ಚಿಕ್ಕಮಗಳೂರು: ವಿವಿಧ ರಾಜಕೀಯ ನಾಯಕರು, ಗಣ್ಯರಿಂದ ಮತ ಚಲಾವಣೆ

Update: 2019-04-18 12:43 GMT

ಚಿಕ್ಕಮಗಳೂರು, ಎ.18: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲೆಯಲ್ಲಿ ನಡೆದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ನಾಲ್ಕು ಹಾಗೂ ಹಾಸನ ಕ್ಷೇತ್ರ 1 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ವಿವಿಧ ಮತಗಟ್ಟೆಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಪ್ರಮುಖ ಶಾಸಕರು ಗುರುವಾರ ಮುಂಜಾನೆ ತಮ್ಮ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಮತದಾನ ಮಾಡಿದರು. 

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಸಿ.ಟಿ.ರವಿ ತಮ್ಮ ಪತ್ನಿ ಪಲ್ಲವಿಯೊಂದಿಗೆ ನಗರದ ಬಸವನಹಳ್ಳಿ ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ-200ರಲ್ಲಿ ಮತಚಲಾಯಿಸಿದರು. ಸಾರ್ವಜನಿಕರೊಂದಿಗೆ ಸುಮಾರು ಅರ್ಧಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತಿದ್ದ ರವಿ ಹಾಗೂ ಪಲ್ಲವಿ ಮತದಾನದ ಹಕ್ಕನ್ನು ಚಲಾಯಿಸಿದರು. 

ಜೆಡಿಎಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರು ತಮ್ಮ ಪತ್ನಿ ಹಾಗೂ ಕಾರ್ಯಕರ್ತರೊಂದಿಗೆ ಮುಂಜಾನೆ ನಗರದ ಹೊಸಬಡಾವಣೆ ಶಾಲೆಯ ಮತಗಟ್ಟೆ ಸಂಖ್ಯೆ 146ರ ಸಖಿ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಇವರ ಸಹೋದರ ಹಾಗೂ ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರು ತಮ್ಮ ಪತ್ನಿ ಮಮತಾ ಹಾಗೂ ಮಗಳು ಸಲೋನಿ ಅವರು ಸಖರಾಯಪಟ್ಟಣದ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ಮತಚಲಾಯಿಸಿದರು.

ಶೃಂಗೇರಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಅವರು ಕೊಪ್ಪ ತಾಲೂಕಿನ ಖಾಂಡ್ಯ ಹೋಬಳಿಯ ಬಾಸಾಪುರ ಗ್ರಾಮದಲ್ಲಿನ ಮತಗಟ್ಟೆಯಲ್ಲಿ ಮತದಾನ ಮಾಡಿದರೆ, ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಜೀವರಾಜ್ ಎನ್.ಆರ್.ಪುರ ಪಟ್ಟಣದ ತಮ್ಮ ಮನೆ ಸಮೀಪದ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಜೆಡಿಎಸ್ ಮುಖಂಡ ಎಚ್.ಜಿ.ವೆಂಕಟೇಶ್ ಕೊಪ್ಪ ಪಟ್ಟಣದ ಮತಗಟ್ಟೆಯಲ್ಲಿ ಮತದಾನ ಮಾಡಿದರು. 

ಮೂಡಿಗೆರೆ ಕ್ಷೇತ್ರದಲ್ಲಿ ಮಾಜಿ ಸಚಿವೆ ಮೋಟಮ್ಮ, ಪಟ್ಟಣದ ಮತಗಟ್ಟೆ ಸಂಖ್ಯೆ 173ರಲ್ಲಿ ಗುರುವಾರ ಬೆಳಗ್ಗೆ ಮತದಾನ ಮಾಡಿದರು. ಮೂಡಿಗೆರೆ ಮೀಸಲು ವಿಧಾನಸಭೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಪಟ್ಟಣದ 169ರ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಜೆಡಿಎಸ್ ಅಭ್ಯರ್ಥಿ ಬಿ.ಬಿ.ನಿಂಗಯ್ಯ ತಮ್ಮ ಸ್ವಗ್ರಾಮ ಬೆಟ್ಟಗೆರೆ ಗ್ರಾಮದ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಇನ್ನು ತರೀಕೆರೆ ಕ್ಷೇತ್ರದ ಬಿಜೆಪಿ ಶಾಸಕ ಡಿ.ಎಸ್.ಸುರೇಶ್ ತಮ್ಮ ಸ್ವಗ್ರಾಮ ದೋರನಾಳು ಗ್ರಾಮದ ಸರಕಾರಿ ಶಾಲೆಯ ಮತಗಟ್ಟೆ ಸಂಖ್ಯೆ-176ರಲ್ಲಿ ಪತ್ನಿ ಜ್ಯೋತಿ ಹಾಗೂ ಮಗಳು ನೀತು ಹಾಗೂ ಕುಟುಂಬಸ್ಥರೊಂದಿಗೆ ಮತದಾನ ಮಾಡಿದರು. ಹಾಸನ ಲೋಕಸಭೆ ಕ್ಷೇತ್ರಕ್ಕೊಳಪಟ್ಟಿರುವ ಕಡೂರು ತಾಲೂಕಿನ ಕುಂದೂರು ಗ್ರಾಮದಲ್ಲಿ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಕುಟುಂಬಸ್ಥರು, ಕಾರ್ಯಕರ್ತರೊಂದಿಗೆ ಆಗಮಿಸಿ ಮತಚಲಾಯಿಸಿದರು. ಕಡೂರು ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ ಮುಖಂಡ ವೈ.ಎಸ್.ದತ್ತ ಯಗಟಿ ಗ್ರಾಮದಲ್ಲಿ ಮತಚಲಾಯಿಸಿದರೆ, ಕಾಂಗ್ರೆಸ್ ಮುಖಂಡ ಆನಂದ್ ಅಂದೇನಹಳ್ಳಿ ಗ್ರಾಮದಲ್ಲಿ ಮತಚಲಾಯಿಸಿದರು.

ರಂಭಾಪುರಿ ಜಗದ್ಗುರುಗಳಿಂದ ಮತದಾನ

ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಗುರುವಾರ ಬೆಳಗ್ಗೆ ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿನ ಬಾಳೆಹೊನ್ನೂರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 123ರಲ್ಲಿ ಮತ ಚಲಾಯಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News