ಕೊಡಗಿನಲ್ಲಿ ಮತದಾನ ಶಾಂತಿಯುತ: ಕೆಲವು ಕಡೆ ತಾಂತ್ರಿಕ ದೋಷ

Update: 2019-04-18 12:09 GMT

ಮಡಿಕೇರಿ,ಎ.18 : ಮೈಸೂರು, ಕೊಡಗು ಲೋಕಸಭಾ ಕ್ಷೇತ್ರದ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 269 ಮತಗಟ್ಟೆಗಳು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 274 ಮತಗಟ್ಟೆಗಳಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು.  

ಕೆಲವು ಕಡೆ ಮತಯಂತ್ರದ ತಾಂತ್ರಿಕ ದೋಷ ಒಂದಷ್ಟು ಕಿರಿಕಿರಿಯನ್ನುಂಟು ಮಾಡಿದ್ದು ಬಿಟ್ಟರೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಅತಿ ಉತ್ಸಾಹದ ಮತದಾನ ನಡೆಯಿತು.

ಕೊಡಗು ಜಿಲ್ಲೆಯ ಸಾಕಷ್ಟು ಕಡೆಗಳಲ್ಲಿ ಬುಧವಾರ ಸಂಜೆ ಮತ್ತು ರಾತ್ರಿ ಸುರಿದ ಒಂದಷ್ಟು ಮಳೆ, ಮತಗಟ್ಟೆಗಳಿಗೆ ತೆರಳುವ ಚುನಾವಣಾ ಸಿಬ್ಬಂದಿಗಳಿಗೆ, ವ್ಯವಸ್ಥೆಯನ್ನು ಗಮನಿಸಬೇಕಾದ ಸೆಕ್ಟರ್ ಅಧಿಕಾರಿಗಳಿಗೆ ಒಂದಷ್ಟು ಅಡಚಣೆಯನ್ನು ಉಂಟುಮಾಡಿತು.

ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿಯಲ್ಲಿ ರಾತ್ರಿ ಮಳೆ ಸುರಿಯುತ್ತಿದ್ದ ಸಂದರ್ಭ ಹಾದಿಯಲ್ಲಿ ಹರಿಯುತ್ತಿದ್ದ ನೀರಿನಿಂದಾಗಿ ವಾಹನ ತೆರಳುವುದು ದುಸ್ತರವಾಗಿ ಸೆಕ್ಟರ್ ಅಧಿಕಾರಿಗಳು ಸಂಕಷ್ಟವನ್ನು ಎದುರಿಸುವಂತಾಯಿತಾದರು, ನಂತರ ಮಳೆ ಕ್ಷೀಣಗೊಂಡು ಸಮಸ್ಯೆ ಬಗೆಹರಿಯಿತು.
ಮಡಿಕೇರಿ ತಾಲೂಕಿನ ಕುಗ್ರಾಮಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟ ಕಡಮಕಲ್ಲುವಿನಲ್ಲಿ ಅಂದಾಜು 200 ಮತಗಳಿಗೆ ಒಂದು ಮತಗಟ್ಟೆಯನ್ನು ತೆರೆಯಲಾಗಿದ್ದು, ಅಲ್ಲಿ ಮೊಬೈಲ್ ಸಂಪರ್ಕ ದೊರಕುವುದು ಕ್ಲಿಷ್ಟಕರ. ಈ ಮತಗಟ್ಟೆಗೆ ದೂರ ದೂರದ ಪ್ರದೇಶಗಳಿಂದ ಮತದಾರರು ಬರಬೇಕಾಗಿರುವುದರಿಂದ, ಗುರುವಾರ ಬೆಳಗ್ಗೆ 9 ಗಂಟೆಯ ಹೊತ್ತಿಗೆ 9 ಮತಗಳಷ್ಟೆ ಚಲಾವಣೆಯಾಗಿತ್ತು. ಇನ್ನುಳಿದಂತೆ ಗ್ರಾಮೀಣ ಭಾಗಗಳಲ್ಲಿ ಬೆಳಗ್ಗಿನಿಂದಲೆ ಗ್ರಾಮೀಣರು ಸರದಿಯ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಊಟ, ನೀರಿನ ಸಮಸ್ಯೆ: ಮಡಿಕೇರಿ ನಗರದ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜಿನ ಮತಗಟ್ಟೆ ಸಿಬ್ಬಂದಿಗಳಿಗೆ ಬುಧವಾರ ರಾತ್ರಿ ಕುಡಿಯುವ ನೀರು, ಊಟದ ಸಮಸ್ಯೆ ತಲೆದೋರಿತ್ತೆಂದು ತಿಳಿದು ಬಂದಿದೆ. ಇನ್ನುಳಿದಂತೆ ಎಲ್ಲಾ ಮತಗಟ್ಟೆಗಳಲ್ಲು ಅಗತ್ಯ ಸೌಲಭ್ಯಗಳು ಇರುವಂತೆ ನೋಡಿಕೊಳ್ಳುವ ಪ್ರಯತ್ನ ಮಾಡಲಾಗಿತ್ತು. ಫೀ.ಮಾ.ಕಾರ್ಯಪ್ಪ ಕಾಲೇಜಿನ 200ನೇ ಸಂಖ್ಯೆಯ ಮತಗಟ್ಟೆಯೊಂದರಲ್ಲಿ ಮತಯಂತ್ರದಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದ ಕೊಂಚ ವಿಳಂಬವಾಗಿ ಮತದಾನ ಆರಂಭವಾಯಿತು.

ವೀಲ್ ಚೇರ್ ಸೌಲಭ್ಯ

ಮಡಿಕೇರಿ ನಗರದ ಬಹುತೇಕ ಮತಗಟ್ಟೆಗಳಲ್ಲಿ ವೀಲ್‍ಚೇರ್ ಸೌಲಭ್ಯವನ್ನು ಕಲ್ಪಿಸಲಾಗಿತ್ತು. ಇದನ್ನು ಬಳಸಿಕೊಂಡ ವೃದ್ಧರು, ವಿಶೇಷ ಚೇತನರು ಆರಾಮವಾಗಿ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದುದು ವಿಶೇಷವಾಗಿತ್ತು. 

ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೊಡಗಿನ 543 ಮತಗಟ್ಟೆಗಳಿಗೆ ಒಟ್ಟು 571 ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, 571 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ 1142 ಮತದಾನಾಧಿಕಾರಿಗಳನ್ನು ನೇಮಕ ಮಾಡಲಾಗಿತ್ತು.

ಜಿಲ್ಲೆಯಲ್ಲಿ ಒಟ್ಟು 2,18,867 ಪುರುಷ ಮತದಾರರು, 2,21,838 ಮಹಿಳಾ ಮತದಾರರು ಹಾಗೂ 25 ಇತರೆ ಒಟ್ಟು 4,40,730 ಮತದಾರರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News