'ನನಗೆ ಬಿಜೆಪಿ ಸೆಟ್ಟಾಗುತ್ತಿಲ್ಲ' ಎಂದ ಕಾಂಗ್ರೆಸ್ ತೊರೆದ ಉಮೇಶ್ ಜಾಧವ್

Update: 2019-04-20 14:10 GMT

ಕಲಬುರ್ಗಿ, ಎ. 20: ‘ಕಾರಜೋಳ ಅವರೆ ನನಗೆ ಬಿಜೆಪಿ ಸೆಟ್ಟಾಗುತ್ತಿಲ್ಲ, ಬಿಜೆಪಿ ಏನೆಂದು ಗೊತ್ತಾಗುತ್ತಿಲ್ಲ. ನಿಮ್ಮ ಕಾಲಿಗೆ ಬಿದ್ದು ಕೇಳುತ್ತೇನೆ, ನನಗೆ ಸಹಕಾರ ನೀಡಬೇಕು’ ಎಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಏರ್ಪಡಿಸಿದ್ದ ದಲಿತ ಸಮಾವೇಶದಲ್ಲಿ ಮಾತನಾಡಿದ ಅವರು, ನನಗೆ ಬಿಜೆಪಿ ಪಕ್ಷ ಸರಿಹೋಗುತ್ತಿಲ್ಲ. ನನ್ನ ಗೆಲುವಿಗೆ ನೀವು ಸಹಕಾರ ನೀಡಬೇಕು. ನಿಮ್ಮ ಕಾಲಿಗೆ ಬಿದ್ದು ಕೇಳಿಕೊಳ್ಳುವೆ ಎಂದು ಮಾಜಿ ಸಚಿವ ಕಾರಜೋಳ ಅವರಿಗೆ ಕೈಮುಗಿದು ಮನವಿ ಮಾಡುವ ಮೂಲಕ ಬಿಜೆಪಿ ಮುಖಂಡರಿಗೆ ಮುಜುಗರ ಸೃಷ್ಟಿಸಿದರು.

ಈ ಬಾರಿ ಚುನಾವಣೆಯಲ್ಲಿ ಪಕ್ಷವನ್ನು ನಂಬಿಕೊಂಡಿದ್ದರೆ ನನಗೆ ಸೋಲು ಖಚಿತ. ಆದುದರಿಂದ ನೀವು ನನ್ನ ಗೆಲುವಿಗೆ ಸಹಾಯ ಮಾಡಬೇಕು. ಅನೇಕ ನಿವೃತ್ತ ಐಎಎಸ್ ಅಧಿಕಾರಿಗಳು ನನಗೆ ಚುನಾವಣೆಯಲ್ಲಿ ನಿಲ್ಲುವಂತೆ ಹೇಳಿದರು. ಖರ್ಗೆ ಅವರು ನಮಗೆ ಬಹಳ ನೋವುಂಟು ಮಾಡಿದ್ದಾರೆ. ಅದಕ್ಕೆ ನೀವು ಚುನಾವಣೆಗೆ ನಿಲ್ಲಬೇಕು. ನಾವೆಲ್ಲರು ನಿಮಗೆ ಸಹಕಾರ ನೀಡುತ್ತೇವೆ ಎಂದು ಅವರು ಹೇಳಿದ್ದರು. ಹೀಗಾಗಿ ಸ್ಪರ್ಧಿಸಿದ್ದೇನೆ ಎಂದರು.

ನಾನು ಜನರ ಪ್ರತಿನಿಧಿ. ನಮ್ಮ ಮನೆಗೆ ನೀವು ದಿನದ 24 ಗಂಟೆಯಲ್ಲಿ ಯಾವ ಸಮಯದಲ್ಲಿ ಬೇಕಾದರೂ ಬಂದು ತಮ್ಮ ಕೆಲಸ-ಕಾರ್ಯಗಳನ್ನು ಮಾಡಿಕೊಳ್ಳಬಹುದು. ಕ್ಷೇತ್ರದ ಎಲ್ಲ ಮತದಾರರು ನನಗೆ ಬೆಂಬಲ ನೀಡಬೇಕು ಎಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News