ಈ ಬಾರಿಯೂ ಜೈಲು ಹಕ್ಕಿಗಳಿಗಿಲ್ಲ ಮತದಾನದ ಭಾಗ್ಯ !

Update: 2019-04-18 16:22 GMT

ಬೆಂಗಳೂರು, ಎ.18: ಮತದಾನ ಅನ್ನೋದು ಪ್ರತಿಯೊಬ್ಬರ ಹಕ್ಕು. ಸಂವಿಧಾನದಲ್ಲೂ ಇದನ್ನೇ ಹೇಳಲಾಗಿದೆ. ಎಲ್ಲರೂ ತಮ್ಮ ಮತ ಚಲಾಯಿಸಬೇಕು ಎಂದು ಚುನಾವಣಾ ಆಯೋಗ ಕೂಡ ಘೋಷಣೆ ಮಾಡುತ್ತೆ. ಆದರೆ, ಜೈಲು ಹಕ್ಕಿಗಳಿಗೆ ಆ ಭಾಗ್ಯವೇ ಇಲ್ಲದಂತಾಗಿದೆ. 

ಬೆಂಗಳೂರು ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಮತದಾನದ ಭಾಗ್ಯ ಕಲ್ಪಿಸುವುದನ್ನ ಚುನಾವಣಾ ಆಯೋಗ ಮರೆತಿದೆ. ಈ ಕೈದಿಗಳಿಗೆ ಮತದಾನ ಮಾಡಿಸಲು ಹತ್ತಾರು ಷರತ್ತು, ನೂರೆಂಟು ಕಾಯ್ದೆ ಇದೆ. ಚುನಾವಣಾಧಿಕಾರಿಗಳು ನಮಗೆ ಇದರ ಬಗ್ಗೆ ಸರಿಯಾದ ಮಾಹಿತಿಯನ್ನೇ ನೀಡಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಜೈಲಾಧಿಕಾರಿಯೊಬ್ಬರು ಹೇಳಿದ್ದಾರೆ.

ಸಮಸ್ಯೆಗಳು ಏನು: ಕಾನೂನಿನಡಿಯಲ್ಲಿ ವಿಚಾರಣಾಧೀನ ಕೈದಿಗೆ ಮತದಾನ ಮಾಡುವ ಹಕ್ಕಿದೆ. ಆದರೆ, ಅವರಿಗೆ ಮತದಾನ ಮಾಡಿಸಬೇಕಾದರೆ ಬಹಳಷ್ಟು ನಿಯಮಗಳು ಇವೆ. ಅಂಚೆ ಮೂಲಕ ಮತದಾನ ಚಲಾಯಿಸಬಹುದು. ಅಂದರೆ ಕಲಬುರಗಿಯಲ್ಲಿ ಒಬ್ಬ ಆರೋಪಿ ಕೊಲೆ ಮಾಡಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದು, ಮತದಾನ ಮಾಡಬೇಕಾದರೆ ಜೈಲಾಧಿಕಾರಿಗಳು ಅವನ ಮತದಾನ ಕ್ಷೇತ್ರ ಯಾವುದು, ಮತಗಟ್ಟೆ ಎಲ್ಲಿದೆ, ವೋಟರ್ ಐಡಿಯಲ್ಲಿ ಹೆಸರಿದೆಯಾ ಎಂಬುದನ್ನು ಕೈದಿ ಮನೆಯವರ ಜೊತೆ ಮಾತಾಡಿ ಸಂಪೂರ್ಣ ಮಾಹಿತಿ ಪಡೆಯಬೇಕು. ಇದು ಬಹಳಷ್ಟು ಸಮಯಾವಕಾಶ ತೆಗೆದುಕೊಳ್ಳುತ್ತದೆ. ಇದಕ್ಕೆ ಜೈಲಾಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲವಂತೆ.

ಇನ್ನು ಚುನಾವಣಾಧಿಕಾರಿಗಳಿಗೂ ಗೊಂದಲಗಳಿವೆ. ಕೇಂದ್ರ ಚುನಾವಣಾ ಆಯೋಗದ ಜೊತೆ ಮಾತುಕತೆ ನಡೆಸಿದ್ದೇವೆ. ಯಾವ ಹಂತದಲ್ಲಿ ಮಾಹಿತಿ ಕಲೆಹಾಕಬೇಕು. ಕೈದಿಗಳು ಮತದಾನ ಯಾವ ರೀತಿ ಮಾಡಬೇಕು ಅನ್ನುವ ಸಿದ್ಧತೆಯಲ್ಲಿ ಇದ್ದಾರೆ. ಪರಪ್ಪನ ಅಗ್ರಹಾರದಲ್ಲಿ 6 ಸಾವಿರ ಕೈದಿಗಳಿದ್ದಾರೆ. ವಿಚಾರಣಾಧೀನ ಕೈದಿಗೆ ಮತ ಹಾಕುವ ಹಕ್ಕಿದೆ. ದೊಡ್ಡವರಿಗೆ ಒಂದು ನ್ಯಾಯ, ಚಿಕ್ಕವರಿಗೆ ಒಂದು ನ್ಯಾಯ. ಕಾರಾಗೃಹದಲ್ಲಿರುವ ಅಧಿಕಾರಿಗಳು ಸೋಮಾರಿಗಳು. ಇದರ ಬಗ್ಗೆ ಚುನಾವಣಾಧಿಕಾರಿಗಳ ಜೊತೆ ಚರ್ಚೆ ಮಾಡಿಲ್ಲ. ಒಂದೇ ಕಡೆ ಸಾವಿರಕ್ಕೂ ಹೆಚ್ಚು ಮಂದಿ ಸಿಗುತ್ತಾರೆ. ಆದರೆ ಇವರು ಅದನ್ನ ಉಪಯೋಗಿಸುತ್ತಿಲ್ಲ ಎಂದು ಹೈಕೋರ್ಟ್ ಹಿರಿಯ ವಕೀಲ ಅಮೃತೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಚಾರಣಾಧೀನಾ ಕೈದಿಗಳಿಗೆ ಮತದಾನ ಮಾಡುವ ಹಕ್ಕಿದೆ. ಕಾನೂನು ಪುಸ್ತಕದಲ್ಲೆ ಇದು ನಮೂದಾಗಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪ್ರಚಾರ ಮಾಡುತ್ತಾರೆ. ಚುನಾವಣಾ ಆಯೋಗ ಕೂಡ ಕೆಲ ಕ್ರಮ ಕೈಗೊಳ್ಳುತ್ತೆ. ಬಂದೋಬಸ್ತು ಮಾಡುತ್ತಾರೆ. ವಿಪರ್ಯಾಸ ಅಂದರೆ ಕೈದಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.

-ಅಮೃತೇಶ್, ಹೈಕೋರ್ಟ್ ಹಿರಿಯ ವಕೀಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News