ಮಂಡ್ಯದಲ್ಲಿ ಶೇ 80.23 ರಷ್ಟು ಮತ ಚಲಾವಣೆ: ರಾಜ್ಯದಲ್ಲೇ ಅತ್ಯಧಿಕ ಮತದಾನ

Update: 2019-04-18 17:00 GMT

ಮಂಡ್ಯ, ಎ.18: ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ಮೈತ್ರಿ ಅಭ್ಯರ್ಥಿ ನಿಖಿಲ್ ಹಾಗೂ ಪಕ್ಷೇತರ ಅಭ್ಯರ್ಥಿ ಅಂಬರೀಷ್ ಸುಮಲತಾ ಅವರ ಸ್ಪರ್ಧೆಯಿಂದ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿವರ್ತಿತವಾಗಿರುವ ಮಂಡ್ಯದಲ್ಲಿ ಕೆಲವು ಸಣ್ಣಪುಟ್ಟ ಘಟನೆ ಹೊರತುಪಡಿಸಿ ಗುರುವಾರ ಶಾಂತಿಯುತ ಮತದಾನ ನಡೆಯಿತು.

ಆರಂಭದಲ್ಲಿ ಕೆಲವು ಮತಗಟ್ಟೆಗಳಲ್ಲಿ ಮತಯಂತ್ರಗಳ ದೋಷದಿಂದ ಮತದಾನ ಪ್ರಕ್ರಿಯೆ ವಿಳಂಬವಾಯಿತು. ಅಧಿಕಾರಿಗಳ ವಿರುದ್ಧ ಮತದಾರರು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ದೋಷ ಸರಿಪಡಿಸಿ ಮತದಾನ ಪ್ರಕ್ರಿಯೆ ಆರಂಭಿಸಿದರು.

ಬೇಸಗೆಯ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಮತದಾರರು ಹಕ್ಕು ಚಲಾಯಿಸಲು ಮತಗಟ್ಟೆ ಕಡೆಗೆ ತೆರಳಲಾರಂಭಿಸಿದರು. ಆರಂಭದಲ್ಲೇ ಹೆಚ್ಚು ಮತದಾರರು ಆಗಮಿಸಿದ್ದರಿಂದ ಮತ ಕೇಂದ್ರದಲ್ಲಿ ಸರತಿ ಸಾಲು ಉಂಟಾಯಿತು. ಬಿಸಿಲಿನಿಂದಾಗಿ ಮಧ್ಯಾಹ್ವ ಸ್ವಲ್ಪ ವಿಳಂಬವಾಯಿತು. ಆದರೆ, ನಾಲ್ಕು ಗಂಟೆ ನಂತರ ಮತದಾನ ಮತ್ತಷ್ಟು ಚುರುಕಾಯಿತು.

ಬೆಳಗ್ಗೆ 9 ಗಂಟೆ ವೇಳೆಗೆ ಶೇ.4.8ರಷ್ಟು ಮತದಾನವಾಗಿದ್ದರೆ, 11ರ ವೇಳೆಗೆ ಶೇ.18.96, ಮಧ್ಯಾಹ್ನ 1 ಗಂಟೆಗೆ 37.69ರಷ್ಟು, 3 ಗಂಟೆಗೆ ಶೇ.55.15 ಹಾಗೂ ಸಂಜೆ 5ರ ವೇಳೆಗೆ ಶೇ.71.75ರಷ್ಟು ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದು, ರಾತ್ರಿ 9 ರ ಮಾಹಿತಿಯಂತೆ ಕ್ಷೇತ್ರದಲ್ಲಿ ಶೇ.80.23 ಮತ ಚಲಾವಣೆಯಾಗಿದೆ. ರಾಜ್ಯದಲ್ಲೇ ಅತ್ಯಧಿಕ ಮತದಾನವಾದ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

5 ಗಂಟೆ ವೇಳೆಗೆ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.67.85, ಮದ್ದೂರಿನಲ್ಲಿ ಶೇ.75.56, ಮಂಡ್ಯದಲ್ಲಿ ಶೇ.67.74, ಶ್ರೀರಂಗಪಟ್ಟಣದಲ್ಲಿ ಶೇ.73, ಕೆ.ಆರ್.ಪೇಟೆಯಲ್ಲಿ ಶೇ.71.36, ನಾಗಮಂಗಲದಲ್ಲಿ ಶೇ.72.30, ಮೇಲುಕೋಟೆಯಲ್ಲಿ ಶೇ.77.91 ಹಾಗೂ ಕೆ.ಆರ್.ನಗರ ಕ್ಷೇತ್ರದಲ್ಲಿ ಶೇ.69.67ರಷ್ಟು ಮತ ಚಲಾವಣೆಯಾಗಿತ್ತು.

ಡಿ.ಎ.ಕೆರೆಯಲ್ಲಿ ಮಾತಿನ ಚಕಮಕಿ:
ಸುಮಲತಾ ಅಂಬರೀಷ್ ಅವರ ಗ್ರಾಮ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಮತಗಟ್ಟೆ ಬಳಿ ಸುಮಲತಾ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಸ್ವಲ್ಪ ಸಮಯ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಸುಮಲತಾ ಮತದಾನ ಮಾಡಲು ಆಗಮಿಸಿದ ಕೆಲವೇ ಸಮಯ ನಂತರ ನಿಖಿಲ್ ಮತಗಟ್ಟೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಇಬ್ಬರು ಸ್ಪರ್ಧಿಗಳ ಬೆಂಬಲಿಗರು ಪರಸ್ಪರ ಘೋಷಣೆ ಕೂಗಿದಾಗ ಮಾತಿನ ಚಕಮಕಿಗೆ ಕಾರಣವಾಯಿತು.

ಕೆಲವರು ಸುಮಲತಾ ವಿರುದ್ಧ ಘೋಷಣೆ ಹಾಕಿ, ಇದುವರೆಗೆ ಒಂದು ಬಾರಿಯೂ ಗ್ರಾಮಕ್ಕೆ ಆಗಮಿಸಿ ಮತ ಚಲಾಯಿಸದ ಸುಮಲತಾ, ಇವತ್ತು ಮತ ಹಾಕಲು ಬಂದಿದ್ದಾರೆಂದು ಟೀಕಿಸಿ ಘೋಷಣೆ ಹಾಕಿದರು. ಇದರಿಂದ ಕೆರಳಿದ ಸುಮಲತಾ ಬೆಂಬಲಿಗರು, ನಿಖಿಲ್ ಕುಮಾರಸ್ವಾಮಿ ಈ ಗ್ರಾಮದವರೇ ಅಲ್ಲ. ಅವರ ಮತ ಇಲ್ಲಿ ಇಲ್ಲ. ಆದರೂ, ಏಕೆ ಇಲ್ಲಿಗೆ ಬಂದಿದ್ದಾರೆ ಎಂದು ಪ್ರತಿಯಾಗಿ ಘೋಷಣೆ ಕೂಗಿದರು.

ಈ ಸಮಯದಲ್ಲಿ ಪರಸ್ಪರ ಘೋಷಣೆಗಳಿಂದಾಗ ಪರಸ್ಪರ ತಳ್ಳಾಟ, ನೂಕಾಟ ಪ್ರಾರಂಭವಾಯಿತು. ಹಲವು ಮುಖಂಡರು ಸಮಾಧಾನಿಸಲು ಪ್ರಯತ್ನಿಸಿದರು. ಆದರೂ, ಗಲಾಟೆ ವಿಕೋಪಕ್ಕೆ ತಿರುಗುವುದನ್ನು ಗಮನಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಸುಮಲತಾ ಏಜೆಂಟ್ ಮೇಲೆ ಹಲ್ಲೆ:
ಮಳವಳ್ಳಿ ವಿಧಾನಸಭಾ ಕ್ಷೇತ್ರದ ಬಸವನಪುರದಲ್ಲಿ ಸುಮಲತಾ ಬೆಂಬಲಿಗರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದ್ದು, ಸುಮಲತಾ ಚುನಾವಣಾ ಏಜೆಂಟ್ ಚನ್ನಬಸವಣ್ಣ ಎಂಬುವರ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಚನ್ನಬಸವಣ್ಣ ಅವರ ಶರ್ಟ್ ಹರಿದು ಮುಖಕ್ಕೆ ಗಾಯ ಆಗಿದೆ ಎನ್ನಲಾಗಿದೆ.

ಜೆಡಿಎಸ್ ಕಾರ್ಯಕರ್ತರು ವಯಸ್ಸಾದವರನ್ನು ಕರೆದುಕೊಂಡು ಹೋಗುತ್ತಾರೆ. ಆದರೆ, ಹಿರಿಯ ನಾಗರಿಕರಿಗೆ ವೋಟು ಹಾಕಲು ಅವಕಾಶ ಕೊಡದೆ ತಾವೇ ಮತದಾನ ಮಾಡುತ್ತಿದ್ದಾರೆ ಎಂದು ಸುಮಲತಾ ಬೆಂಬಲಿಗರು ಆರೋಪಿಸಿದ್ದಾರೆ. 

ಮಂಡ್ಯ ತಾಲೂಕಿನ ಬೇವುಕಲ್ಲು ಗ್ರಾಮದಲ್ಲಿ ಮೂವರು ವೃದ್ಧೆಯರು ಮೊಮ್ಮಕ್ಕಳ ಜತೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಗ್ರಾಮದ ಶತಾಯುಷಿ ಶಿವಮ್ಮ (102), ನಂಜಮ್ಮ (97) ಹಾಗೂ ನಾಗಮ್ಮ (92) ಅವರನ್ನು ಮೊಮ್ಮಕ್ಕಳು ಎತ್ತಿಕೊಂಡು ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಲು ಸಹಕರಿಸಿದರು.

ಪಾಂಡವಪುರ ತಾಲೂಕಿನ ಚಿಕ್ಕಮರಳಿ ಗ್ರಾಮದ ನಿವಾಸಿ ತಾಪಂ ಸದಸ್ಯೆ ಮಂಗಳಾ ನವೀನ್‍ಕುಮಾರ್ ತುಂಬು ಗರ್ಭಿಣಿಯಾಗಿದ್ದು, ಮತ ಚಲಾಯಿಸಿ ಮರಳಿದ ಕೆಲವೇ ನಿಮಿಷಗಳಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದರು. ವೈದ್ಯರು ಇಂದು ಹೆರಿಗೆಗೆ ದಿನಾಂಕ ನೀಡಿದ್ದರು. ಬೆಳಗ್ಗೆ 7.30ರಲ್ಲಿ ಮಂಗಳಾ ಪತಿಯೊಡನೆ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು. ಅಲ್ಲಿಂದ ಮನೆಗೆ ಹೋದ ಬೆನ್ನಲ್ಲೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಪಾಂಡವಪುರದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. 11.15ರಲ್ಲಿ ಮಂಗಳಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ.

ಸಚಿವರಾದ ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ಶಾಸಕರಾದ ಎಂ.ಶ್ರೀನಿವಾಸ್, ಸುರೇಶ್‍ಗೌಡ, ಡಾ.ಅನ್ನದಾನಿ, ನಾರಾಯಣಗೌಡ, ರವೀಂದ್ರ ಶ್ರೀಕಂಠಯ್ಯ, ಮಾಜಿ ಶಾಸಕರಾದ ಎನ್.ಚಲುವರಾಯಸ್ವಾಮಿ, ರಮೇಶ್‍ಬಾಬು ಬಂಡಿಸಿದ್ದೇಗೌಡ, ಕೆ.ಬಿ.ಚಂದ್ರಶೇಖರ್, ಪಿ.ಎಂ.ನರೇಂದ್ರಸ್ವಾಮಿ, ಮಧು ಮಾದೇಗೌಡ, ಕಲ್ಪನ ಸಿದ್ದರಾಜು, ಎಚ್.ಡಿ.ಚೌಡಯ್ಯ, ಎಚ್.ಬಿ.ರಾಮು, ಜಿ.ಬಿ.ಶಿವಕುಮಾರ್, ಪ್ರಭಾವತಿ ಜಯರಾಂ, ಇತರ ಗಣ್ಯರು ತಮ್ಮ ತಮ್ಮ ಗ್ರಾಮದ ಮತಗಟ್ಟೆಗಳಲ್ಲಿ ಹಕ್ಕು ಚಲಾಯಿಸಿದರು.

ಗೆಲ್ಲುವ ವಿಶ್ವಾಸವಿದೆ: ಸುಮಲತಾ
ಮದ್ದೂರು ತಾಲೂಕು ದೊಡ್ಡರಸಿನಕೆರೆಯ ಮತಗಟ್ಟೆಯಲ್ಲಿ ಮತಚಲಾಯಿಸಿ ಸುದ್ದಿಗಾರರ ಜತೆ ಮಾತನಾಡಿದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್, ನನ್ನ ಗ್ರಾಮದಲ್ಲಿ ನನಗೇ ನನ್ನ ಮತವನ್ನು ಪ್ರಥಮ ಬಾರಿಗೆ ಚಲಾಯಿಸಿದ್ದು ಅತ್ಯಂತ ಅವಿಸ್ಮರಣೀಯ ದಿನ ಎಂದರು.
ಮತದಾರರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸುತ್ತಿರುವುದು ಉತ್ತಮ ಬೆಳವಣಿಗೆ. ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಿ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನನಗೆ ಉತ್ತಮ ಬೆಂಬಲ ಸಿಗುತ್ತಿರುವುದು ಕ್ಷೇತ್ರ ಪರ್ಯಟನೆ ಮಾಡಿದಾಗ ತಿಳಿಯಿತು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಚಾರ ಸಂದರ್ಭದಲ್ಲಿ ಪ್ರತಿಸ್ಪರ್ಧಿ ಪಕ್ಷದವರು ಸರಿಯಾಗಿ ನಡೆದುಕೊಳ್ಳಲಿಲ್ಲ. ಅಭಿವೃದ್ಧಿ, ಇತರೆ ಸಕಾರಾತ್ಮಕ ವಿಷಯಗಳನ್ನು ಬಿಟ್ಟು ವೈಯಕ್ತಿಕ ತೇಜೋವಧೆಗೆ ಆದ್ಯತೆ ನೀಡಿದ್ದು ಬೇಸರ ತಂದಿದೆ. ಚುನಾವಣೆಗೆ ಹಿಂದಿನ ದಿನ ಮಳೆ ಬಂದು ಎಲ್ಲಾ ಕೊಳೆ ಕಳೆದು ಹೋಗಿದೆ ಎಂದು ಸುಮಲತಾ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ನಿಖಿಲ್ ಜಯ ನಿಶ್ಚಿತ: ಪುಟ್ಟರಾಜು ವಿಶ್ವಾಸ
ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಸ್ವಗ್ರಾಮ ಚಿನಕುರಳಿಯಲ್ಲಿ ಪತ್ನಿ ನಾಗಮ್ಮ ಜತೆ ತೆರಳಿ ಮತದಾನ ಮಾಡಿದರು. ಇದಕ್ಕೂ ಮುನ್ನ ಏರುಪೇರಿದ್ದ ಮತಯಂತ್ರವನ್ನು ಅಧಿಕಾರಿಗಳಿಂದ ಸರಿಪಡಿಸಿದರು.

ಬಳಿಕ ಮಾತನಾಡಿ, ನಿಖಿಲ್ ಬಹುಮತದಿಂದ ಜಯಗಳಿಸುವುದು ನಿಶ್ಚಿತ. ಜಿಲ್ಲೆಯ ಅಭಿವೃದ್ದಿಗಾಗಿ ಜಿಲ್ಲೆಯ ಜನರು ಸಿಎಂ ಪುತ್ರನ ಕೈ ಹಿಡಿಯಲಿದ್ದಾರೆ. ಚುನಾವಣೆಯಲ್ಲಿ ಕೆಲವೆಡೆ ಅಧಿಕಾರಿಗಳು ಉದ್ದಟತನ ತೋರುತಿದ್ದಾರೆ. ಕೆಲವೊಂದು ಕಡೆ ಮತಯಂತ್ರಗಳನ್ನು ಏರುಪೇರಾಗಿಸಿ ಗೊಂದಲ ಮೂಡಿಸಿದ ಆರೋಪ ಕೇಳಿ ಬಂದಿದೆ ಎಂದರು.

ಕಣದಲ್ಲಿ 22 ಅಭ್ಯರ್ಥಿಗಳಿದ್ದು, ಒಟ್ಟು 2,046 ಮತಗಟ್ಟೆಗಳಲ್ಲಿ 4092 ಬ್ಯಾಲೆಟ್ ಯೂನಿಟ್‍ಗಳನ್ನು ಬಳಸಲಾಯಿತು. 17,12,012 ಮತದಾರರಿದ್ದು, ಪುರುಷರು 8,54,758, ಮಹಿಳೆಯರು 8,56,285, ಇತರೆ 147, ಸೇವಾ ಮತದಾರರು 822 ಇದ್ದಾರೆ.

ಮತದಾನ ಕಾರ್ಯಕ್ಕೆ 9,904 ಅಧಿಕಾರಿ ಸಿಬ್ಬಂದಿ ನೇಮಿಸಲಾಗಿತ್ತು. ಕ್ಷೇತ್ರದಲ್ಲಿ 30 ಸಖಿ ಮತಗಟ್ಟೆಗಳು, 17 ವಿಶೇಷ ಚೇತನ ಸಿಬ್ಬಂದಿ ಮತಗಟ್ಟೆಗಳು, 20 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 444 ಸೂಕ್ಷ್ಮ, 132 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News