ಮಧ್ಯಾಹ್ನ 3 ಗಂಟೆ ವೇಳೆಗೆ ಕೊಡಗಿನಲ್ಲಿ ಶೇ.57 ರಷ್ಟು ಮತದಾನ

Update: 2019-04-18 12:38 GMT

ಮಡಿಕೇರಿ, ಎ.18: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಂತಿಯುತ ಮತದಾನ ನಡೆದಿದೆ. ಬಹುತೇಕ ಎಲ್ಲಾ ಮತಗಟ್ಟೆಗಳಲ್ಲಿ ಬೆಳಗಿನಿಂದಲೇ ಬಿರುಸಿನ ಮತದಾನ ಆರಂಭವಾಗಿತ್ತು. ಮತ್ತೆ ಕೆಲವು ಮತಗಟ್ಟೆಗಳಲ್ಲಿ ಮಧ್ಯಾಹ್ನದ ನಂತರ ಮತದಾನ ಚುರುಕುಗೊಂಡಿದೆ.  

ಮಡಿಕೇರಿ, ಒಣಚಲು, ಗಾಳಿಬೀಡು, ಸುಂಟಿಕೊಪ್ಪ, ಗರಗಂದೂರು, ಮಾದಾಪುರ, ಹಟ್ಟಿಹೊಳೆ, ಮಕ್ಕಂದೂರು, ಮೂರ್ನಾಡು, ವಿರಾಜಪೇಟೆ, ಆರ್ಜಿ, ಅಮ್ಮತ್ತಿ-ಕಾರ್ಮಾಡು, ಸಿದ್ದಾಪುರ, ನೆಲ್ಯಹುದಿಕೇರಿ, ವಾಲ್ನೂರು, ನಂಜರಾಯಪಟ್ಟಣ, ಕುಶಾಲನಗರ, ಸೋಮವಾರಪೇಟೆ, ಗುಡ್ಡೆಹೊಸೂರು, ಕಂಬಿಬಾಣೆ, ಚೆಟ್ಟಳ್ಳಿ ಮತ್ತಿತರೆಡೆ ಮತದಾರರು ಸರದಿ ಸಾಲಿನಲ್ಲಿ ನಿಂತು ಮತಹಕ್ಕು ಚಲಾಯಿಸಿದ್ದು ಕಂಡುಬಂತು.  

ಮತದಾನ ದಿನವಾದ ಗುರುವಾರ ಮಳೆ ಬಿಡುವು ನೀಡಿತ್ತು. ಜಿಲ್ಲೆಯ ಹಲವು ಮತಗಟ್ಟೆಗಳಲ್ಲಿ ತಮ್ಮ ಮೊಮ್ಮಕ್ಕಳ ಸಹಾಯದೊಂದಿಗೆ ಹಿರಿಯರು ಮತ್ತು ವಿಶೇಷ ಚೇತನರು ಮತಗಟ್ಟೆಗೆ ಆಗಮಿಸಿ ಮತ ಹಕ್ಕು ಚಲಾಯಿಸಿದರು. ವಿಶೇಷ ಚೇತನರು ತಮ್ಮ ಮೊಮ್ಮಕ್ಕಳ ಸಹಾಯದೊಂದಿಗೆ ಗಾಲಿ ಕುರ್ಚಿ ವಾಹನದ ಮೂಲಕ ಮತಗಟ್ಟೆಗೆ ತೆರಳಿ ಮತ ಹಕ್ಕು ಚಲಾಯಿಸಿದ್ದು ಕಂಡುಬಂತು. 

ಒಣಚಲು ಮತಗಟ್ಟೆಯಲ್ಲಿ ಮತದಾರರು ಉತ್ಸಾಹದಿಂದ ಮತಹಕ್ಕು ಚಲಾಯಿಸಿದರು. ಸುಂಟಿಕೊಪ್ಪ ಗ್ರಾಮದ ಮತಗಟ್ಟೆಯಲ್ಲಿ ಮಹಿಳಾ ಮತ್ತು ಪುರುಷ ಮತದಾರರು ಉದ್ದುದ್ದ ಸಾಲಿನಲ್ಲಿ ನಿಂತು ಹಕ್ಕು ಚಲಾವಣೆ ಮಾಡಿದರು. 

ಒಣಚಲು ಗ್ರಾಮದ ಮಹಿಳೆಯೊಬ್ಬರೂ ಮಾತನಾಡಿ, ಒಣಚಲು ಸುತ್ತಮುತ್ತ ಕಾಡು ಪ್ರಾಣಿಗಳ ಹಾವಳಿ ಇದ್ದು, ಪ್ರತಿನಿತ್ಯ ಭಯದಲ್ಲಿ ವಾಸಮಾಡಬೇಕಿದೆ.  ಇತ್ತೀಚಿನ ದಿನಗಳಲ್ಲಿ ರಸ್ತೆ ಮತ್ತು ಸಾರಿಗೆ ಸಂಪರ್ಕ ಸುಧಾರಣೆಯಾಗಿದ್ದು, ಕಾಡು ಪ್ರಾಣಿಗಳ ಹಾವಳಿ ನಿಯಂತ್ರಣ ಮಾಡಬೇಕಿದೆ ಎಂದರು. 

ಜಿಲ್ಲೆಯಲ್ಲಿ ಬೆಳಗ್ಗೆ 11 ಗಂಟೆ ವೇಳೆಗೆ ಶೇ.29 ರಷ್ಟು ಮತದಾನವಾಗಿತ್ತು, ಹಾಗೆಯೇ ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.46 ರಷ್ಟು ಮತದಾನವಾಗಿತ್ತು.  
ಜಿಲ್ಲೆಯ ಸೂಕ್ಷ್ಮ ಮತಗಟ್ಟೆಗಳಲ್ಲಿ ಒಂದಾದ ಒಣಚಲು ಮತಗಟ್ಟೆಯಲ್ಲಿ ಬೆಳಗಿನಿಂದಲೇ ಮತದಾರರು ಸಾಲುಗಟ್ಟಿ ಮತ ಚಲಾಯಿಸಿದ್ದು ಕಂಡುಬಂತು.  
ಒಟ್ಟಾರೆ ಜಿಲ್ಲೆಯ ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕುಗಳ ಎಲ್ಲಾ ಭಾಗಗಳಲ್ಲಿ ಉತ್ತಮ ಮತದಾನವಾಗಿದೆ. ಜಿಲ್ಲೆಯಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಸುಮಾರು ಶೇ.57 ರಷ್ಟು ಮತದಾನವಾಗಿದೆ.  

ಮಹಿಳೆಯರು ಅತಿ ಉತ್ಸಾಹದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದು ವಿಶೇಷವಾಗಿತ್ತು. ಒಣಚಲು ಗ್ರಾಮದಲ್ಲಿ ಮುಂಜಾನೆಯಿಂದಲೇ ಮಹಿಳಾ ಮತದಾರರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News