ಜಗತ್ತಿನಲ್ಲೇ ಮೊದಲು ರೈತರನ್ನು ಋಣಮುಕ್ತರನ್ನಾಗಿಸಿದ್ದು ಕಾಂಗ್ರೆಸ್ ಪಕ್ಷ: ಎಚ್.ಕೆ.ಪಾಟೀಲ್

Update: 2019-04-18 16:17 GMT

ಗದಗ, ಎ.18: ದೇಶದ ರೈತರನ್ನು ಋಣಮುಕ್ತಗೊಳಿಸಿದ್ದು ಕಾಂಗ್ರೆಸ್ ಪಕ್ಷ. ಸಾಲದ ಸುಳಿಯಲ್ಲಿದ್ದ ರೈತರ ಸಾಲ ಮನ್ನಾದಂತಹ ಯೋಜನೆಗಳನ್ನು ಹಮ್ಮಿಕೊಂಡು ರೈತರು ನೆಮ್ಮದಿಯಿಂದ ಜೀವನ ಸಾಗಿಸುವಂತೆ ಮಾಡಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ಗುರುವಾರ ಗದಗದ ಲಕ್ಷ್ಮೇಶ್ವರ ಪಟ್ಟಣದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ್ ಪರ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷ ಕಳೆದ 60 ವರ್ಷಗಳಲ್ಲಿ ದೇಶದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿದೆ. ಅನ್ನ ಭಾಗ್ಯದಂತಹ ಯೋಜನೆ ಜಾರಿಗೊಳಿಸಿ ಬಡವರಿಗೆ ನೆಮ್ಮದಿಯ ಬದುಕು ನೀಡಿದೆ. ಇಂತಹ ಕೊಡುಗೆಗಳನ್ನು ನೀಡಿದ ಪಕ್ಷದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ.

ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದ್ದು, ಪಡಿತರ ವ್ಯವಸ್ಥೆ, ರೈತರನ್ನು ಗೇಣಿದಾರರಿಂದ ಜಮೀನು ಕೊಡಿಸಿದ್ದು ಕಾಂಗ್ರೆಸ್. ಪಕ್ಷವೂ ಬಡವರ ಪರ ಹೋರಾಟ ನಡೆಸುತ್ತದೆ. ರೈತರಿಗಾಗಿ ರಾಹುಲ್ ಗಾಂಧಿ ತಮ್ಮ ಅನೇಕ ಕಾರ್ಯಕ್ರಮಗಳ ಮೂಲಕ ಕೆಲಸಗಳನ್ನು ಅಭಿವೃದ್ಧಿಗೊಳಿಸಲು ಮುಂದಾಗಿದ್ದಾರೆ. ನಾವು ಹೇಳಿದ ರೀತಿಯಲ್ಲಿ ನಡೆದಿದ್ದೇವೆ ಹಾಗೂ ನಡೆಯಲಿದ್ದೇವೆ. ನಮ್ಮ ಮೇಲೆ ನಂಬಿಕೆ ಇಡಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷ ಅನುಷ್ಠಾನಕ್ಕೆ ತರಬಹುದಾದಂತಹ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಈ ಚುನಾವಣಾ ಪ್ರಣಾಳಿಕೆಯನ್ನು ಜನರು ಬಹಳ ಒಳ್ಳೆಯ ರೀತಿಯಲ್ಲಿ ಸ್ವಾಗತಿಸಿದ್ದಾರೆ. ‘ನ್ಯಾಯ್ ಯೋಜನೆ’ಯ ಮೂಲಕ 25 ಕೋಟಿ ಜನರು ಬಡತನ ರೇಖೆಯಿಂದ ಮೇಲೆ ಮಧ್ಯಮ ವರ್ಗಕ್ಕೆ ಅಭಿವೃದ್ದಿಗೊಳಿಸಲಿದ್ದೇವೆ. ಅಲ್ಲದೆ, ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳ ಪರವಾದ ಅಲೆ ಇದ್ದು, ನಮ್ಮ ಮೈತ್ರಿ ಅಭ್ಯರ್ಥಿಗಳು 20 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಲಕ್ಷ್ಮೇಶ್ವರ ಹಾಗೂ ನರೇಗಲ್ ಮತ್ತು ಬಿಜಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ನಾಳೆ ಎಚ್.ಕೆ.ಪಾಟೀಲ ಬಿಜಾಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಪ್ರಣಾಳಿಕೆಯ ನಂತರ ಬಿಜೆಪಿ ನೆಲೆ ಕುಸಿದಿದ್ದು, ಮೋದಿ ಮಾತುಗಳಲ್ಲಿ ಬದಲಾವಣೆ ಆಗಿದೆ. ಇಂತಹ ಸಂದರ್ಭದಲ್ಲಿ ಅರಾಜಕತೆಯ ಮೂಲಕ ಏನನ್ನಾದರೂ ಸಾಧಿಸಬಹುದು ಎನ್ನುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ.

-ಎಚ್.ಕೆ.ಪಾಟೀಲ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News