ಉತ್ಸಾಹದಿಂದ ಮತ ಚಲಾಯಿಸಿದ ಕೊಡಗು ಜನತೆ: ಶೇ.46 ರಷ್ಟು ಮತದಾನ

Update: 2019-04-18 12:06 GMT

ಮಡಿಕೇರಿ,ಎ.18: ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ ಏಳು ಗಂಟೆಯಿಂದಲೇ ಬಿರುಸಿನ ಮತದಾನ ನಡೆಯಿತು. ಮತದಾರರು ಸಾಲುಗಟ್ಟಿ ನಿಂತು ಅತಿ ಉತ್ಸಾಹದಿಂದ ಮತಚಲಾಯಿಸಿದರು. ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಶೇ.46 ರಷ್ಟು ಮತದಾನವಾಗಿತ್ತು.

ಮೈಸೂರು, ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಿಗೆ ಭೇಟಿ ನೀಡಿ ಮತದಾರರ ಮನವೊಲಿಸುವ ಪ್ರಯತ್ನ ಮಾಡಿದರು. ನಗರಸಭಾ ವ್ಯಾಪ್ತಿಯ ಸಂತ ಮೈಕಲರ ಶಾಲೆಯ ಮತಗಟ್ಟೆ ಭಾಗಕ್ಕೂ ತೆರಳಿ ಕಾರ್ಯಕರ್ತರೊಂದಿಗೆ ಸಮಾಲೋಚಿಸಿದರು. 

ಶಾಸಕ ಕೆ.ಜಿ.ಬೋಪಯ್ಯ ಮತ ಚಲಾವಣೆ
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಪತ್ನಿ ಕುಂತಿಬೋಪಯ್ಯ ಹಾಗೂ ಪುತ್ರಿಯೊಂದಿಗೆ ಆಗಮಿಸಿ ಮಡಿಕೇರಿ ನಗರದ ಜೂನಿಯರ್ ಕಾಲೇಜ್ ಆವರಣದ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಈ ಸಂದರ್ಭ ಮಾತನಾಡಿದ ಅವರು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಗರಸಭೆಯ ಮಾಜಿ ಸದಸ್ಯ ಕೆ.ಎಸ್.ರಮೇಶ್ ಜೊತೆಯಲ್ಲಿದ್ದರು.

ಕುಂಬೂರು ಶಾಲೆಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಮತದಾನ
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಸೋಮವಾರಪೇಟೆ ತಾಲೂಕಿನ ಕುಂಬೂರು ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಈ ಸಂದರ್ಭ ಮಾತನಾಡಿದ ಅವರು ದೇಶದ ಅಭಿವೃದ್ಧಿ ಮತ್ತು ಸುಭದ್ರತೆಗಾಗಿ ಜನ ದಕ್ಷ ಆಡಳಿತಗಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತಿದ್ದು, ಮೈಸೂರು, ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರತಾಪ್ ಸಿಂಹ ಅವರ ಗೆಲುವು ನಿಶ್ಚವೆಂದು ವಿಶ್ವಾಸ ವ್ಯಕ್ತಪಡಿಸಿದರು.

ಎವಿ ಶಾಲೆಯಲ್ಲಿ ಮತ ಚಲಾಯಿಸಿದ ಎಂಎಲ್‍ಸಿ ವೀಣಾಅಚ್ಚಯ್ಯ 
ಕಾಂಗ್ರೆಸ್ ಮುಖಂಡರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ ಅವರು ತಮ್ಮ ಪುತ್ರ ವಿಕಾಸ್ ಅಚ್ಚಯ್ಯ ಅವರೊಂದಿಗೆ ಮಡಿಕೇರಿ ನಗರಸಭಾ ವ್ಯಾಪ್ತಿಯ ಎವಿ ಶಾಲೆ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಈ ಸಂದರ್ಭ ಮಾತನಾಡಿದ ವೀಣಾಅಚ್ಚಯ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಅವರಿಗೆ ಕೊಡಗು ಜಿಲ್ಲೆಯಿಂದ ಅತ್ಯಧಿಕ ಮತ ಲಭಿಸಲಿದ್ದು, ಗೆಲುವು ಖಚಿತವಾಗಿದೆ ಎಂದರು. ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು. 

ಬಿಳಿಗೇರಿ ಶಾಲೆಯಲ್ಲಿ ಮಾಜಿ ಸಚಿವ ಜೀವಿಜಯ ಮತದಾನ
ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಬಿ.ಎ.ಜೀವಿಜಯ ಅವರು ಸೋಮವಾರಪೇಟೆ ತಾಲೂಕಿನ ಬಿಳಿಗೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತಚಲಾಯಿಸಿದರು. ರಾಜ್ಯದಲ್ಲಿ ಜಾತ್ಯತೀತ ಶಕ್ತಿಗಳ ಬಲವರ್ಧನೆಯಾಗಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಅವರ ಪರ ಮತದಾರರ ಒಲವಿದೆ ಎಂದು ಇದೇ ಸಂದರ್ಭ ವಿಶ್ವಾಸ ವ್ಯಕ್ತಪಡಿಸಿದರು.

28 ನೇ ಬಾರಿಯೂ ಮಿಟ್ಟು ಚಂಗಪ್ಪ ಮೊದಲ ಮತದಾರ
ಮಡಿಕೇರಿಯ ಸಂತ ಮೈಕಲರ ಶಾಲಾ ಮತಗಟ್ಟೆಯಲ್ಲಿ ಇಂದು ಪ್ರಥಮ ಮತದಾರನಾಗಿ ಮತದಾನ ಮಾಡುವ ಮೂಲಕ 28 ನೇ ಚುನಾವಣೆಯಲ್ಲೂ ಮೊದಲ ಮತದಾರರಾಗಿ ಹಿರಿಯ ರಾಜಕಾರಣಿ, ಕೆಪಿಸಿಸಿಯ ಹಿರಿಯ ಉಪಾಧ್ಯಕ್ಷ ಬೊಟ್ಟೋಳಂಡ ಮಿಟ್ಟು ಚಂಗಪ್ಪ ಗಮನ ಸೆಳೆದರು.

ಕಳೆದ ವಿವಿಧ 27 ಚುನಾವಣೆಗಳಲ್ಲಿಯೂ ಮಿಟ್ಟು ಚಂಗಪ್ಪ ಅವರು ಮತದಾನ ಕೇಂದ್ರದಲ್ಲಿ ಮೊದಲ ಮತದಾರರಾಗಿ ಹಕ್ಕು ಚಲಾಯಿಸಿರುವುದು ವಿಶೇಷ.
ಮತದಾನ ಹಬ್ಬದಂತೆ, ಈ ಉತ್ಸವವನ್ನು ಮತದಾರರಾಗಿ  ಸಂಭ್ರಮಿಸಬೇಕು ಎಂಬ ಹಿನ್ನೆಲೆಯಲ್ಲಿ  ಬೆಳಗ್ಗೆ 7 ಗಂಟೆಗೆ ಪತ್ನಿ ಯಶಿ ಚಂಗಪ್ಪ ಅವರೊಂದಿಗೆ ಮತಚಲಾಯಿಸುವ ಮೂಲಕ ಯುವ ಸಮೂಹದಲ್ಲಿ ಮತದಾನದ ಜಾಗೃತಿಯನ್ನು ಮೂಡಿಸಿದರು. ಈ ಸಂದರ್ಭ ಕಾಂಗ್ರೆಸ್ ನಗರಾಧ್ಯಕ್ಷ ಕೆ.ಯು.ಅಬ್ದುಲ್ ರಝಾಕ್ ಜೊತೆಯಲ್ಲಿದ್ದರು. 

ವಿರಾಜಪೇಟೆ ತಾಲೂಕಿನ ಅರಮೇರಿ ಮಠದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮಿಗಳು ಅರಮೇರಿ ಮತಗಟ್ಟೆಯಲ್ಲಿ ಮತಚಲಾಯಿಸಿದರು.
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು ಎಂದು ಅವರು ಇದೇ ಸಂದರ್ಭ ತಿಳಿಸಿದರು. ಅರಮೇರಿ ಮಠದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮಿಗಳ ತಂದೆ ಶತಾಯುಷಿ ಸಿದ್ಧಮಲ್ಲಯ್ಯ ಅವರು ಆಲೂರು, ಸಿದ್ದಾಪುರ ಮತಗಟ್ಟೆಯಲ್ಲಿ ಮತಚಲಾಯಿಸುವ ಮೂಲಕ ಯುವ ಮತದಾರರಿಗೆ ಸ್ಫೂರ್ತಿ ತುಂಬಿದರು. ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಶ್ರೀಸದಾಶಿವ ಸ್ವಾಮಿಗಳು ಕೊಡ್ಲಿಪೇಟೆ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.

ಮೊದಲು ಮತದಾನ, ಆಮೇಲೆ ಮದುವೆ
ಸೋಮವಾರಪೇಟೆ ಸಮೀಪದ ಕಾಜೂರು ನಿವಾಸಿ ಚಂದ್ರ ಅವರ ಪುತ್ರಿ ವಿದ್ಯಾ ಅವರು ಇಂದು ತಮ್ಮ ವಿವಾಹ ಮಹೋತ್ಸವದ ಸಂಭ್ರಮದ ನಡುವೆಯೂ ಮತದಾನ ಮಾಡಿ ಇತರರಿಗೆ ಮಾದರಿಯಾದರು. ಮದುವೆ ಮನೆಗೆ ತೆರಳುವ ಮೊದಲೇ ಮತಗಟ್ಟೆಗೆ ಹೋಗಿ ತಮ್ಮ ಹಕ್ಕನ್ನು ಚಲಾಯಿಸಿದರು. ಕುಟುಂಬ ವರ್ಗ ಹಾಗೂ ಸ್ನೇಹಿತರು ವಿದ್ಯಾಗೆ ಸಾಥ್ ನೀಡಿದರು. 

ಮೊಮ್ಮಗಳೊಂದಿಗೆ ಬಂದ ನಿವೃತ್ತ ಶಿಕ್ಷಕ
ಮತದಾನದ ಹಕ್ಕನ್ನು ಚಲಾಯಿಸುವುದಕ್ಕಾಗಿ ತಮ್ಮ ಮೊಮ್ಮಗಳೊಂದಿಗೆ ಬಂದ ನಿವೃತ್ತ ಶಿಕ್ಷಕ 89 ವರ್ಷದ ಪಟ್ಟಡ ಮಾಚಯ್ಯ ಅವರು ಮಡಿಕೇರಿ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದ ಯುವ ಸಮೂಹದ ಗಮನ ಸೆಳೆದರು. 

ಚೆಟ್ಟಳ್ಳಿ ಗ್ರಾ.ಪಂ ವ್ಯಾಪ್ತಿಯ ಈರಳೆ ಗ್ರಾಮದ ನಿವಾಸಿ, ದುಬೈಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಲ್ಲಾರಂಡ ಅಜಿತ್‍ ಅಚ್ಚಯ್ಯ ಅವರು ಇಂದು ಚೆಟ್ಟಳ್ಳಿ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಪ್ರಧಾನಿ ನರೇಂದ್ರಮೋದಿ ಅವರ ಕೈಬಲಪಡಿಸಬೇಕು ಎನ್ನುವ ಕಾರಣಕ್ಕಾಗಿ ಬಿಜೆಪಿಗೆ ಮತದಾನ ಮಾಡಲೆಂದೇ ದುಬೈಯಿಂದ ರಜೆ ಹಾಕಿ ಹುಟ್ಟೂರಿಗೆ ಬಂದಿರುವುದಾಗಿ ಅವರು ಇದೇ ಸಂದರ್ಭ ತಿಳಿಸಿದರು. 

ನಕ್ಸಲ್ ಆತಂಕದ ಪ್ರದೇಶದಲ್ಲಿ ಬಿಗಿಭದ್ರತೆಯೊಂದಿಗೆ ಮತದಾನ
ಕೊಡಗಿನ ನಕ್ಸಲ್ ಆತಂಕದ ಕೆಲವು ಮತಗಟ್ಟೆ ವ್ಯಾಪ್ತಿಯಲ್ಲಿ ನಕ್ಸಲ್ ನಿಗ್ರಹ ದಳ ಹಾಗೂ ಹೆಚ್ಚುವರಿ ಪೊಲೀಸ್ ಭದ್ರತೆಯ ನಡುವೆ ಮತದಾನ ನಡೆಯಿತು. ವಣಚಲು ಗ್ರಾಮ ಸೇರಿದಂತೆ ಇನ್ನೂ ಕೆಲವು ಮತಗಟ್ಟೆ ವ್ಯಾಪ್ತಿಯಲ್ಲಿ ಗ್ರಾಮಸ್ಥರು ಯಾವುದೇ ಆತಂಕವಿಲ್ಲದೆ ಅತಿ ಉತ್ಸಾಹದಿಂದ ಮತಚಲಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News