನಗಲ್ಲ, ನಿಮ್ಮ ಸಿಎಂಗೆ ಹೇಳಿಕೊಡಿ ಎಂದರು.

ರಾಜಕೀಯವಾಗಿ ಎದುರಿಸಲಾಗದವರು ಈ ರೀತಿ ಸುಳ್ಳು ದಾಖಲೆಗಳನ್ನು ಹರಿಬಿಟ್ಟಿದ್ದಾರೆ. ತನಿಖೆಯ ನಂತರ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ಮೇಲಿನ ಆರೋಪದ ಕುರಿತು ಅವರು ಪ್ರತಿಕ್ರಿಯಿಸಿದರು. ರಮೇಶ್ ಜಾರಕಿಹೊಳಿ ಅವರು ಬಿಜೆಪಿಗೆ ಸೇರುವ ಕುರಿತು ಸ್ಪಷ್ಟಪಡಿಸಿಲ್ಲ. ಒಂದು ವೇಳೆ ಅವರು ಬಿಜೆಪಿ ಬರುವುದಾದರೆ ಸ್ವಾಗತಿಸುತ್ತೇವೆ ಎಂದು ರಮೇಶ್ ಜಾರಕಿಹೊಳಿ ಸೇರ್ಪಡೆ ಕುರಿತು ಅವರು ಪ್ರತಿಕ್ರಿಯಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾಧವ್, ಹೆಚ್.ಎನ್ ಶಿವಕುಮಾರ್, ರಾಜಶೇಖರ್, ಕೃಷ್ಣಮೂರ್ತಿ, ರಮೇಶ್ ನಾಯ್ಕ್, ಬೇತೂರು ಬಸವರಜಾ, ಪ್ರವೀಣ್, ಹರೀಶ್, ಧನುಶ್ ರೆಡ್ಡಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News