ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ: ಶೇ. 68.85 ರಷ್ಟು ಮತ ಚಲಾವಣೆ

Update: 2019-04-18 17:12 GMT

ಮೈಸೂರು,ಎ.18: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಪ್ರಜಾಪ್ರಭುತ್ವದ ಹಬ್ಬ ಯಾವುದೇ ಅಡ್ಡಿ ಆತಂಕವಿಲ್ಲದೆ ಸಂಭ್ರಮದಿಂದ, ಶಾಂತಿಯುತವಾಗಿ ನಡೆದಿದ್ದು, ಶೇ.68.85 ಮತ ಚಲಾವನೆಯಾಗಿದೆ.

ಮಡಿಕೇರಿಯಲ್ಲಿ ಶೇ.75, ವಿರಾಜಪೇಟೆ ಶೇ.70, ಪಿರಿಯಾಪಟ್ಟಣ ಶೇ78.6, ಹುಣಸೂರು ಶೇ.77.45, ಚಾಮುಂಡೇಶ್ವರಿ ಶೇ.69.44, ಕೃಷ್ಣರಾಜ ಶೆ.60.39, ಚಾಮರಾಜ ಶೇ.55.99, ಹಾಗೂ ನರಸಿಂಹರಾಜ ಕ್ಷೇತ್ರಗಳಲ್ಲಿ ಶೇ.56.55 ರಷ್ಟು ಮತದಾನವಾಗಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೂಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಹುಣಸೂರು ಮತ್ತು ಪಿರಿಯಾಪಟ್ಟಣದ ಕೆಲವು ಬೂತ್ ಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯರ್ತರ ನಡುವೆ ಮಾತಿನ ಚಕಮಕಿ ನಡೆದಿರುವುದು ಬಿಟ್ಟರೆ ಬೇರೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ.

ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾದ ಮತದಾನ ಪ್ರಕ್ರಿಯೆ ಮಧ್ಯಾಹ್ನದವರೆಗೆ ಬಿರುಸಿನಿಂದ ನಡೆಯಿತು. ಮಧ್ಯಾಹ್ನದ ನಂತರ ಬಿಸಿಲಿಗೆ ಮತದಾರರು ಮನೆಯಿಂದ ಹೊರಬರಲಿಲ್ಲ, ಸಂಜೆ 5 ಗಂಟೆಯಾಗುತ್ತಿದ್ದಂತೆ ಸಮರೋಪಾದಿಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಲು ಮತಗಟ್ಟೆಗಳಿಗೆ ಆಗಮಿಸಿ ಸಂಭ್ರಮದದೊಂದಿಗೆ ಮತ ಚಲಾಯಿಸಿದರು.

ಆಭ್ಯರ್ಥಿಗಳ ಭವಿಷ್ಯ ಇವಿಎಂ ಮತ್ತು ವಿ.ವಿ ಪ್ಯಾಟ್ ನಲ್ಲಿ ಭದ್ರವಾಗಿದ್ದು, ಜಿಲ್ಲೆ ಮತಗಟ್ಟೆ ಕೇಂದ್ರಗಳಿಗೆ ತೆರಳಿದ್ದ ಸಿಬ್ಬಂದಿಗಳನ್ನು ಕೆಎಸ್ಆರ್ಟಿಸಿ ಬಸ್ ಮೂಲಕ ಬಿಗಿ ಬಂದೋಬಸ್ತ್ ನಲ್ಲಿ ನಗರದ ಮಹಾರಾಣಿ ಕಾಲೇಜಿಗೆ ಕರೆತರುವ ಮೂಲಕ ಡಿಮಸ್ಟರಿಂಗ್ ಮಾಡಲಾಯಿತು.

ಸಚಿವ ಜಿ.ಟಿ ದೇವೇಗೌಡ ಸೇರಿದಂತೆ ಗಣ್ಯರ ಮತದಾನ: ಇಲವಾಲದ ಗುಂಗ್ರಾಲ್ ಛತ್ರದ ಬಳಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಮ್ಮ ಕುಟುಂಬ ಸಮೇತ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಹುಣಸೂರಿನ ಸರ್ಕಾರಿ ಕಾಲೇಜಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮತಚಲಾಯಿಸಿದರು.

ಶಾಸಕ ತನ್ವೀರ್ ಸೇಠ್ ನರಸಿಂಹರಾಜ ಕ್ಷೇತ್ರದ ಎಂ.ಐ.ಟಿ ಕಾಲೇಜಿನಲ್ಲಿ ಕುಟುಂಬ ಸಮೇತ ಆಗಮಿಸಿ ಮತ ಚಲಾಯಿಸಿದರು. ಊಟಿ ರಸ್ತೆಯಲ್ಲಿರುವ ಜೆ.ಎಸ್.ಎಸ್.ಕಾಲೇಜಿನಲ್ಲಿ ಸುತ್ತೂರು ಶ್ರೀಶಿವರಾತ್ರಿದೇಶಿಕೇಂದ್ರ ಸ್ವಾಮೀಜಿಗಳು ತಮ್ಮ ಹಕ್ಕನ್ನು ಚಲಾಯಿಸಿದರು. ಇದೇ ಪ್ರಥಮ ಬಾರಿಗೆ ಸುತ್ತೂರು ಮಠದ ಕಿರಿಯ ಶ್ರೀಗಳು ಮತಚಲಾಯಿಸುವ ಮೂಲಕ ಸಂತಸಪಟ್ಟರು. 

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಅಗ್ರಹಾರದಲ್ಲಿರುವ ಶ್ರೀಕಾಂತ ವಿದ್ಯಾಸಂಸ್ಥೆಯಲ್ಲಿ ಮತಚಲಾಯಿಸಿದರು. ಅದೇ ಮತಗಟ್ಟೆಯಲ್ಲಿ ಯದುವೀರ್ ಮತ್ತು ಪತ್ನಿ ತ್ರಿಷಿಕಾ ತಮ್ಮ ಹಕ್ಕನ್ನು ಚಲಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News