ದೇಶಕ್ಕಾಗಿ ತ್ಯಾಗ-ಬಲಿದಾನ ಮಾಡಿದವರಿಗೆ ಮಾತ್ರ ಸಂವಿಧಾನದ ಬೆಲೆ ತಿಳಿಯುತ್ತದೆ: ಮಲ್ಲಿಕಾರ್ಜುನ ಖರ್ಗೆ

Update: 2019-04-18 13:34 GMT

ಕಲಬುರ್ಗಿ, ಎ.18: ದೇಶದ ಸ್ವಾತಂತ್ರಕ್ಕಾಗಿ ತ್ಯಾಗ-ಬಲಿದಾನ ಮಾಡಿದವರಿಗೆ ಹಾಗೂ ಹೋರಾಟದ ಅರಿವಿರುವವರಿಗೆ ಮಾತ್ರ ಸಂವಿಧಾನದ ಬೆಲೆ ಗೊತ್ತಾಗುತ್ತದೆ ಎಂದು ಲೋಕಸಭಾ ಕಾಂಗ್ರೇಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಿಸಿದ್ದಾರೆ.

ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ ನಂತರ ಹುಟ್ಟಿರುವ ಪ್ರಧಾನಿ ಮೋದಿಗೆ ಈ ದೇಶದ ಇತಿಹಾಸದ ಆಳ ಅರಿವಿಲ್ಲ. ಇತಿಹಾಸವನ್ನು ಸರಿಯಾಗಿ ತಿಳಿದುಕೊಂಡು ಅದನ್ನು ಜನರಿಗೆ ಹೇಳಬೇಕೆ ಹೊರತು ದಾರಿ ತಪ್ಪಿಸುವ ಮಾತುಗಳಲ್ಲ ಎಂದು ಟೀಕಿಸಿದರು.

ಜವಾಹರ್ ಲಾಲ್ ನೆಹರೂ, ಲಾಲ್ ಬಹಾದ್ದೂರ್ ಶಾಸ್ತ್ರಿ, ವಲ್ಲಭಭಾಯಿ ಪಟೇಲ್ ಮುಂತಾದ ರಾಷ್ಟ್ರ ನಾಯಕರಿಗೆ ಸ್ವಾತಂತ್ರದ ಹೋರಾಟ ಹಾಗೂ ಅದಕ್ಕಿಂತಲೂ ಹಿಂದಿನ ದೇಶದ ಸ್ಥಿತಿಗತಿಯ ಬಗ್ಗೆ ಸಮಗ್ರ ಮಾಹಿತಿ ಇತ್ತು. ಅಂತಹ ರಾಷ್ಟ್ರ ನಾಯಕರು ಕಾಂಗ್ರೆಸ್ ಪಕ್ಷದವರು ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಮರೆಯಬಾರದು ಎಂದು ಅವರು ಹೇಳಿದರು. ದೇಶಕ್ಕೆ ಸ್ವಾತಂತ್ರ ಬಂದ ಪ್ರಾರಂಭದಲ್ಲಿ ದೇಶದಲ್ಲಿ ಸಾಕ್ಷರತೆಯ ಪ್ರಾಮಾಣ ಶೇ. 7 ಇತ್ತು, ಈಗ ಅದು ಶೇ.80ಕ್ಕೂ ಹೆಚ್ಚಿದೆ. ಶಿಶುಗಳ ಸಾವು ಗಣನೀಯವಾಗಿ ಇಳಿಮುಖವಾಗಿದೆ. ನೀರಾವರಿ ಕೇವಲ 22 ಮಿಲಿಯನ್ ಹೆಕ್ಟೇರ್ ಇದ್ದಿದ್ದು ಈಗ 68 ಮಿಲಿಯನ್ ಹೆಕ್ಟರ್‌ಗೆ ಮುಟ್ಟಿದೆ. 4 ಲಕ್ಷ ಕಿಮೀ ಇದ್ದ ರಸ್ತೆಗಳು 54 ಲಕ್ಷ ಕಿಮೀವರೆಗೆ ಮಾಡಿದ್ದೇವೆ. ಇದು ಕಾಂಗ್ರೆಸ್‌ನ ಇತಿಹಾಸವೆಂದು ಅವರು ವಿವರಿಸಿದರು.

ವೇದಿಕೆಯಲ್ಲಿ ಮಾಜಿ ಮೇಯರ್ ಮಲ್ಲಮ್ಮ ವಳಿಕೇರಿ, ಎಚ್‌ಕೆಈ ಸೊಸೈಟಿ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ, ನೀಲಕಂಠರಾವ್ ಮೂಲಗೆ, ಮಾರುತಿ ಮಾಲೆ, ಸುಭಾಷ್ ಬಿಜಾಪುರ, ಚಿದಂಬರ್ ರಾವ್ ಪಾಟೀಲ್, ಶಿವಕುಮಾರ ಘಂಟಿ ಸೇರಿದಂತೆ ಮತ್ತಿತರಿದ್ದರು.

ನಾನು ಕೇಂದ್ರ ಸಚಿವನಾಗಿದ್ದಾಗ 12ಸಾವಿರ ಕೋಟಿ ರೂ.ಖರ್ಚು ಮಾಡಿ ದೇಶದ 8 ಕಡೆ ಇಎಸ್‌ಐ ಆಸ್ಪತ್ರೆ ಕಟ್ಟಿಸಿದ್ದೇನೆ. 4,000 ಕೋಟಿ ಖರ್ಚು ಮಾಡಿ ಸೋಲಾಪುರದಿಂದ ಗುಲ್ಬರ್ಗಾ, ರಾಯಚೂರು ಮೂಲಕ ಹಾದು ಹೋಗಿ ಬೆಂಗಳೂರು ತಲುಪುವ ರಾಷ್ಟ್ರೀಯ ಹೆದ್ದಾರಿ ಮಾಡುತ್ತಿದ್ದೇವೆ. ಪ್ರಧಾನಿ ಮೋದಿಯ ತವರು ಗುಜರಾತ್‌ನಲ್ಲಿ 600 ಕೋಟಿರೂ. ಖರ್ಚು ಮಾಡಿ ಅಂಕಲೇಶ್ವರ ಹಾಗೂ ಅಹ್ಮದಾಬಾದ್‌ನಲ್ಲಿ 300ಬೆಡ್‌ಗಳ ಆಸ್ಪತ್ರೆ ನಿರ್ಮಿಸಿದ್ದೇನೆ. ಇದೆಲ್ಲ ನಾನು ಮಾಡಿದ್ದು ಎಂದು ಹೆಮ್ಮೆಯಿಂದ ಹೇಳುತ್ತೇನೆ. ಖರ್ಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದವರು ಇದನ್ನು ಅರಿಯಲಿ.

-ಮಲ್ಲಿಕಾರ್ಜುನ ಖರ್ಗೆ, ಅಭ್ಯರ್ಥಿ, ಕಲಬುರ್ಗಿ ಲೋಕಸಭಾ ಕ್ಷೇತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News