ತುಮಕೂರಿನಲ್ಲಿ ಶಾಂತಿಯುತ ಮತದಾನ: ಶೇ.77ರಷ್ಟು ಮತದಾರರಿಂದ ಹಕ್ಕು ಚಲಾವಣೆ

Update: 2019-04-18 16:39 GMT

ತುಮಕೂರು,ಎ.18: ಹದಿನಾರನೇ ಲೋಕಸಭೆಗೆ ಇಂದು ನಡೆದ ಮತದಾನ ಶಾಂತಿಯುತವಾಗಿ ನಡೆದಿದ್ದು, ಜಿಲ್ಲೆಯಲ್ಲಿ ಶೇ.77.01 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ತುಮಕೂರು ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರ, ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿ ಎರಡು ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಸೇರಿದ ಒಂದು ಸೇರಿ ಒಟ್ಟು ಮೂರು ಲೋಕಸಭಾ ಕ್ಷೇತ್ರಗಳ ಒಟ್ಟು 11 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಸಣ್ಣ ಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ, ಉಳಿದಂತೆ ಮತದಾನ ಸಂಪೂರ್ಣ ಶಾಂತಿಯುತವಾಗಿತ್ತು.

ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ಸ್ಥಾಪಿಸಿರುವ ಮತಗಟ್ಟೆಯಲ್ಲಿ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮಿಜೀ ತಮ್ಮ ಮತ ಚಲಾಯಿಸಿದರೆ, ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಮ್ಮ ಪತ್ನಿ ಕನ್ನಿಕಾ ಅವರೊಂದಿಗೆ ಗೊಲ್ಲಹಳ್ಳಿ(ಸಿದ್ದಾರ್ಥ ನಗರ)ದ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು. ಹಿರೇಮಠದ ಡಾ.ಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿ ಚಿಕ್ಕಪೇಟೆಯ ಉರ್ದು ಶಾಲೆಯ ಮತಗಟ್ಟೆ ಯಲ್ಲಿ ಮತಚಲಾಯಿಸಿದರೆ, ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರು ಗಾಂಧಿನಗರದ ಶಾಲೆಯಲ್ಲಿ ಸ್ಥಾಪಿಸಿರುವ ಮತಗಟ್ಟೆಯಲ್ಲಿ ತಮ್ಮ ಪತ್ನಿಯೊಂದಿಗೆ ಮತ ಚಲಾಯಿಸಿದರು. ತುಮಕೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಆಗಿರುವ ಡಾ.ರಾಕೇಶ್‍ ಕುಮಾರ್ ಶಿರಾಗೇಟ್‍ನ ಕಾಳಿದಾಸ ಕಾಲೇಜಿನ ಮತಗಟ್ಟೆಯಲ್ಲಿ ತಮ್ಮ ಪತ್ನಿಯೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಮತ ಚಲಾವಣೆ ನಂತರ ಮಾತನಾಡಿದ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಕೇಂದ್ರದಲ್ಲಿ ಮಹಾಘಟ ಬಂಧನ್ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ವಿಶ್ವದ ಇತರೆ ದೇಶಗಳ ಬೆಳವಣಿಗೆ ವೇಗಕ್ಕೆ ಸರಿಯಾಗಿ ಬದಲಾವಣೆಯಾಗಲು ರಾಹುಲ್‍ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರದಿಂದ ಮಾತ್ರ ಸಾಧ್ಯ ಎಂದರು.

ಭಾರತದ ಸಂವಿಧಾನ ಆಶಯಗಳನ್ನು ಈಡೇರಿಸಲು ಯುವಜನತೆ ಇಂದಿನ ಮತದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಿದೆ. ಅವರ ಆಸೆ, ಆಕಾಂಕ್ಷೆಗಳು ಈಡೇರಬೇಕೆಂದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಏಕೆಂದರೆ ಕಳೆದ ಐದು ವರ್ಷಗಳ ಕಾಲ ಅಧಿಕಾರ ನಡೆಸಿದ ಬಿಜೆಪಿ ಯುವಜನರ ಕನಸುಗಳನ್ನು ನುಚ್ಚು ನೂರು ಮಾಡಿದೆ ಎಂದು ಆರೋಪಿಸಿದರು.

ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ ಮಾತನಾಡಿ, ಇದು ಪ್ರಜಾಪ್ರಭುತ್ವದ ದೊಡ್ಡ ಹಬ್ಬ. ಇದರಲ್ಲಿ ನಾವೆಲ್ಲರೂ ಪಾಲ್ಗೊಳ್ಳಬೇಕಿದೆ. ಎಲ್ಲರೂ ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತಚಲಾಯಿಸುವಂತೆ ಮತದಾರರಿಗೆ ಸಲಹೆ ನೀಡಿದರು.

ಬಿಜೆಪಿ ಅಭ್ಯರ್ಥಿಯ ಕಾಲೇಜಿನ ಅಡೆಂಟರ್ ಬಳಿ 5.6 ಲಕ್ಷ ಹಣ ಪತ್ತೆ: ಮಧುಗಿರಿ ವಿಧಾನಸಭಾ ಕ್ಷೇತ್ರದ ಕೊಡಿಗೇನಹಳ್ಳಿ ಬಳಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರ ಸಿಐಟಿ ಕಾಲೇಜಿನ ಅಟೆಂಡರ್ ಅವರ ಬಳಿ 5.6 ಲಕ್ಷ ರೂ ಹಣ ಪತ್ತೆಯಾಗಿದ್ದು, ಈ ಸಂಬಂದ ದೂರು ದಾಖಲಾಗಿದೆ.

ಸಂಜೆ ಐದು ಗಂಟೆ ವೇಳೆಗೆ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಸೇರಿದ ಒಟ್ಟು ಎಂಟು ಕ್ಷೇತ್ರಗಳಲ್ಲಿ ನಡೆದ ಮತದಾನದ ವಿವರ ಈ ಕೆಳಕಂಡಂತಿದೆ.
ಚಿಕ್ಕನಾಯಕನಹಳ್ಳಿ ಶೇ.67.91, ತಿಪಟೂರು ಶೇ72.04, ತುರುವೇಕೆರೆ 72.92, ತುಮಕೂರು ನಗರ 60.84, ತುಮಕೂರು ಗ್ರಾಮಾಂತರ 75.41, ಕೊರಟಗೆರೆ 73.21, ಗುಬ್ಬಿ 73.46 ಮತ್ತು ಮಧುಗಿರಿ 69.48 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ವಿವರ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News