ಚಾಮರಾಜನಗರದಲ್ಲಿ ಶಾಂತಿಯುತ ಮತದಾನ: ಅಲ್ಲಲ್ಲಿ ಕೈಕೊಟ್ಟ ಮತಯಂತ್ರ

Update: 2019-04-18 13:08 GMT

ಚಾಮರಾಜನಗರ, ಎ.18: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದೆ. ಕರ್ತವ್ಯದಲ್ಲಿ ನಿರತರಾಗಿದ್ದ ಚುನಾವಣಾ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿ ಘಟನೆ ನಡೆದಿದ್ದು, ಕ್ಷೇತ್ರ ವ್ಯಾಪ್ತಿಯ ಒಟ್ಟು 63 ಮತಗಟ್ಟೆಗಳಲ್ಲಿ ಮತಯಂತ್ರ ಕೈ ಕೊಟ್ಟಿದ್ದರಿಂದ ಮತದಾರರು ಮತದಾನಕ್ಕೆ ಕಾಯುವ ಪರಿಸ್ಥಿತಿ ಬಂದಿತ್ತು.

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿರವರು ಬೆಳಗ್ಗೆ 7.10 ಕ್ಕೆ ಸ್ವಗ್ರಾಮವಾಗಿರುವ ಉಪ್ಪಿನಮೋಳೆಗೆ ತೆರಳಿ ಮತಚಲಾಯಿದರು. ಆದರೆ ಮತ ಚಲಾವಣೆಯಾಗದಿರುವ ಬಗ್ಗೆ ಮತಗಟ್ಟೆ ಅಧಿಕಾರಿಗಳ ಗಮನಕ್ಕೆ ತಂದಾಗ ಮತ ಯಂತ್ರದಲ್ಲಿ ದೋಷ ಇರುವುದು ಕಂಡು ಬಂತು. ಕೂಡಲೇ ಮತ ಯಂತ್ರವನ್ನು ಸರಿಪಡಿಸಲು ಹರಸಾಹಸಪಟ್ಟರೂ ಸಾಧ್ಯವಾಗಲಿಲ್ಲ. ಬಹಳ ಸಮಯದ ಬಳಿಕ ಮತ್ತೊಂದು ಮತ ಯಂತ್ರವನ್ನು ತಂದರೂ ಸಹ ಪ್ರಯೋಜನವಾಗಲಿಲ್ಲ. ಎರಡು ಮತಯಂತ್ರಗಳು ದೋಷ ಪೂರಿತವಾಗಿದ್ದನ್ನು ಗಮನಿಸಿದ ಸಚಿವರು, ಮತಯಂತ್ರದ ಬಗ್ಗೆ ಇರುವ ವಿಶ್ವಾಸ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ, ಸುಮಾರು ಒಂದೂವರೆ ಗಂಟೆಯಾದರೂ ಸಹ ಮತಯಂತ್ರ ಸರಿಯಾಗಿಲ್ಲ ಎಂದರೆ ಏನರ್ಥ ಎಂದು ಅನುಮಾನ ವ್ಯಕ್ತಪಡಿಸಿದರು.

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಾದ್ಯಂತ ಬಿರುಸಿನ ಮತದಾನ ನಡೆದಿದ್ದು, ಹೆಗ್ಗವಾಡಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್. ದೃವನಾರಾಯಣ್ ಮತ ಚಲಾವಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಈ ಬಾರಿ ಮತದಾರರು ತಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುವ ಮೂಲಕ ಮೂರನೇ ಬಾರಿಗೆ ಲೋಕಸಭೆಗೆ ಸದಸ್ಯರನ್ನಾಗಿ ಆಯ್ಕೆ ಮಾಡುವರು, ವಾತಾವರಣ ಉತ್ತಮವಾಗಿದೆ ಎಂದರು.

ಕೊಳ್ಳೇಗಾಲದಲ್ಲಿ ಶಾಸಕ ಹಾಗೂ ಮಾಜಿ ಸಚಿವ ಎನ್.ಮಹೇಶ್ ಮತದಾನ ಮಾಡಿದ ಬಳಿಕ ಮಾತನಾಡಿ, ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಇದೆ ಎಂದರು.

ಹನೂರಿನ ಶಾಸಕ ಆರ್.ನರೇಂದ್ರರವರು ದೊಡ್ಡಿಂದವಾಡಿಯಲ್ಲಿ, ಗುಂಡ್ಲುಪೇಟೆಯ ಶಾಸಕ ಸಿ.ಎಸ್.ನಿರಂಜನ್‍ಕುಮಾರ್ ಚೌಡಹಳ್ಳಿಯಲ್ಲಿ ಮತದಾನ ಮಾಡಿದರು. ಕ್ಷೇತ್ರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಅಲ್ಲಲ್ಲಿ ಮತದಾರರಲ್ಲಿನ ಗೊಂದಲ, ಗುರುತಿನ ಚೀಟಿಯಿಲ್ಲದೆ ಪರದಾಟ ಸಾಮಾನ್ಯವಾಗಿತ್ತು, ಇವೆಲ್ಲದರ ನಡುವೆ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News