ಪ್ರಹ್ಲಾದ್ ಜೋಶಿ ಸುಳ್ಳಿನ ಸರದಾರ: ವಿನಯ್‌ ಕುಲಕರ್ಣಿ

Update: 2019-04-20 12:39 GMT

ಹುಬ್ಬಳ್ಳಿ, ಎ.20: ಹುಬ್ಬಳ್ಳಿ ನಗರವನ್ನು ಪ್ರತಿನಿಧಿಸುವ ಹಾಲಿ ಸಂಸದ ಪ್ರಹ್ಲಾದ್ ಜೋಶಿ ಯಾವುದೇ ಕೆಲಸ ಮಾಡಿಲ್ಲ. ಕೇವಲ ಸುಳ್ಳುಗಳನ್ನು ಹೇಳುತ್ತಾ ಇಷ್ಟು ವರ್ಷ ಕಾಲಹರಣ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಆರೋಪಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಸಂವಾದ ನಡೆಸಿದ ಅವರು, ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಹ್ಲಾದ್ ಜೋಶಿ ಒಮ್ಮೆಯೂ ಧ್ವನಿ ಎತ್ತಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ಎಸ್.ಯಡಿಯೂರಪ್ಪ ಪ್ರಧಾನಿ ನರೇದ್ರ ಮೋದಿಯನ್ನು ಭೇಟಿ ಮಡಿದಾಗ, ಅವರಿಗೆ ಮಾತನಾಡಲು ಅವಕಾಶ ಕಲ್ಪಿಸಲಿಲ್ಲವೆಂದು ಆರೋಪಿಸಿದರು.

ಜಿಲ್ಲೆಯಲ್ಲಿ ಲಿಂಗಾಯತ ಸಮುದಾಯವನ್ನು ನಿರಂತರವಾಗಿ ಒಡೆಯುವಂತಹ ಕೆಲಸವನ್ನು ಪ್ರಹ್ಲಾದ್ ಜೋಶಿ ಮಾಡುತ್ತಿದ್ದಾರೆ. ಅದಕ್ಕಾಗಿ ಅವರು ಒಂದು ತಂಡವನ್ನೆ ಕಟ್ಟಿದ್ದಾರೆ. ಜಿಲ್ಲೆಗೆ ಐಐಟಿ ಬರಲು ನಾನು ಶ್ರಮಿಸಿದ್ದೇನೆ. ಆದರೆ, ಅದಕ್ಕಾಗಿ ಜಿಲ್ಲೆಯಲ್ಲಿ 470ಎಕರೆ ಜಾಗ ಕೊಡಿಸಿದೆ. ಆದರೆ, ಇದನ್ನು ಪ್ರಹ್ಲಾದ್ ಜೋಶಿ ತನ್ನ ಸಾಧನೆಯೆಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡುವ ಸಂಬಂಧ ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡುತ್ತೇವೆಂದು ಬಿಜೆಪಿ ಭರವಸೆ ನೀಡಿತ್ತು. ಆದರೆ, ಅಧಿಕಾರಕ್ಕೆ ಬಂದ ನಂತರ ವೈಜ್ಞಾನಿಕ ಬೆಲೆ ನೀಡಿದರೆ ದೇಶದ ಆರ್ಥಿಕತೆ ಕುಸಿಯಲಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅಫಿಡೆವಿಟ್ ಸಲ್ಲಿಸಿದೆ. ಈ ಒಂದು ವಿಷಯದಿಂದಲೇ ಬಿಜೆಪಿಗೆ ರೈತರ ಮೇಲೆ ಎಷ್ಟು ಕಾಳಜಿ ಎಂದು ಗೊತ್ತಾಗುತ್ತದೆ ಎಂದು ಅವರು ವಾಗ್ದಾಳಿ ನಡೆಸಿದರು.

ಜನತೆ ನನ್ನನ್ನು ಆಯ್ಕೆ ಮಾಡಿದರೆ ಕ್ಷೇತ್ರದ ಎಲ್ಲ ಮನೆಗಳಿಗೂ ದಿನದ 24 ತಾಸು ನೀರು ಪೂರೈಕೆ. ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯನ್ನು ಆರು ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಚನ್ನಮ್ಮ ವೃತ್ತದ ಸಂಚಾಟ ದಟ್ಟಣೆ ಕಡಿಮೆ ಮಾಡಲಾಗುವುದು. ಜಿಲ್ಲೆಯ ಕೆರೆಗಳ ಹೂಳು ತೆಗೆಸಿ ನೀರು ತುಂಬಿಸುವುದು, ಬ್ಯಾರೇಜ್ ನಿರ್ಮಾಣ. ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ.

-ವಿನಯ್ ಕುಲಕರ್ಣಿ, ಕಾಂಗ್ರೆಸ್ ಅಭ್ಯರ್ಥಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News