ಜಾಗೃತ ಮತದಾರರೇ ಪ್ರಜಾಸತ್ತೆಯ ಕಾವಲುಗಾರರು

Update: 2019-04-17 18:40 GMT

‘ಅಚ್ಛೇದಿನ್ ಆನೇವಾಲಾ ಹೇ’ ನಾಲ್ಕು ವರ್ಷಗಳ ಹಿಂದೆ ನರೇಂದ್ರ ಮೋದಿಯವರು ಹೀಗೊಂದು ಘೋಷಣೆಯೊಂದಿಗೆ ಪ್ರಧಾನಿ ಹುದ್ದೆ ಸ್ವೀಕರಿಸಿದ್ದರು. ಇಡೀ ಭಾರತ ಮೋದಿಯವರ ಘೋಷಣೆಗೆ ಧ್ವನಿ ಸೇರಿಸಿತ್ತು. ಇದೀಗ ನೋಡಿದರೆ ಮತ್ತೆ ಮಹಾ ಚುನಾವಣೆಗೆ ನಾವೆಲ್ಲ ಸಿದ್ಧರಾಗಿದ್ದೇವೆ. ಕಳೆದ ಚುನಾವಣೆಯಲ್ಲಿ ದೇಶದ ಬಹು ದೊಡ್ಡ ಸಂಖ್ಯೆಯ ಜನರು ನರೇಂದ್ರ ಮೋದಿಯ ಮೂಲಕ ದೇಶದಲ್ಲಿ ಬದಲಾವಣೆಯನ್ನು ನಿರೀಕ್ಷಿಸಿದ್ದರು. ಮೋದಿ ಜನರಲ್ಲಿ ಭರವಸೆಯ ಬೆಟ್ಟವನ್ನೇ ತಂದಿಟ್ಟಿದ್ದರು.ದೇಶ ಇನ್ನೇನು ವಿಶ್ವಗುರುವಾಗಿಯೇ ಬಿಟ್ಟಿತು ಎಂಬ ಸಂಭ್ರಮದಲ್ಲಿ ಜನರಿದ್ದರು. ಆದರೆ ಆ ಸಂಭ್ರಮ ಇದೀಗ ಮತ್ತೆ ಮತದಾನಕ್ಕೆ ಅಣಿಯಾಗುತ್ತಿರುವ ಮತದಾರರಲ್ಲಿ ಕಾಣುತ್ತಿಲ್ಲ. ಒಂದೆಡೆ ಮಾಧ್ಯಮಗಳು ಮತ್ತು ಕಾರ್ಪೊರೇಟ್ ಶಕ್ತಿಗಳು ‘ಇಲ್ಲ, ಭಾರತ ವಿಶ್ವಗುರುವಾಗಿದೆ...’ ಎಂದು ಜನರ ಕಿವಿಯಲ್ಲಿ ಬಾರಿ ಬಾರಿ ಪಿಸುಗುಟ್ಟುತ್ತಾ ಅವರನ್ನು ಮತ್ತೆ ಮೋದಿಯ ಪರವಾಗಿ ಸಿದ್ಧಗೊಳಿಸಲು ಯತ್ನಿಸುತ್ತಿವೆ. ‘ದೇಶಕ್ಕೆ ಒಳ್ಳೆಯದಾಗಿದೆ’ ಎಂದು ಹೇಳುವವರು ‘ಶ್ರೀಸಾಮಾನ್ಯನಿಗೆ ಯಾವ ರೀತಿಯಲ್ಲಿ ಒಳ್ಳೆಯದಾಗಿದೆ?’ ಎನ್ನುವುದನ್ನು ವಿವರಿಸುವಲ್ಲಿ ವಿಫಲರಾಗುತ್ತಿದ್ದಾರೆ.

 ನರೇಂದ್ರ ಮೋದಿಯವರು ಎರಡು ಅಂಶಗಳನ್ನು ಮುಂದಿಟ್ಟುಕೊಂಡು ಜನರಲ್ಲಿ ಮತ ಯಾಚಿಸಿ 2014ರಲ್ಲಿ ಅಧಿಕಾರ ಹಿಡಿದಿದ್ದರು. ಒಂದು, ದೇಶದ ಅಭಿವೃದ್ಧಿ, ಇನ್ನೊಂದು, ಪಾಕಿಸ್ತಾನಕ್ಕೆ ಪಾಠ. ಅಭಿವೃದ್ಧಿಯ ನಿಟ್ಟಿನಲ್ಲಿ ಮೋದಿಯವರು ತೆಗೆದುಕೊಂಡಿದ್ದಾರೆ ಎನ್ನುವ ಆಡಳಿತಾತ್ಮಕ ಕ್ರಮಗಳು ಯಾವುವು? ದೇಶದ ಚಿಲ್ಲರೆ ಮಾರುಕಟ್ಟೆಯನ್ನು ವಿದೇಶಿಯರಿಗಾಗಿ ಮುಕ್ತವಾಗಿ ತೆರೆದರು. ರಕ್ಷಣಾ ಇಲಾಖೆಯನ್ನೂ ವಿದೇಶಿಯರಿಗೆ ಒತ್ತೆಯಿಟ್ಟರು. ಉಳಿದಂತೆ ದೇಶದೊಳಗಿರುವ ಕಪ್ಪು ಹಣವನ್ನು ಪತ್ತೆ ಹಚ್ಚಲು ನೋಟು ನಿಷೇಧ ಮಾಡಿದರು. ವ್ಯಾಪಾರವನ್ನು ಸರಳಗೊಳಿಸಲು ಜಿಎಸ್‌ಟಿಯನ್ನು ಜಾರಿಗೆ ತಂದರು. ಆಧಾರ್‌ನ್ನು ಎಲ್ಲ ಸಾಮಾಜಿಕ ವಲಯಗಳಿಗೂ ಕಡ್ಡಾಯಗೊಳಿಸಿದರು. ಆದರೆ ಇವೆಲ್ಲವೂ ದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುವ ಬದಲು, ಹಿಂದಕ್ಕೆ ಕೊಂಡೊಯ್ಯಿತು. ಕಳೆದ ನಾಲ್ಕು ವರ್ಷಗಳಲ್ಲಿ ಈ ದೇಶದ ಶ್ರೀಸಾಮಾನ್ಯ ಅಘೋಷಿತ ಆರ್ಥಿಕ ತುರ್ತುಪರಿಸ್ಥಿತಿಯನ್ನು ಅನುಭವಿಸಿದ. ನೋಟು ನಿಷೇಧ ದೇಶದೊಳಗಿನ ಕಪ್ಪು ಹಣವನ್ನು ಬಹಿರಂಗ ಪಡಿಸುವಲ್ಲಿ ಸಂಪೂರ್ಣ ವಿಫಲವಾಯಿತು. ಹಲವು ತಿಂಗಳ ಕಾಲ ಶ್ರೀಸಾಮಾನ್ಯ ಅನುಭವಿಸಿದ ಸಾವು ನೋವು, ನಷ್ಟಗಳ ಪ್ರತಿಯಾಗಿ ಅವರಿಗೇನೂ ಸಿಗಲಿಲ್ಲ. ಯಾವ ಶ್ರೀಮಂತನೂ ಬ್ಯಾಂಕ್ ಮುಂದೆ ಕ್ಯೂ ನಿಂತ ದೃಶ್ಯ ಕಂಡು ಬರಲಿಲ್ಲ. ಗ್ರಾಮೀಣ ಉದ್ಯಮ ಸಂಪೂರ್ಣ ನೆಲಕಚ್ಚಿತು. ಮೋದಿಯವರ ಡಿಜಿಟಲೀಕರಣ ಶ್ರೀಸಾಮಾನ್ಯನಿಗೆ ಯಾವ ರೀತಿಯಲ್ಲೂ ಸಹಾಯ ಮಾಡಲಿಲ್ಲ. ನೋಟು ನಿಷೇಧದ ಸರ್ವ ಲಾಭವನ್ನೂ ಕಾರ್ಪೊರೇಟ್ ವಲಯ ತನ್ನದಾಗಿಸಿಕೊಂಡಿತು. ದೇಶಾದ್ಯಂತ ಲಕ್ಷಾಂತರ ಜನರು ನಿರುದ್ಯೋಗಿಗಳಾದರು. ಸಣ್ಣ ಪುಟ್ಟ ಉದ್ಯಮಗಳು ನಾಶವಾದವು. ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದವು. ಜಿಎಸ್‌ಟಿಯೂ ವ್ಯಾಪಾರವನ್ನು ಇನ್ನಷ್ಟು ಕಷ್ಟವಾಗಿಸಿತು. ಗೊಂದಲಕಾರಿ ತೆರಿಗೆಗಳಿಂದ ಜನಸಾಮಾನ್ಯರು ತತ್ತರಿಸಿದರು. ಅತಿ ಹೆಚ್ಚು ತೆರಿಗೆ ವಿಧಿಸುವ ದೇಶ ಎಂಬ ಕುಖ್ಯಾತಿಗೆ ಭಾರತ ಒಳಗಾಯಿತು. ಆಧಾರ್ ಕಡ್ಡಾಯವೆನ್ನುವುದೂ ಬಡವರ ಪಾಲಿಗೆ ಇನ್ನಷ್ಟು ಸಂಕಷ್ಟಗಳನ್ನು ಹೊತ್ತು ತಂದಿತು. ಆಧಾರ್ ಜೋಡಣೆಯಾಗಿಲ್ಲ ಎಂದು ರೇಷನ್ ನಿರಾಕರಿಸಲ್ಪಟ್ಟು ಹಸಿವಿನಿಂದ ಸತ್ತವರ ಕುರಿತ ವರದಿಗಳು ಮಾಧ್ಯಮಗಳ ಮುಖಪುಟದಲ್ಲಿ ರಾರಾಜಿಸಿದವು. ತನ್ನ ಆಡಳಿತಾವಧಿಯಲ್ಲಿ ಹಗರಣಗಳೇ ಇಲ್ಲ ಎಂದು ಮೋದಿಯವರು ಹೇಳುತ್ತಿದ್ದಾರೆ. ಆದರೆ ‘ನೋಟು ನಿಷೇಧ ಸ್ವಾತಂತ್ರಾನಂತರದ ಅತಿ ದೊಡ್ಡ ಹಗರಣ’ ಎಂದು ವಿರೋಧ ಪಕ್ಷಗಳು ಟೀಕಿಸಿದವು. ಆಡಳಿತ ಪಕ್ಷದ ನೇತೃತ್ವದಲ್ಲೇ ಭಾರೀ ಹಣ ಅಕ್ರಮವಾಗಿ ಸಕ್ರಮಗೊಂಡವು ಎಂಬ ಆರೋಪಗಳೂ ಕೇಳಿಬಂದವು. ನೋಟು ನಿಷೇಧದ ಸಕಲ ಪ್ರಯೋಜನಗಳನ್ನು ಅದಾನಿ, ಅಂಬಾನಿ ಕಂಪೆನಿಗಳು ತಮ್ಮದಾಗಿಸಿಕೊಂಡವು. ಇವೆಲ್ಲಕ್ಕೆ ಕಲಶವಿಟ್ಟಂತೆ ರಫೇಲ್ ಹಗರಣ ಮೋದಿಯನ್ನು ಕಳೆದ ನಾಲ್ಕು ವರ್ಷಗಳಿಂದ ಹಿಂಬಾಲಿಸ ತೊಡಗಿದೆ. ರಫೇಲ್ ಹಗರಣ ತನಿಖೆಯಾಗದಂತೆ ನೋಡಿಕೊಳ್ಳಲು ಮೋದಿ ಸರಕಾರ ಸಿಬಿಐ ಮತ್ತು ನ್ಯಾಯಾಂಗದಲ್ಲಿ ಹಸ್ತಕ್ಷೇಪ ನಡೆಸಿತು ಎಂದು ವಿರೋಧಿಗಳು ಆರೋಪಿಸ ತೊಡಗಿದರು.

ಸದ್ಯದ ಚುನಾವಣೆ ದೇಶದೊಳಗಿನ ‘ಅಚ್ಛೇದಿನ್’ನ ವಾಸ್ತವವೇನು ಎನ್ನುವುದನ್ನು ಹೇಳಲಿದೆ. ಈ ಚುನಾವಣೆಯಲ್ಲಿ ಮೋದಿಯವರು ತನ್ನ ಐದು ವರ್ಷಗಳ ಸಾಧನೆಗಳನ್ನು ಬಳಸಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ನೋಟು ನಿಷೇಧ, ಜಿಎಸ್‌ಟಿ, ಆಧಾರ್ ಜೋಡಣೆ ಇವೆಲ್ಲವನ್ನು ತನ್ನ ಸಾಧನೆ ಎಂದು ಬಿಂಬಿಸಿ ಎಲ್ಲೂ ಮತ ಯಾಚನೆ ಮಾಡಿಲ್ಲ. ಚುನಾವಣೆ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಸೈನಿಕರ ಮೇಲೆ ನಡೆದ ಬರ್ಬರ ದಾಳಿ, ನಮ್ಮ ಸೈನಿಕರ ಸಾವನ್ನೇ ಅದು ಚುನಾವಣೆಯ ವಿಷಯವನ್ನಾಗಿಸಿದರು. ಯಾವುದೇ ರೀತಿಯ ಸ್ಪಷ್ಟತೆಯಿಲ್ಲದ ‘ಸರ್ಜಿಕಲ್ ಸ್ಟ್ರೈಕ್’ನ್ನು ತನ್ನ ಸಾಧನೆ ಎಂದು ದೇಶದ ಜನರ ಮುಂದಿಡುತ್ತಿದ್ದಾರೆ. ಆದರೆ ಪುಲ್ವಾಮ ದಾಳಿಯ ಸಾವು ನೋವಿನ ಹೊಣೆಗಾರಿಕೆ ಯಾರದ್ದು? ಎಂಬ ಪ್ರಶ್ನೆಗೆ ಸರಕಾರದ ಬಳಿ ಇನ್ನೂ ಉತ್ತರವಿಲ್ಲ. ಪಾಕಿಸ್ತಾನಕ್ಕೆ ಪಾಠ ಕಲಿಸುವ ವಿಷಯದಲ್ಲೂ ಅವರು ಹಿನ್ನಡೆ ಅನುಭವಿಸಿದರು. ಇದೇ ಸಂದರ್ಭದಲ್ಲಿ ದೇಶಾದ್ಯಂತ ನಕಲಿ ಗೋರಕ್ಷಕರ ವಿಜೃಂಭಣೆ, ಅಮಾಯಕರ ಮೇಲೆ ಗುಂಪು ಥಳಿತ, ಆಸಿಫಾ ಎನ್ನುವ ಮಗುವಿನ ಮೇಲೆ ನಡೆದ ಬರ್ಬರ ಅತ್ಯಾಚಾರ, ವೃದ್ಧ ರೈತರ ಕಗ್ಗೊಲೆ ಇವೆಲ್ಲವುಗಳೂ ಹೇಗೆ ‘ಅಚ್ಛೇ ದಿನ’ಗಳ ವ್ಯಾಪ್ತಿಯಲ್ಲಿ ಬರುತ್ತವೆೆ ಎನ್ನುವುದನ್ನೂ ಮೋದಿಯವರು ಇನ್ನೂ ಸ್ಪಷ್ಟಪಡಿಸಿಲ್ಲ. ಯಾವುದೋ ವಿದೇಶಿ ಪತ್ರಿಕೆ, ಯಾವುದೋ ಮಾಧ್ಯಮಗಳು ‘ಮೋದಿಯನ್ನು ಹೊಗಳಿದ್ದಾರೆ’ ಎನ್ನುವುದು ಈ ದೇಶ ‘ಅಭಿವೃದ್ಧಿಯಾಗಿದೆ’ ಎನ್ನುವುದಕ್ಕೆ ಮಾನದಂಡವಲ್ಲ. ಈ ದೇಶದ ಶ್ರೀಸಾಮಾನ್ಯನ ಬದುಕಿನಲ್ಲಾದ ಬದಲಾವಣೆಯೇ ದೇಶದ ಒಳೆ್ಳಯ ದಿನಗಳನ್ನು ಪ್ರತಿನಿಧಿಸುತ್ತದೆ.

ನೂರು ಶೇಕಡ ಮತದಾನವಾದುದರಿಂದ ಚುನಾವಣೆ ಯಶಸ್ವಿಯಾಯಿತು ಎಂದು ಹೇಳಲು ಬರುವುದಿಲ್ಲ. ಮತದಾರ ಮತದಾನದ ಸಂದರ್ಭದಲ್ಲಿ ಎಷ್ಟರಮಟ್ಟಿಗೆ ಜಾಗೃತನಾಗಿದ್ದಾನೆ ಎನ್ನುವುದರ ತಳಹದಿಯಲ್ಲಿ ಪ್ರಜಾಪ್ರಭುತ್ವದ ಯಶಸ್ಸು ನಿಂತಿದೆ. ಆದುದರಿಂದ ಮತದಾನದ ಸಂದರ್ಭದಲ್ಲಿ ದೇಶದ ಅಭಿವೃದ್ಧಿಯೇ ನಮ್ಮ ಪ್ರಧಾನ ಗಮನವಾಗಬೇಕು. ಜಾತಿ, ಧರ್ಮ, ಸಂಘಟನೆಗಳು ಬದಿಗೆ ಸರಿಯಬೇಕು. ನಮ್ಮ ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಗಮನ ಹರಿಸಬಲ್ಲ ಯೋಗ್ಯ ಜನಪ್ರತಿನಿಧಿಯನ್ನು ಗುರುತಿಸಲು ಮತದಾರರಿಗೆ ಸಾಧ್ಯವಾಗಬೇಕು. ಸೌಹಾರ್ದ ಮತ್ತು ಅಭಿವೃದ್ಧಿ ಎರಡೂ ಜೊತೆ ಜೊತೆಗೆ ಸಾಗುವಂತಹದು. ಈ ಎರಡು ವಿಷಯಗಳನ್ನಿಟ್ಟು ಮತ ಯಾಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸುವುದು ಮತದಾರರ ಕರ್ತವ್ಯವಾಗಬೇಕು. ಹಾಗಾದಾಗ ದೇಶ ಒಂದಲ್ಲ ಒಂದು ದಿನ ‘ಅಚ್ಛೇ ದಿನ’ಗಳನ್ನು ಕಾಣಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬನೂ ಯೋಚಿಸಿ ಮತಗಟ್ಟೆಯ ಕಡೆಗೆ ಹೆಜ್ಜೆಯಿಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News