ಅಭಿವೃದ್ಧಿ ಬಗ್ಗೆ ಬಿಜೆಪಿಗೆ ತಿಳಿಯದು: ಶಾಸಕ ಶಾಮನೂರು ಶಿವಶಂಕರಪ್ಪ

Update: 2019-04-17 18:23 GMT

ದಾವಣಗೆರೆ,ಎ.17: ಅಭಿವೃದ್ಧಿ ಎಂದರೆ ಏನೆಂದು ತಿಳಿಯದ ಬಿಜೆಪಿಗೆ ತಕ್ಕಪಾಠ ಕಲಿಸಬೇಕೆಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ತಿಳಿಸಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಪ್ರದೇಶಗಳಾದ ಜರೀಕಟ್ಟೆ, ಮುದಹದಡಿ, ದುರ್ಗಾಂಬಿಕಾ ಕ್ಯಾಂಪ್, ಹಳೇ ಬಿಸಲೇರಿ, ಹೊಸ ಬಿಸಲೇರಿ, ನಾಗನೂರು, ನಾಗಮ್ಮ ಕೇಶವಮೂರ್ತಿ ಬಡಾವಣೆ ಗ್ರಾಮಗಳಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶ್ರೀ ಹೆಚ್.ಬಿ.ಮಂಜಪ್ಪನವರ ಪರವಾಗಿ ಚುನಾವಣಾ ಪ್ರಚಾರ ಹಾಗೂ ರೋಡ್ ಶೋ ನಡೆಸಿ ಅವರು ಮಾತನಾಡಿದರು.

ವಿಕಾಸ, ಅಚ್ಚೇದಿನ್ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಇಂದು ಸೈನಿಕರ ಹೆಸರೇಳಿ ಮತ ಕೇಳಲು ಹೊರಟಿದೆ. ದೇಶಕ್ಕೆ ಮೋದಿ ಕೊಡುಗೆ ಶೂನ್ಯವಾಗಿದ್ದು, ಅದೇ ರೀತಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲೂ ಸಹ ಸಂಸದರ ಕೊಡುಗೆ ಶೂನ್ಯ ಎಂದರು.

ಬಡಜನರ ಬ್ಯಾಂಕ್ ಖಾತೆಗೆ 15 ಲಕ್ಷ ನೀಡುತ್ತೇನೆಂದ ಮೋದಿ ಇಂದು ನಾನು ಹಾಗೆ ಹೇಳಿಯೇ ಇಲ್ಲ ಎನ್ನುತ್ತಿದ್ದಾರೆ. 70 ಲಕ್ಷ ಕೋಟಿ ಖರ್ಚು ಮಾಡಿ ಗಂಗಾ ನದಿ ಶುದ್ಧೀಕರಣ ಮಾಡಲಾಗಿದೆ ಎಂದು ಬೊಗಳೆ ಬಿಡುತ್ತಿದ್ದಾರೆ. ನ್ಯಾಯಾಧೀಕರಣವೇ ಛೀಮಾರಿ ಹಾಕಿದೆ ಎಂದ ಅವರು, ಸೋಲುವ ಭಯದಿಂದ ಕಂಗೆಟ್ಟಿರುವ ಬಿಜೆಪಿಯವರು ಸರ್ಕಾರದ ಸ್ವಾಯತಃ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ವಿಪಕ್ಷಗಳಿಗೆ ಭಯವನ್ನುಂಟು ಮಾಡುತ್ತಿದ್ದಾರೆ ಎಂದರು.

ದಾವಣಗೆರೆ ಸಂಸದರು 3 ಬಾರಿ ಆಯ್ಕೆ ಆಗಿದ್ದರೂ ಸಹ ಇಂದು ತಮ್ಮ ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳದೆ ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಮೋದಿ ಆಡಳಿತದಿಂದ ಈ ದೇಶದ ಜನಕ್ಕೆ ಏನು ಉಪಯೋಗವಾಗಿದೆ ಎಂದು ಪ್ರಶ್ನಿಸಿದ ಅವರು ಇಂತಹ ನಿರ್ಲಕ್ಷ್ಯ ಧೋರಣೆಯ ಸಂಸದರನ್ನು ಮನೆಗಟ್ಟಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶ್ರೀ ಹೆಚ್.ಬಿ.ಮಂಜಪ್ಪನವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಇದೇ ವೇಳೆ ನಾಗನೂರು ಗ್ರಾಮದಲ್ಲಿ ಸಂಸದರಿಗೆ ಗ್ರಾಮದ ಅಭಿವೃದ್ಧಿ ಬಗ್ಗೆ ಪ್ರಶ್ನಿಸಿದ ಕಾರ್ತಿಕ್ ಎಂಬ ಯುವಕನನ್ನು ಸನ್ಮಾನಿಸಿದ ಶಾಮನೂರು ಶಿವಶಂಕರಪ್ಪನವರು ಈ ಯುವಕನಂತೆ ಪ್ರಶ್ನಿಸುವ ಗುಣವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿ ಅಭಿವೃದ್ಧಿ ಮಾಡುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್, ಎಪಿಎಂಸಿ ಅಧ್ಯಕ್ಷ ಬಿಸಲೇರಿ ಈರಣ್ಣ, ಮಾಜಿ ಉಪಾಧ್ಯಕ್ಷ ಹದಡಿ ಹಾಲಪ್ಪ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ತುರ್ಚಘಟ್ಟದ ಬಸವರಾಜಪ್ಪ, ಕುಕ್ಕವಾಡ ಮಲ್ಲೇಶಪ್ಪ, ಮುದಹದಡಿ ದಿಳ್ಳೆಪ್ಪ, ನಂದಿಗೌಡ್ರು, ಶಿರಮಗೊಂಡನಹಳ್ಳಿ ರುದ್ರೇಶ್, ತುರ್ಚಘಟ್ಟದ ರಿಯಾಜ್, ಜರೀಕಟ್ಟೆ ಹನುಮಂತಪ್ಪ, ಉಮಾದೇವಿ, ಮೌನೇಶ್, ವೆಂಕಟೇಶ್, ಶಿವನಗೌಡ, ನಾಗನೂರಿನ ಎನ್.ಡಿ.ಉಜ್ಜಪ್ಪ, ಗೌಡ್ರು ಶಶಿಕುಮಾರ್, ಮಹೇಶ್, ರಾಘವೇಂದ್ರ, ಆವರಗೆರೆ ಮಂಜು, ಎ.ಕೆ.ಚಂದ್ರಪ್ಪ, ಎ.ಕೆ.ನೀಲಪ್ಪ ಸೇರಿದಂತೆ ಅನೇಕ ಅಭಿಮಾನಿಗಳು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News